

ಮಂಡ್ಯ: ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪ್ರತೀ ಸೋಮವಾರ ಸಾರ್ವಜನಿಕರ ಕುಂದುಕೊರತೆ ಸಭೆಗಳನ್ನು ಆಯೋಜಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸೂಚನೆ ನೀಡಿದ್ದಾರೆ.
ಸಾರ್ವಜನಿಕರು ಸರ್ಕಾರಿ ಕೆಲಸಗಳಿಗೆ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಹಾಗೂ ನಿಗದಿತ ಅವಧಿಯೊಳಗೆ ಸಾರ್ವಜನಿಕರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪ್ರತೀ ಸೋಮವಾರ ಸಾರ್ವಜನಿಕ ಕುಂದು ಕೊರತೆ ಸಭೆಗಳನ್ನು ಆಯೋಜಿಸುವಂತೆ ಪಿಡಿಒಗಳಿಗೆ ತಿಳಿಸಲಾಗಿದೆ.
ಕುಡಿಯುವ ನೀರು, ರಸ್ತೆ, ಬೀದಿ ದೀಪ, ಸ್ವಚ್ಛತೆ ಸೇರಿದಂತೆ ಗ್ರಾ.ಪಂ ವ್ಯಾಪ್ತಿಗೆ ಬರುವ ಇತರೆ ಎಲ್ಲ ವಿಷಯಗಳ ಬಗ್ಗೆ ಗ್ರಾ.ಪಂ ಅಧಿಕಾರಿಗಳಿಗೆ ಮನವಿ ಅಥವಾ ದೂರು ಸಲ್ಲಿಸಬಹುದಾಗಿದೆ. ಅದರಂತೆ ಪಿಡಿಒಗಳು ಅರ್ಜಿ ಕುರಿತು ನಿಗದಿತ ಕಾಲಮಿತಿಯೊಳಗೆ ಕ್ರಮ ತೆಗೆದುಕೊಳ್ಳಬೇಕು. ಸಾರ್ವಜನಿಕ ಕುಂದು ಕೊರತೆ ಸಭೆಗಳ ಕುರಿತು ಮೇಲ್ವಿಚಾರಣೆ ನಡೆಸಲು ಜಿಪಂ ಕಚೇರಿಯ ಅಧಿಕಾರಿಗಳನ್ನು ತಾಲೂಕು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜನೆ ಮಾಡಲಾಗಿದೆ. ಇವರು ತಮ್ಮ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಯಲ್ಲಿ ಸಭೆ ಆಯೋಜಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳಲಿದ್ದಾರೆ. ಇದಲ್ಲದೆ ಗ್ರಾ.ಪಂ ಮಾದರಿಯಲ್ಲೇ ಜಿಪಂ ಮತ್ತು ತಾಪಂ ಕಚೇರಿಯಲ್ಲಿಯೂ ಪ್ರತೀ ಸೋಮವಾರ ಮಧ್ಯಾಹ್ನ 3 ಗಂಟೆಯಿಂದ 6 ರವರೆಗೂ ಸಭೆ ಆಯೋಜಿಸಲಾಗುತ್ತಿದೆ. ಈ ವೇಳೆ ಎಲ್ಲ ಅಧಿಕಾರಿಗಳು ಹಾಜರಿರಲಿದ್ದಾರೆ ಎಂದು ಸಿಇಒ ತಿಳಿಸಿದ್ದಾರೆ.