

ನರೇಗಲ್ಲ: ಸಮೀಪದ ಮಾರನಬಸರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ವೀರಣ್ಣ ಮರಡಿ ಹಾಗೂ ಉಪಾಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಮಂಜುಳಾ ಮಾದರ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಎ.ಎಸ್. ಜೋಶಿ ಕಾರ್ಯ ನಿರ್ವಹಿಸಿದರು. ಒಟ್ಟು 11 ಸದಸ್ಯ ಬಲದ ಗ್ರಾಪಂನಲ್ಲಿ 6 ಕಾಂಗ್ರೆಸ್ ಹಾಗೂ 5 ಬಿಜೆಪಿ ಬೆಂಬಲಿತ ಸದಸ್ಯರಿದ್ದರು. ಈ ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಧ್ಯಕ್ಷ-ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನವು ಸಾಮಾನ್ಯ ಸ್ಥಾನಕ್ಕೆ, ಉಪಾಧ್ಯಕ್ಷ ಸ್ಥಾನವು ಎಸ್‌ಸಿಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸೋಮಶೇಖರಗೌಡ ಯಲ್ಲಪ್ಪಗೌಡ್ರ ಹಾಗೂ ವೀರಣ್ಣ ಮರಡಿ ನಾಮಪತ್ರ ಸಲ್ಲಿಸಿದ್ದರು. ವೀರಣ್ಣ ಅವರು 6 ಮತ ಪಡೆದರೆ ಸೋಮಶೇಖರಗೌಡ 5 ಮತ ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಮಂಜುಳಾ ಮಾದರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.
6 ಸದಸ್ಯ ಬಲ ಹೊಂದಿದ್ದ ಕಾಂಗ್ರೆಸ್ ಬೆಂಬಲಿತರಲ್ಲಿ ಒಬ್ಬರು ಬಿಜೆಪಿಗೆ ಅಡ್ಡಮತದಾನ ಮಾಡಿದ ಫಲವಾಗಿ ಕಾಂಗ್ರೆಸ್ ಅಭ್ಯರ್ಥಿ ಪರಾಭವಗೊಂಡಿದ್ದು, ಕಾಂಗ್ರೆಸ್ ಪಾಳೆಯದಲ್ಲಿ ಇರುಸು ಮುರುಸಿಗೆ ಕಾರಣವಾಯಿತು. ಸ್ಪಷ್ಟ ಬಹುತವಿದ್ದರೂ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ.
ಸದಸ್ಯರಾದ ಫಾತೀಮಾ ಸವಡಿ, ಶಿವಕುಮಾರ ದಿಂಡೂರ, ದಿಲಶಾದ ದೋಟಿಹಾಳ, ಹನಮವ್ವ ತಳವಾರ, ಅಲ್ಲಾಸಾಬ ಮೋತೆಖಾನ, ಈರಪ್ಪ ನಿಡಗುಂದಿ, ಉಮಾ ಚಿಗರಿ, ಚಂದ್ರವ್ವ ಬೆನಹಾಳ, ಪಿಡಿಒ ಎಸ್.ಆರ್. ಸಂಕನಗೌಡ್ರ ಇದ್ದರು.