ಪ್ರತಿಯೊಬ್ಬ ಹಿಂದು ‘ಸಿಂಧೂರ’ ಧರಿಸಲಿ

9 ylp 3
Published on

ಯಲ್ಲಾಪುರ: ನಮ್ಮ ಸನಾತನ ಧರ್ಮದ ಸಂಸ್ಕಾರದ ಮೌಲ್ಯದ ಬಗ್ಗೆ ಜಿಜ್ಞಾಸೆ, ಚಿಂತನೆ ಮಾಡದೆ ಶ್ರದ್ಧೆ ಮತ್ತು ನಂಬಿಕೆಯಿಂದ ಪಾಲಿಸಿದರೆ ಉತ್ತಮ ಶ್ರೇಯಸ್ಸು ಲಭಿಸುತ್ತದೆ ಎಂದು ವಿದ್ಯಾವಾಚಸ್ಪತಿ ವಿ.ಉಮಾಕಾಂತ ಭಟ್ಟ ಕೆರೆಕೈ ಹೇಳಿದರು.

ತಾಲೂಕಿನ ನಂದೊಳ್ಳಿ ಸಮೀಪದ ಕೋಣೆಮನೆಯಲ್ಲಿ ಉಪನಯನ ಹಾಗೂ ಕನ್ಯಾ ಸಂಸ್ಕಾರದ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಮಂಗಲನಿಧಿ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಪ್ರತಿಯೊಬ್ಬ ಹಿಂದು ಸಿಂಧೂರ ಧರಿಸಲೇಬೇಕು. ಅದು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಉಪನಯನ ಹಾಗೂ ಕನ್ಯಾ ಸಂಸ್ಕಾರಗಳು ಮರು ಜನ್ಮ ನೀಡುತ್ತದೆ ಎಂದರು.

ಶಾಲೆಗಳು ಕಟ್ಟಡಗಳಾಗಬಾರದು. ಅವು ಸಂಸ್ಕಾರ ನೀಡುವ ಕೇಂದ್ರಗಳಾಗಬೇಕು. ಅನೇಕರಿಗೆ ತಮ್ಮ ಮಕ್ಕಳು ಜನಿವಾರವನ್ನು ಸೂಟ್​ಕೇಸಿನಲ್ಲಿ ತೆಗೆದಿಟ್ಟಾಗ ಏನೂ ಅನಿಸಿಲ್ಲ. ಆದರೆ, ಇತ್ತೀಚೆಗೆ ನಡೆದ ಜನಿವಾರ ತೆಗೆಸಿದ ಪ್ರಕರಣ ಮಹತ್ವ ಪಡೆದಿದೆ. ಬ್ರಾಹ್ಮಣನಾಗಿ ಹುಟ್ಟಿದವನು ಬ್ರಾಹ್ಮಣತ್ವ ಉಳಿಸಿಕೊಂಡು ಮುನ್ನಡೆಯುವ ಮಹತ್ವದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಸನಾತನ ಧರ್ಮದಲ್ಲಿ ಬ್ರಾಹ್ಮಣರು ಹೇಗೆ ಸಾಗಬೇಕೆನ್ನುವುದನ್ನು ಸ್ಪಷ್ಟಪಡಿಸಲಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ದಾಂಡೇಲಿ ವಿಭಾಗದ ಮುಖ್ಯಸ್ಥ ದತ್ತಾತ್ರೇಯ ಭಟ್ಟ ಶೇವ್ಕಾರ ಮಂಗಲ ನಿಧಿ ಸ್ವೀಕರಿಸಿ, ಮಂಗಲ ಕಾರ್ಯಕ್ರಮದಲ್ಲಿ ನಾವು ಅತಿಯಾದ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದೇವೆ. ಅದನ್ನು ಸಂಪೂರ್ಣವಾಗಿ ನಿಷೇಧಿಸುವ ಪರಂಪರೆ ನಮ್ಮದಾಗಬೇಕು ಎಂದರು.

ಗೋಮಂಗಲ ನಿಧಿಯನ್ನು ರಾಮಕೃಷ್ಣ ಕವಡಿಕೆರೆ ಸ್ವೀಕರಿಸಿದರು. ಮಹಾಬಲೇಶ್ವರ ಭಟ್ಟ ಬೆಳಸೇರು ದೇಶಭಕ್ತಿಗೀತೆ ಪ್ರಸ್ತುತಪಡಿಸಿದರು. ವೇ.ನಾಗರಾಜ ಭಟ್ಟ ಸ್ವಾಗತಿಸಿದರು. ವಿಶ್ವದರ್ಶನ ಪಿಯು ಕಾಲೇಜು ಪ್ರಾಚಾರ್ಯ ಡಾ.ಡಿ.ಕೆ. ಗಾಂವ್ಕರ ನಿರ್ವಹಿಸಿದರು. ಹರಿಪ್ರಕಾಶ ಕೋಣೆಮನೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net