

ಹೂವಿನಹಡಗಲಿ: ನೀರುಗಂಟಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ಸಣ್ಣನೀರಾವರಿ ಅಂತರ್ಜಲ ಅಭಿವೃದ್ಧಿ ಇಲಾಖೆಯ ಉಪವಿಭಾಗ ಕಚೇರಿ ಮುಂಭಾಗದಲ್ಲಿ ಸಣ್ಣ ಏತ ನೀರಾವರಿ ಯೋಜನೆ ಹಾಗೂ ನಿರ್ವಾಹಕರು ಮತ್ತು ನೀರುಗಂಟಿ, ದಿನಗೂಲಿ ನೌಕರರ ಸಂಘದಿಂದ ಮಂಗಳವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಲಾಯಿತು.
ಸಂಘದ ಸದಸ್ಯರು ಮಾತನಾಡಿ, ಅನೇಕ ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನಮಗೆ ವೇತನ ನೀಡಲು ತಾರತಮ್ಯ ಮಾಡಲಾಗುತ್ತಿದೆ. ಸಮರ್ಪಕ ವೇತನ ನೀಡದೆ ಸಮಯಕ್ಕೆ ಸರಿಯಾಗಿ ಪಿಎಫ್, ಇಎಸ್‌ಐಗಳನ್ನು ತುಂಬುತ್ತಿಲ್ಲ.
2024-25ರ ವರಗೆ ಕಾರ್ಯ ನಿರ್ವಹಿಸಿದರೂ 5 ತಿಂಗಳ ಕಾಲದ ವೇತನ ನೀಡಿಲ್ಲ. ನಮಗೆ 12 ತಿಂಗಳ ವೇತನ, ಗುತ್ತಿಗೆದಾರರು ನೀಡಬೇಕಾದ ಸೌಲಭ್ಯಗಳನ್ನು ನೀಡಿಲ್ಲ. ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಮನವಿ ನೀಡಿ ಪ್ರತಿಭಟನೆ ಮಾಡಿದರೂ ಅಧಿಕಾರಿಗಳು ನಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಪ್ರತಿ ತಿಂಗಳು ಸಭೆ ಕರೆದು ಸಮಸ್ಯೆಗಳಿಗೆ ಸ್ಪಂದಿಸಬೇಕು. ಕಾರ್ಮಿಕರು ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ವಸತಿ, ವಿದ್ಯುತ್, ಜೀವರಕ್ಷಣಾ ಸಲಕರಣೆ, ಇತರೆ ಸೌಲಭ್ಯಗಳನ್ನು ನೀಡಬೇಕು. 24 ತಾಸು ವಿದ್ಯುತ್ ಇರುವ ಭಾಗದಲ್ಲಿ ನಾಲ್ಕು ಸಿಬ್ಬಂದಿ ನೇಮಿಸಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತ ಆದೇಶ ನೀಡಿದರೆ ಪ್ರತಿಭಟನೆಯಿಂದ ಹಿಂದೆ ಸರಿಯುತ್ತೇವೆ ಎಂದರು.
ಪ್ರಮುಖರಾದ ಸಹಕಾರ್ಯದರ್ಶಿ ಹನುಮಂತ, ಸದಸ್ಯರಾದ ಖಾಸಿಂಸಾಬ್, ಮೈಲಾರಪ್ಪ, ದೇವೇಂದ್ರಪ್ಪ, ನೀಲನಗೌಡ, ವೀರಣ್ಣ, ಚನ್ನಪ್ಪ, ಪಾಂಡುನಾಯ್ಕ, ಉಮೇಶನಾಯ್ಕ ಇತರರಿದ್ದರು.