

ಯಲ್ಲಾಪುರ: ಪಟ್ಟಣದ ಆಗು ಹೋಗುಗಳನ್ನು ನಿರ್ವಹಿಸುವ ಪಟ್ಟಣ ಪಂಚಾಯಿತಿಗೆ ಜನಪ್ರತಿನಿಧಿಗಳಿದ್ದರೂ, ಅಧ್ಯಕ್ಷ- ಉಪಾಧ್ಯಕ್ಷರೇ ಇಲ್ಲದೇ ಅತಂತ್ರ ಸ್ಥಿತಿ ಮುಂದುವರಿದೆ.
ಹಿಂದಿನ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಮೊದಲ ಎರಡೂವರೆ ವರ್ಷದ ಅಧಿಕಾರದ ಅವಧಿ ಮುಗಿದು ಮೂರು ತಿಂಗಳು ಕಳೆದಿವೆ. ಆದರೆ ಹೊಸ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಈವರೆಗೂ ಆಗದೇ ಇರುವುದರಿಂದ ಅಭಿವೃದ್ಧಿಗೆ ಹಿನ್ನೆಡೆ ಉಂಟಾಗಿದೆ.
ಗ್ರಾ.ಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿಯನ್ನು ಅವಧಿ ಮುಗಿಯುವ ಮೊದಲೇ ಪ್ರಕಟಿಸಿ, ಇದೀಗ ಹೊಸ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯೂ ಆಗಿದೆ. ಆದರೆ, ಪಟ್ಟಣ ಪಂಚಾಯಿತಿಗೆ ಮಾತ್ರ ಅವಧಿ ಮುಗಿದು ಮೂರು ತಿಂಗಳು ಕಳೆದರೂ ಇನ್ನೂ ಮೀಸಲಾತಿ ಪ್ರಕಟ ಮಾಡದೇ ಇರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ.
ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಅಂದರೆ, ಮೇ 5ರಂದೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಧಿ ಮುಗಿದಿದೆ. ಚುನಾವಣೆ ಮುಗಿದು, ಫಲಿತಾಂಶ ಬಂದು ಹೊಸ ಸರ್ಕಾರ ಬಂದರೂ, ಸ್ಥಳೀಯ ಸಂಸ್ಥೆಗಳ ಮೀಸಲಾತಿ ನಿಗದಿ ಪಡಿಸುವಲ್ಲಿ ಆಡಳಿತ ನಿರಾಸಕ್ತಿ ತಳೆದಿದೆ. ಇದರಿಂದ ಜನಪ್ರತಿನಿಧಿಗಳಿದ್ದರೂ, ಅಧಿಕಾರಿಗಳದೇ ದರ್ಬಾರ್ ಆಗಿದೆ ಎಂದು ಜನ ಆಡಿಕೊಳ್ಳುವಂತಾಗಿದೆ.
ಜನಪ್ರತಿನಿಧಿಗಳಿದ್ದರೂ ಕಳೆದ ಮೂರು ತಿಂಗಳಿನಿಂದ ಸಾಮಾನ್ಯ ಸಭೆ ನಡೆದಿದಿಲ್ಲ. ಸ್ಥಳೀಯ ಸಮಸ್ಯೆಗಳ ಬಗೆಗೆ ಚರ್ಚೆ ಇಲ್ಲ. ಹೊಸ ಅಭಿವೃದ್ಧಿಯಂತೂ ಇಲ್ಲವೇ ಇಲ್ಲ. ಜನಪ್ರತಿನಿಧಿಗಳಿದ್ದರೂ, ಸ್ಥಳೀಯ ಸಮಸ್ಯೆಯ ಬಗೆಗೆ ಜನಸಾಮಾನ್ಯರು ಅಧಿಕಾರಿಗಳ ಮೊರೆ ಹೋಗಬೇಕಿದೆ. ಪಟ್ಟಣದಲ್ಲಿ ಹತ್ತು ಹಲವು ಸಮಸ್ಯೆಗಳು ಉತ್ತರ ಇಲ್ಲದಂತಾಗಿದೆ.
ಕೂಡಲೇ ಮೀಸಲಾತಿ ನಿಗದಿಪಡಿಸಿ, ಹೊಸ ಅಧ್ಯಕ್ಷ- ಉಪಾಧ್ಯಕ್ಷರ ನೇಮಕ ಆಗಿ,ಸ್ಥಳೀಯ ಅಭಿವೃದ್ಧಿಗೆ ಇನ್ನಷ್ಟು ವೇಗ ದೊರೆಯುವಂತೆ ಮಾಡಬೇಕಿದೆ.
ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಇನ್ನೂ ಆಗದೇ ಇರುವುದರಿಂದ ಅಭಿವೃದ್ಧಿ ಕುಂಠಿತವಾಗಿದೆ. ಅಭಿವೃದ್ಧಿಯ ನಿಟ್ಟಿನಲ್ಲಿ ಮೀಸಲಾತಿ ಪ್ರಕಟಿಸಿ, ಶೀಘ್ರ ಆಯ್ಕೆ ಪ್ರಕ್ರಿಯೆ ನಡೆಸುವ ಕಾರ್ಯ ಆಗಬೇಕು. ಸರ್ಕಾರ ತುರ್ತಾಗಿ ಈ ಕುರಿತು ಕ್ರಮಕ್ಕೆ ಮುಂದಾಗಬೇಕು. | ಸತೀಶ ನಾಯ್ಕ, ಪ.ಪಂ ಸದಸ್ಯ