

ಬಾಗಲಕೋಟೆ: ಕಳೆದ ವರ್ಷ ಸಮರ್ಪಕವಾಗಿ ಮಳೆಯಾಗದೆ ಆವರಿಸಿದ ಬರದ ಛಾಯೆ ಪರಿಣಾಮ ಈಗ ಗೋಚರಿಸುತ್ತಿದೆ. ಮುಖ್ಯವಾಗಿ ಕೊಳವೆಬಾವಿ ನಂಬಿ ಕೃಷಿ ಮಾಡುತ್ತಿರುವ ರೈತರ ಜಮೀನಿನಲ್ಲಿ ಬರದ ಎಫೆಕ್ಟ್ ಜೋರಾಗಿ ಕಾಣಿಸಿಕೊಂಡಿದೆ.
ಮುಂಗಾರು, ಹಿಂಗಾರು ಮಳೆ ಕೈ ಕೊಟ್ಟಿದ್ದರಿಂದ ಮಳೆ ಆಶ್ರಿತ ವ್ಯವಸಾಯ ಸಂಪೂರ್ಣ ನಷ್ಟಕ್ಕೆ ಸಿಲುಕಿದೆ. ಅನೇಕ ರೈತರು ಟ್ಯಾಂಕರ್ ನೀರು ಮೂಲಕ ಬೆಳೆ ಉಳಿಸಿಕೊಳ್ಳಲು ಹರಸಾಹಸಪಟ್ಟರೂ ಫಸಲು ಕೈ ಕೊಟ್ಟಿದೆ.
ಅಂತರ್ಜಲ ಮಟ್ಟ ನಿತ್ಯವೂ ಪಾತಾಳಕ್ಕೆ ಕುಸಿಯುತ್ತಿದ್ದು, ಕೊಳವೆಬಾವಿ ನಂಬಿ ಕೃಷಿ ಮಾಡುವ ರೈತರಲ್ಲಿ ಆತಂಕದ ಕಾರ್ಮೋಡ ಆವರಿಸಿದೆ.
9.24 ಮೀಟರ್ ಇಳಿಕೆ: ಜಿಲ್ಲೆಯಲ್ಲಿ 2023ರ ಜನವರಿಯಲ್ಲಿ ಭೂಮಿ ಮಟ್ಟದಿಂದ 12.44 ಮೀಟರ್ ಆಳದಲ್ಲಿದ್ದ ಅಂತರ್ಜಲ ಮಟ್ಟ 2024 ಜನವರಿ ತಿಂಗಳಲ್ಲಿ 21.68 ಮೀಟರ್‌ಗೆ ಇಳಿದಿದೆ. 9.24 ಮೀಟರ್ ಇಳಿಕೆಯಾಗಿದೆ. ಮುಖ್ಯವಾಗಿ ಬಾದಾಮಿ, ಗುಳೇದಗುಡ್ಡ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 18.17 ಮೀಟರ್‌ಗೆ ಕುಸಿತವಾಗಿದ್ದರೆ, ಬಾಗಲಕೋಟೆ, ಮುಧೋಳ ತಾಲೂಕಿನಲ್ಲಿ 14.30 ಮೀಟರ್, ಬೀಳಗಿ ತಾಲೂಕಿನಲ್ಲಿ 4.34 ಮೀಟರ್, ಹುನಗುಂದ ತಾಲೂಕಿನಲ್ಲಿ 1.64 ಮೀಟರ್, ಇಳಕಲ್ಲ ತಾಲೂಕಿನಲ್ಲಿ 3.30 ಮೀಟರ್, ಜಮಖಂಡಿ 6.34, ರಬಕವಿ-ಬನಹಟ್ಟಿ ತಾಲೂಕಿನಲ್ಲಿ 11.39 ಮೀಟರ್‌ನಷ್ಟು ಅಂತರ್ಜಲ ಮಟ್ಟ ಕುಸಿದಿದೆ.
ಜಿಲ್ಲೆಯ ಬಾದಾಮಿ, ಹುನಗುಂದ, ಗುಳೇದಗುಡ್ಡ ತಾಲೂಕಿನ ಅನೇಕ ಗ್ರಾಮಗಳಿಗೆ ಕೊಳವೆಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ. ಬರ ಹಾಗೂ ಬೇಸಿಗೆ ಬಿಸಿಲಿನ ಹೊಡೆತಕ್ಕೆ ಕೊಳವೆ ಬಾವಿಗಳು ಕೈಕೊಟ್ಟರೆ ಪರಿಸ್ಥಿತಿ ಬಿಗಡಾಯಿಸಲಿದೆ. ಸದ್ಯಕ್ಕೆ ದೊಡ್ಡಮಟ್ಟದ ಸಮಸ್ಯೆ ಇಲ್ಲವಾದರೂ ಏಪ್ರಿಲ್, ಮೇ ತಿಂಗಳಿನಲ್ಲಿ ಕೈ ಕೊಡುವ ಲಕ್ಷಣ ಹೆಚ್ಚಾಗಿದೆ. ಹೊಸ ಕೊಳವೆ ಬಾವಿಗಳನ್ನು ತೋಡಿದರೂ ನೀರು ದೊರೆಯುವುದು ಕಷ್ಟಸಾಧ್ಯ ಎನ್ನುತ್ತಾರೆ ಅಂತರ್ಜಲ ತಜ್ಞರು. ಭೀಕರ ಬರ ಜಿಲ್ಲೆಯ ಕೃಷಿ ಕ್ಷೇತ್ರ ತಲ್ಲಣಿಸುವಂತೆ ಮಾಡಿದೆ. ಜಿಲ್ಲೆಯ ಬಹುತೇಕ ಭಾಗದಲ್ಲಿ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಕೃಷಿ, ಕುಡಿಯುವ ನೀರು ಹಾಗೂ ನಿತ್ಯ ಬಳಕೆಗೂ ಬಿಕ್ಕಟ್ಟು ಸೃಷ್ಟಿಯಾಗಿದೆ. ಅತಿವೃಷ್ಟಿಗೆ ಏರಿಕೆ 2019 ರಲ್ಲಿ ಉಂಟಾದ ಪ್ರವಾಹ, ಅತಿವೃಷ್ಟಿಯಿಂದ ಜಿಲ್ಲೆಯ ಬಹುತೇಕ ಭಾಗದಲ್ಲಿ ಅಂತರ್ಜಲ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿತ್ತು. ನಂತರದ ವರ್ಷಗಳಲ್ಲಿ ಕ್ಷೀಣಿಸಿತು. ಈ ವರ್ಷ ಬರದ ಕರಿನೆರಳಿಗೆ ಅಂತರ್ಜಲ ಮಟ್ಟ ಬಹಳಷ್ಟು ಇಳಿಕೆಯಾಗಿದೆ.
ಇದಕ್ಕೆ ಪರಿಹಾರವೇನು?: ಅಂತರ್ಜಲಮಟ್ಟ ಹೆಚ್ಚಳಕ್ಕೆ ಅನೇಕ ಮಾರ್ಗೋಪಾಯಗಳು ಕಣ್ಣು ಮುಂದೆ ಇವೆ. ವಾಸ್ತವದಲ್ಲಿ ಅನುಷ್ಠಾನಕ್ಕೆ ತರುವಲ್ಲಿ ಸಾಧ್ಯವಾಗುತ್ತಿಲ್ಲ. ಮಳೆಯಾದ ಸಂದರ್ಭದಲ್ಲಿ ನೀರನ್ನು ಇಂಗಿಸುವ ಪ್ರಯತ್ನ ಮಾಡಬೇಕು. ಅಲ್ಲಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಬೇಕು. ಮಿತವಾಗಿ ನೀರಿನ ಬಳಕೆ ಮಾಡಬೇಕು. ಹನಿ ನೀರಾವರಿ ಪದ್ಧತಿ ಅಧಿಕ ಪ್ರಮಾಣದಲ್ಲಿ ಅಳವಡಿಸಿಕೊಳ್ಳಬೇಕು. ಕೆರೆ, ಕಟ್ಟೆ, ಬಾಂದಾರ, ಬ್ಯಾರೇಜ್‌ಗಳನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು. ಮಳೆ ನೀರು ಕೊಯ್ಲು ಮಾಡಬೇಕು. ಕೃಷಿ, ಕೈಗಾರಿಕೆ, ಮನೆಗಳಿಗೆ ಬೋರವೆಲ್ ನೀರು ಬಳಕೆ ಕಡಿಮೆ ಆಗಬೇಕು. ಒಟ್ಟಾರೆ ಹರಿಯುವ ನೀರನ್ನು ನಿಲ್ಲಿಸಬೇಕು. ನಿಲ್ಲಿಸಿದ ನೀರನ್ನು ಇಂಗಿಸಬೇಕು ಎನ್ನುತ್ತಾರೆ ಜಲ ತಜ್ಞರು.
ಸರಾಸರಿ ಅಂತರ್ಜಲ ಮಟ್ಟ(ನೆಲಮಟ್ಟದಿಂದ ಕೆಳಗೆ-ಮೀಟರ್‌ಗಳಲ್ಲಿ) ತಾಲೂಕು-ಜನವರಿ 2023-ಜನವರಿ 2024- ಇಳಿಕೆ ಪ್ರಮಾಣ ಬಾದಾಮಿ, ಗುಳೇದಗುಡ್ಡ-15.19-33.36-18.17 ಬಾಗಲಕೋಟೆ-24.9-38.52-14.44 ಬೀಳಗಿ-9.65-13.99-4.34 ಹುನಗುಂದ-7.97-9.61-1.64 ಇಳಕಲ್ಲ-5.69-8.99-3.30 ಜಮಖಂಡಿ-13.91-20.25-6.34 ರಬಕವಿ-ಬನಹಟ್ಟಿ-10.22-21.61-11.39 ಮುಧೋಳ-12.78-27.06-14.28 ಸರಾಸರಿ-12.44-21.68-9.24 ( 37 ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಪರೀಕ್ಷಿಸಿ ನೀಡಿದ ವರದಿ)