ಶ್ರೀಗಳ ಬದುಕಿನ ಪ್ರತಿಕ್ಷಣವೂ ಅಧ್ಯಾತ್ಮದ ಸಿಂಚನ

Every moment of the life of the saints is a source of spirituality.
ತೇರದಾಳ ತಾಲೂಕಿನ ಹಳಿಂಗಳಿ ಗ್ರಾಮದ ಸಿದ್ಧಲಿಂಗೇಶ್ವರ ಕಮರಿಮಠದಲ್ಲಿ ಶರಣಬಸವೇಶ್ವರರ ಪುಣ್ಯಾರಾಧನೆ ಮಹೋತ್ಸವಕ್ಕೆ ಮೂರು ಸಾವಿರಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಗಳು ಚಾಲನೆ ನೀಡಿದರು. ಶಿವಾನಂದ ಶ್ರೀ, ಗುರುಸಿದ್ಧೇಶ್ವರ ಶ್ರೀ, ಅಭಿನವ ಕಾಡಸಿದ್ಧೇಶ್ವರ ಶ್ರೀ ಮತ್ತಿತರರಿದ್ದಾರೆ.
Published on

ತೇರದಾಳ: ಅಧ್ಯಾತ್ಮದೊಂದಿಗೆ ಶಿಕ್ಷಣಕ್ಕೆ ಪ್ರಾಮುಖ್ಯ ನೀಡಿ ಸಂಸ್ಕೃತಿಯ ಉಳಿವಿಗೆ ಅವಿರತವಾಗಿ ಶ್ರಮಿಸುತ್ತಿರುವ ಶಿವಾನಂದ ಶ್ರೀಗಳ ಕಾರ್ಯ ಶ್ಲಾಘನೀಯವಾಗಿದೆ ಎಂದು ಹುಬ್ಬಳ್ಳಿ ಹಾನಗಲ್ ಜಗದ್ಗುರು ಮೂರು ಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಗಳು ಹೇಳಿದರು.

ಸಮೀಪದ ಹಳಿಂಗಳಿ ಗ್ರಾಮದ ಸಿದ್ಧಲಿಂಗೇಶ್ವರ ಕಮರಿಮಠದ ಲಿಂಗೈಕ್ಯ ಶರಣಬಸವೇಶ್ವರ ಮಹಾರಾಜರ 42ನೇ ಪುಣ್ಯಾರಾಧನೆ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಸಮಾಜ ನಿರ್ಮಾಣದಲ್ಲಿ ಮಠ-ಮಾನ್ಯಗಳ ಕೊಡುಗೆ ಅನನ್ಯವಾಗಿವೆ. ಪೂಜ್ಯ ಶರಣಬಸವೇಶ್ವರರು ಪವಾಡ ಪುರುಷರಾಗಿದ್ದು, ಅವರ ಬದುಕಿನ ಪ್ರತಿಕ್ಷಣವೂ ಆಧ್ಯಾತ್ಮಿಕ ಸಿಂಚನ ಪಸರಿಸುತ್ತದೆ ಎಂದರು.

ರಬಕವಿ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಮಾತನಾಡಿ, ಗುರುವಿನ ನಾಮಸ್ಮರಣೆಯಿಂದ ಮಾತ್ರ ಜನ್ಮವು ಪಾವನವಾಗಲು ಸಾಧ್ಯ. ಹಾಗಾಗಿ ಮಠದ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಭಕ್ತರ ಮೇಲಿದೆ ಎಂದರು.

ಗುಳೇದಗುಡ್ಡ ಮರಡಿಮಠದ ಅಭಿನವ ಕಾಡಸಿದ್ಧೇಶ್ವರ ಶಿವಾಚಾರ್ಯರು, ಹೂವಿನಹಿಪ್ಪರಗಿ ಪತ್ರಿವನ ಮಠದ ಮಾತೋಶ್ರೀ ದಾಕ್ಷಾಯಣಿ ದೇವಿ, ಜಕನೂರಿನ ಸಿದ್ಧಲಿಂಗದೇವರು, ಹನಗಂಡಿಯ ರಾಮಾನಂದ ಅವಧೂತಾಶ್ರಮದ ಚಿದಾನಂದ ಅವಧೂತರು ಮಾತನಾಡಿದರು. ಸಾಧಕರಿಗೆ ಶರಣ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶ್ರೀಮಠದ ಉತ್ತರಾಧಿಕಾರಿ ಶರಣಬಸವ ದೇವರು ಪ್ರತಿದಿನ ಪ್ರವಚನ ನೀಡಿದರು. ನಿರಂತರ ಐದು ದಿನಗಳವರೆಗೆ ಜರುಗಿದ ಜಾತ್ರೆಯಲ್ಲಿ ಆರೋಗ್ಯ ಗೋಷ್ಠಿ, ನೇಗಿಲ ನಮನ, ಬುತ್ತಿಯಾತ್ರೆ ಸೇರಿ ಹಲವು ಕಾರ್ಯಕ್ರಮಗಳು ಮೆರುಗು ನೀಡಿದವು.

ಜಾತ್ರಾ ಅಂಗವಾಗಿ ಪ್ರತಿದಿನ ಬೆಳಗ್ಗೆ ವಿಶೇಷ ಪೂಜಾದಿಗಳು ಜರುಗಿದವು. ಶ್ರೀಗಳ ಪಾದಪೂಜೆ, ಭಜನೆ, ಸದ್ಭಕ್ತರಿಂದ ಓಂಕಾರ ಪಠಣ, ರಕ್ತದಾನ ಶಿಬಿರ, ಮಕ್ಕಳ ನಾಟ್ಯ ಸಂಜೆ, ಜಂಗೀ ನಿಕಾಲಿ ಕುಸ್ತಿ ನಡೆದವು. ಐದು ದಿನಗಳ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಅಷ್ಟಮಠಗಳ ಸದ್ಭಕ್ತರು ಸೇರಿ ಸಹಸ್ರಾರು ಜನರು ಭಾಗಿಯಾಗಿದ್ದರು. ಪ್ರತಿದಿನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net