

ಇಂಡಿ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಶಾಸಕ ಯಶವಂತರಾಯಗೌಡ ಪಾಟೀಲ ಭಾನುವಾರ ಪಟ್ಟಣದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಆವರಣದಲ್ಲಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ನಮ್ಮ ಐದು ಗ್ಯಾರಂಟಿಗಳಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ ಶಕ್ತಿ ಯೋಜನೆ ಸರ್ಕಾರದ ಭರವಸೆಯಂತೆ ಅನುಷ್ಟಾನಗೊಳ್ಳುತ್ತಿದೆ. ಈ ಯೋಜನೆಯಡಿ ತಾಲೂಕಿನ ಅಂದಾಜು 12ಸಾವಿರ ಮಹಿಳೆಯರು, ವಿದ್ಯಾರ್ಥಿನಿಯರು ಪ್ರತಿದಿನ ಉಚಿತ ಪ್ರಯಾಣ ಮಾಡಲಿದ್ದಾರೆ. ಮಹಿಳೆಯರು ಸಾಮಾನ್ಯ ಮತ್ತು ವೇಗದೂತ ಸರ್ಕಾರಿ ವಾಹನಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು ಎಂದರು.
ಬಡವರು ಮತ್ತು ಕೆಳ ಮಧ್ಯಮ ವರ್ಗದ ದುಡಿಯುವ ಮಹಿಳೆಯರ ನಿತ್ಯದ ಖರ್ಚಿನ ಹೊರೆಯನ್ನು ಈ ಯೋಜನೆ ಇಳಿಸಲಿದ್ದು, ಮಹಿಳಾ ಸಬಲೀಕರಣ ಹಾಗೂ ಸ್ವಾವಲಂಬನೆಗೆ ಒತ್ತಾಸೆ ಸಿಗುವ ಭರವಸೆ ಮೂಡಿಸಿದೆ. ಈ ಯೋಜನೆಯಡಿ ತಾಲೂಕಿನಲ್ಲಿರುವ ಮಹಿಳೆಯರು ರಾಜ್ಯದೊಳಗಿನ ಯಾವುದೇ ಪ್ರದೇಶಕ್ಕೆ ಉಚಿತವಾಗಿ ಪ್ರಯಾಣಿಸಬಹುದು. ಮತ್ತು ರಾಜ್ಯದ 4 ನಿಗಮಗಳ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ಸರ್ಕಾರದ ಐದು ಗ್ಯಾರಂಟಿಗಳಿಂದ ಒಂದು ಕುಟುಂಬಕ್ಕೆ ಪ್ರತಿ ವರ್ಷ ಒಂದು ಲಕ್ಷ ರೂ. ಸಹಾಯ ಸಿಗಲಿದೆ ಎಂದರು.
ಸಾರಿಗೆ ಇಲಾಖೆಯ ತಾಂತ್ರಿಕ ಅಧಿಕಾರಿ ಅಬುಬಕರ ಮದಭಾವಿ ಮಾತನಾಡಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಹೊರತುಪಡಿಸಿ, ಉಳಿದ ರಸ್ತೆ ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಎಲ್ಲ ಬಸ್‌ಗಳಲ್ಲಿ (ಅಂತರರಾಜ್ಯ, ಎ.ಸಿ. ಮತ್ತು ಐಷಾರಾಮಿ ಬಸ್‌ಗಳನ್ನು ಹೊರತುಪಡಿಸಿ) ಶೇ. 50ರಷ್ಟು ಆಸನಗಳನ್ನು ಪುರುಷರಿಗೆ ಕಾಯ್ದಿರಿಸಲಾಗುವುದು. ನಾಲ್ಕು ಸಾರಿಗೆ ಸಂಸ್ಥೆಗಳಿಗೆ ತಗಲುವ ವೆಚ್ಚವನ್ನು ಸರ್ಕಾರದಿಂದ ಶೂನ್ಯ ಟಿಕೆಟ್/ಶಕ್ತಿ ಸ್ಮಾರ್ಟ್‌ಕಾರ್ಡ್ ದತ್ತಾಂಶ ಆಧರಿಸಿ ಭರಿಸಲಾಗುವುದು. ಸೇವಾ ಸಿಂಧು ಮೂಲಕ ಅರ್ಜಿಗಳನ್ನು ಪಡೆದು, ಶಕ್ತಿ ಸ್ಮಾರ್ಟ್‌ಕಾರ್ಡ್ ವಿತರಿಸುವ ಪ್ರಕ್ರಿಯೆ ಮುಂದಿನ ಮೂರು ತಿಂಗಳೊಳಗಾಗಿ ಪೂರ್ಣಗೊಳ್ಳಲಿದೆ ಎಂದರು.
ಶಕ್ತಿ ಸ್ಮಾರ್ಟ್‌ಕಾರ್ಡ್ ವಿತರಿಸುವವರೆಗೆ ಭಾರತ ಸರ್ಕಾರ/ಕರ್ನಾಟಕ ಸರ್ಕಾರದ ಇಲಾಖೆ/ಸರ್ಕಾರಿ ಸ್ವಾಮ್ಯದ ಕಚೇರಿಗಳಿಂದ ವಿತರಿಸಿರುವ ಭಾವಚಿತ್ರ ಹಾಗೂ ವಾಸದ ವಿಳಾಸವಿರುವ ಗುರುತಿನ ಚೀಟಿಗಳನ್ನು ಶೂನ್ಯ ಟಿಕೆಟ್ ವಿತರಿಸುವ ಸಂದರ್ಭದಲ್ಲಿ ಪರಿಗಣಿಸಬೇಕು ಎಂದರು. ಕಾಶಿನಾಥ ಹೊಸಮನಿ, ಪುಂಡಲೀಕ ಹೂಗಾರ, ಸಂತೋಷ ವಾಲಿಕಾರ ಮಾತನಾಡಿದರು.
ಕಂದಾಯ ಉಪವಿಬಾಗಾಧಿಕಾರಿ ರಾಮಚಂದ್ರ ಗಡದೆ, ತಹಸೀಲ್ದಾರ್ ನಾಗಯ್ಯ ಹಿರೇಮಠ, ಘಟಕ ವ್ಯವಸ್ಥಾಪಕ ವಾಗೇಶ ಭಜಂತ್ರಿ, ಪುರಸಭೆ ಮಾಜಿ ಅಧ್ಯಕ್ಷ ಭೀಮನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೇದ ಮೋಮಿನ್, ಡಿ.ಆರ್. ಶಹಾ, ಮಂಜುನಾಥ ಕಾಮಗೊಂಡ, ಪ್ರಶಾಂತ ಕಾಳೆ, ಶಹಾಜ ಮಿಸಾಳೆ, ಸತಿಶ ಕುಂಬಾರ, ಸುಧೀರ ಕರಕಟ್ಟಿ, ಶಬ್ಬಿರ ಖಾಜಿ, ಅಯೂಬ ಬಾಗವಾನ, ಗಂಗಾಧರ ಸಾಲೇಗಾಂವ, ನಿರ್ಮಲಾ ತಳಕೇರಿ, ಇಲಿಯಾಸ ಬೋರಾಮಣಿ, ಜಟ್ಟೆಪ್ಪ ರವಳಿ, ಧರ್ಮರಾಜ ವಾಲಿಕಾರ, ಶ್ರೀಕಾಂತ ಕೂಡಿಗನೂರ, ಸತೀಶ ಕುಂಬಾರ, ಸಾರಿಗೆ ಸಂಸ್ಥೆ ನೌಕರರ ಸಂಘದ ಅಧ್ಯಕ್ಷ ಎಂ.ಎಲ್. ಚೌಧರಿ, ನಿಂಗಪ್ಪ ಕವಲಗಿ, ಎಸ್.ಡಿ. ಪಟ್ಟಣಶೆಟ್ಟಿ, ಸುನೀಲ ಹೊನವಾಡ, ಅರವಿಂದ ತರಡಿ, ಬಸವರಾಜ ಆಲೂರ, ಸಂಜು ಚವ್ಹಾಣ ಇತರರಿದ್ದರು.