ನಿಷೇಧವಿದ್ದರೂ ದಶಪಥದಲ್ಲಿ ನಿಂತಿಲ್ಲ ದ್ವಿಚಕ್ರ ವಾಹನ ಓಡಾಟ

State 13 Bangalore mysore HIghway
Published on

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ನಿಷೇಧದ ನಡುವೆಯೂ ದ್ವಿಚಕ್ರ ವಾಹನಗಳ ಓಡಾಟ ನಿಂತಿಲ್ಲ. ರಾತ್ರಿಯಾಗುತ್ತಿದ್ದಂತೆ ಹೆದ್ದಾರಿಗಿಳಿಯುವ ಸವಾರರು ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆಗೆ ತಲೆಬಿಸಿಯಾಗಿ ಪರಿಣಮಿಸಿದ್ದಾರೆ.

ನೂತನ ಹೆದ್ದಾರಿಯಲ್ಲಿ ಅಪಘಾತಗಳಿಗೆ ಕಡಿವಾಣ ಹಾಕಬೇಕೆಂಬ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆ.1ರಿಂದ ಹೆದ್ದಾರಿಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನ ಸೇರಿ ಕೆಲವು ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿತ್ತು. ಮೋಟಾರು ವಾಹನ ಕಾಯ್ದೆ 2002ರ ಅನ್ವಯ ಹೆದ್ದಾರಿ ಪ್ರಾಧಿಕಾರವು ಜು.12ರಂದೇ ಈ ಕುರಿತು ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಆ.1ರಿಂದ ನಿಯಮ ಕಟ್ಟುನಿಟ್ಟಾಗಿ ಜಾರಿಯಾಗಿತ್ತು.

ಹೊಸ ನಿಯಮ ಆರಂಭವಾದ ದಿನದಿಂದ ಹೆದ್ದಾರಿಯಲ್ಲಿ ಬೈಕ್, ಆಟೋ, ಇ-ಕಾರ್ಟ್, ಮೋಟಾರ್‌ರಹಿತ ವಾಹನಗಳು, ಟ್ರ್ಯಾಕ್ಟರ್‌ಗಳು, ಕೃಷಿ ಯಂತ್ರಗಳು, ಮಲ್ಟಿ ಆಕ್ಸೆಲ್ ಹೈಡ್ರಾಲಿಕ್ ವಾಹನಗಳು, ಕ್ವಾಡ್ರಿ ಸೈಕಲ್‌ಗಳು ಹೆದ್ದಾರಿಯಲ್ಲಿ ಸಂಚರಿಸದಂತೆ ಹದ್ದಿನ ಕಣ್ಣಿಡಲಾಗಿತ್ತು. ನಿಯಮ ಉಲ್ಲಂಘಿಸಿ ಹೆದ್ದಾರಿ ಪ್ರವೇಶ ಮಾಡುತ್ತಿದ್ದ ನಿಷೇಧಿತ ವಾಹನಗಳಿಗೆ ಪೊಲೀಸ್ ಇಲಾಖೆ ದುಬಾರಿ ದಂಡ ವಿಧಿಸುವ ಮೂಲಕ ಬಿಸಿಮುಟ್ಟಿಸಿತ್ತು.

ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಹೆದ್ದಾರಿ ಪ್ರವೇಶಿಸಲು ಹಿಂದೇಟು ಹಾಕುವಂತಾಗಿತ್ತು. ಪ್ರಾಧಿಕಾರದ ವತಿಯಿಂದ ನಿಷೇಧಿತ ವಾಹನಗಳ ಸವಾರರಿಗೆ ಸೂಚನೆ ನೀಡುವ ಸಲುವಾಗಿ ಹೆದ್ದಾರಿ ಪ್ರವೇಶ ಹಾಗೂ ನಿರ್ಗಮನದ ಸ್ಥಳಗಳಲ್ಲಿ ಗೃಹರಕ್ಷಕ ಸಿಬ್ಬಂದಿ ನೇಮಿಸಲಾಗಿತ್ತು. ಅಂದಿನಿಂದ ಹೆದ್ದಾರಿ ದ್ವಿಚಕ್ರ ವಾಹನಗಳ ಸಂಚಾರದಿಂದ ಮುಕ್ತವಾಗಿತ್ತು. ಈ ನಿಯಮದಿಂದ ಅಪಘಾತ ಪ್ರಕರಣಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿತ್ತು.

ರಾತ್ರಿ ಪ್ರವೇಶ!

ದ್ವಿಚಕ್ರ ವಾಹನಗಳ ನಿಷೇಧದಿಂದ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿವೆ ಎನ್ನುವ ಹೊತ್ತಿನಲ್ಲೇ ರಾತ್ರಿ ಸಮಯದಲ್ಲಿ ದ್ವಿಚಕ್ರ ವಾಹನಗಳ ಸಂಚಾರ ಎಗ್ಗಿಲ್ಲದೆ ಸಾಗಿದೆ. ಕಳೆದ ಒಂದು ವಾರದಿಂದ ತಾಲೂಕು ವ್ಯಾಪ್ತಿಯ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಮೂವರು ಮೃತಪಟ್ಟಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಸೋಮವಾರ ರಾತ್ರಿ ಮಂಡ್ಯ ಮೂಲದ ಇಬ್ಬರು ದ್ವಿಚಕ್ರ ವಾಹನ ಸವಾರರು ತಿಟ್ಟಮಾರನಹಳ್ಳಿ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೂರು ದಿನಗಳ ಹಿಂದೆ ಇದೇ ಜಾಗದ ಸಮೀಪ ಮತ್ತೊಬ್ಬ ದ್ವಿಚಕ್ರ ವಾಹನ ಸವಾರ ಅಪಘಾತಕ್ಕೆ ಬಲಿಯಾಗಿದ್ದಾನೆ. ಮತ್ತೊಂದು ಪ್ರಕರಣದಲ್ಲಿ ದೇವರಹೊಸಹಳ್ಳಿ ಸಮೀಪ ಕೇರಳ ಮೂಲದ ದ್ವಿಚಕ್ರ ವಾಹನ ಸವಾರ ಕಾಲು ಮುರಿದು ಕೊಂಡಿದ್ದಾನೆ. ಈ ಎಲ್ಲ ಪ್ರಕರಣಗಳೂ ನಿಷೇಧದ ನಡುವೆ ದ್ವಿಚಕ್ರ ವಾಹನಗಳ ಸಂಚಾರ ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿವೆ.

ಸವಾಲಾಗುತ್ತಿರುವ ದ್ವಿಚಕ್ರವಾಹನ ಸವಾರರು?

ಹಗಲಿನಲ್ಲಿ ದ್ವಿಚಕ್ರ ವಾಹನಗಳನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಕೊಂಚಮಟ್ಟಿಗೆ ಯಶಸ್ವಿಯಾಗಿದ್ದು, ರಾತ್ರಿ ಹೊತ್ತಿನಲ್ಲಿ ಇಲಾಖೆಗೆ ಸವಾಲಾಗಿದೆ. ಹಗಲಿನಲ್ಲಿಯೇ ಇವರನ್ನು ನಿಯಂತ್ರಿಸುವುದು ಕಷ್ಟಸಾಧ್ಯವಾಗಿದ್ದು, ಇನ್ನು ರಾತ್ರಿ ಸಮಯದಲ್ಲಿ ನಿಯಂತ್ರಣ ಅಸಾಧ್ಯ ಎನ್ನುವ ಮಾತುಗಳು ಕೇಳಿಬಂದಿವೆ. ಈ ವಿಚಾರವಾಗಿ ಹೆದ್ದಾರಿಗೆ ಬಂದು ಸಮಸ್ಯೆಗೆ ಸಿಲುಕುವ ದ್ವಿಚಕ್ರ ವಾಹನ ಸವಾರರೇ ಈ ನಿಟ್ಟಿನಲ್ಲಿ ಚಿಂತಿಸುವುದು ಉತ್ತಮ ಎನ್ನಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net