

ರಾಯಚೂರು: ಪ್ರತಿ ಭಾಷೆಗೂ ಅದರದ್ದೇ ಆದ ಸಾಮಾಜಿ, ಮಾನಸಿಕ ರಚನೆ ಇರುವುದರಿಂದ ಆಡುವ ಭಾಷೆ ಭಾಷಿಕ ರಚನೆಯಾಗಿರುತ್ತದೆ ಎಂದು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿವಿ ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ.ಬಸವರಾಜ ಕೋಡಗಂಟಿ ಹೇಳಿದರು.
ಸ್ಥಳೀಯ ರಾಯಚೂರು ವಿವಿ ಸಭಾಂಗಣದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ಕಾವ್ಯ ಮೀಮಾಂಸೆಗೆ ಪ್ರೊ.ಕೆ.ಕೃಷ್ಣಮೂರ್ತಿ ಕೊಡುಗೆ ಕುರಿತು ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರೊ.ಕೆ.ಕೃಷ್ಣಮೂರ್ತಿ ಕನ್ನಡ ಕಾವ್ಯ ಮೀಮಾಂಸೆಗೆ ಸಂಬಂಸಿದಂತೆ ತೀ.ನಂ.ಶ್ರೀಕಂಠಯ್ಯನವರಷ್ಟೇ ಮಹತ್ವದ ವ್ಯಕ್ತಿಯಾಗಿದ್ದಾರೆ. ಕನ್ನಡ ಕಾವ್ಯ ಮೀಮಾಂಸೆ ಅಂದರೆ ಬದುಕನ್ನು ಕಟ್ಟಿಕೊಳ್ಳುವುದಾಗಿದ್ದು, ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಕಾವ್ಯ ಮೀಮಾಂಸೆಯನ್ನು ಓದಬೇಕು ಎಂದು ಹೇಳಿದರು.
ಉಜಿರೆಯ ಎಸ್‌ಡಿಎಂ ಕಾಲೇಜು ಪ್ರಾಧ್ಯಾಪಕ ಪ್ರೊ.ರಾಜಶೇಖರ ಹಳೆಮನೆ ಮಾತನಾಡಿ, ಗಂಗಾಧರ ಚಿತ್ತಾಲರು ಕಾವ್ಯವನ್ನು ಕೇವಲ ಕಾವ್ಯವನ್ನಾಗಿ ಸ್ವೀಕಾರ ಮಾಡದೆ ಅದನ್ನು ಬದುಕಿನಲ್ಲಿ ಅಂರ್ತಗತವಾಗಿ ತೆಗೆದುಕೊಂಡು ಹೋದರು. ಹೀಗಾಗಿ ಅವರ ಬದುಕು ಬೇರೆಯಲ್ಲ, ಅವರ ಅಂತರಂಗ ಬೇರೆಯಲ್ಲ. ಹೀಗಾಗಿ ಚಿತ್ತಾಲರ ಭಾಷೆ, ಲಯ, ಚಿತ್ರಣ, ಜೀವಸತ್ವ ಆಳವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಯಚೂರು ವಿವಿ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಮಾತನಾಡಿ, ಸಮಾಜದಲ್ಲಿ ಆಗುತ್ತಿರುವ ಅನ್ಯಾಯ ತಿಳಿಯಲು, ಯಾವುದೇ ವಿಷಯಕ್ಕೆ ಸಂಬಂಸಿದ ಪ್ರಚಲಿತ ವಿದ್ಯಮಾನಗಳನ್ನು ತಿಳಿಯಲು ಸಾಹಿತ್ಯವನ್ನು ಓದಬೇಕು. ಸಾಹಿತ್ಯ ಓದುವ ರುಚಿಯಿದ್ದಾಗ ಮಾತ್ರ ಪ್ರತಿಯೊಬ್ಬರಲ್ಲೂ ಕಾಲ್ಪನಿಕ, ಯೋಚನಾ ಶಕ್ತಿ ಹೆಚ್ಚುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯ ಡಾ.ಚಿದಾನಂದ ಸಾಲಿ, ವಿವಿ ಕುಲಸಚಿವ ಪ್ರೊ.ಎಂ.ವಿಶ್ವನಾಥ, ವೌಲ್ಯಮಾಪನ ಕುಲಸಚಿವ ಪ್ರೊ.ಎಂ.ಯರ‌್ರಿಸ್ವಾಮಿ, ಕಲಾನಿಯಕಾದ ಡೀನ್ ಪ್ರೊ.ಪಿ.ಭಾಸ್ಕರ್, ಗಂಗಾವತಿಯ ಉಪನ್ಯಾಸಕ ಪವನಕುಮಾರ ಗುಂಡೂರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.