ವಿದ್ಯುತ್​ ತಂತಿಗಳು ನೆಲ ತಾಕುವಂತಿದ್ದರೂ ಬೆಸ್ಕಾಂ ರ್ನಿಲಕ್ಷ್ಯ

02 05 2025 KLR_PAGE_03
ಕದರಿನತ್ತ ಗ್ರಾಮದಲ್ಲಿ ನೆಲಕ್ಕೆ ಜೋತುಬಿದ್ದ ವಿದ್ಯುತ್​ ತಂತಿಗೆ ಗ್ರಾಮಸ್ಥರು ಮರದ ಕೊಂಬೆಗಳನ್ನು ಆಸರೆಯಾಗಿ ಇಟ್ಟಿರುವುದು.
Published on

ಬೂದಿಕೋಟೆ : ಬೆಸ್ಕಾಂ ಇಲಾಖೆ ಅಧಿಕಾರಿಗಳ ರ್ನಿಲಕ್ಷ್ಯದಿಂದ ವಿದ್ಯುತ್​ ತಂತಿಗಳು ಕೈಗೆ ಎಟುಕುವಂತೆ ನೇತಾಡುತ್ತಿದ್ದು, ಪ್ರಾಣ ಭಯದಿಂದ ಗ್ರಾಮಸ್ಥರು ತಂತಿಗಳಿಗೆ ಮರದ ರೆಂಬೆಗಳನ್ನು ಇಟ್ಟು ಆಸರೆ ಕಲ್ಪಿಸಿರುವ ಘಟನೆ ಕದಿರಿನತ್ತ ಗ್ರಾಮದಲ್ಲಿ ನಡೆದಿದೆ.

ಬಂಗಾರಪೇಟೆ ತಾಲೂಕು ಗಡಿಭಾಗದ ಕದರಿನತ್ತ ಗ್ರಾಮದಲ್ಲಿ ಕೆಲವು ವಿದ್ಯುತ್​ ಕಂಬಗಳು ವಾಲುವುದರ ಜತೆಗೆ ವಿದ್ಯುತ್​ ಸಂಪರ್ಕ ಹೊಂದಿರುವ ತಂತಿಗಳು ಕೈಗೆಟಕುವಂತೆ ನೇತಾಡುತ್ತಿವೆ. ಗ್ರಾಮದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕಾರಣ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದ್ದು, ಬೆಸ್ಕಾಂ ಇಲಾಖೆಯೂ ಸಹ ಗ್ರಾಮವನ್ನು ಕಡೆಗಣಿಸಿದೆ.

ಗ್ರಾಮದಲ್ಲಿ ಈ ಹಿಂದೆಯೂ ವಿದ್ಯುತ್​ ಕಂಬವೊಂದು ವಾಲಿದ್ದ ಕಾರಣ ಕಂಬ ಬೀಳುತ್ತದೆ ಎಂಬ ಭಯದಲ್ಲಿ ಗ್ರಾಮಸ್ಥರು ಕಂಬಕ್ಕೆ ಮರದ ಕೊಂಬೆಯೊಂದನ್ನು ಇಟ್ಟಿದ್ದರು. ಈಗ ಗ್ರಾಮದ ರೈತರ ಪಂಪ್​ ಸೆಟ್​ಗಳಿಗೆ ವಿದ್ಯುತ್​ ಸಂಪರ್ಕ ಕಲ್ಪಿಸುವ ತ್ರೀ ಕೇಸ್​ ವಿದ್ಯುತ್​ ಸರಬರಾಜು ಕಂಬಗಳು ಕಳಪೆ ಕಾಮಗಾರಿಯಿಂದ ಕಳೆದ ಒಂದು ವರ್ಷದಿಂದ ವಾಲಿದೆ. ಎರಡು ವರ್ಷಗಳ ಹಿಂದೆ ಪಂಪ್​ಸೆಟ್​ಗಳಿಗೆ ವಿದ್ಯುತ್​ ಸಂಪರ್ಕ ಕಲ್ಪಿಸಲು ಗುತ್ತಿಗೆದಾರರು ಕಂಬ ನೆಡಲು ಗುತ್ತಿಗೆ ಪಡೆದಿದ್ದರು.

ಕಂಬಗಳನ್ನು ನೆಡುವಾಗ ಒಂದು ಕಂಬದಿಂದ ಮತ್ತೊಂದು ಕಂಬಕ್ಕೆ ಅಂತರ ಕಾಯ್ದುಕೊಳ್ಳಬೇಕಿತ್ತು. ಗುತ್ತಿಗೆದಾರ ಅಜಾಗರೂಕತೆ ಮತ್ತು ಹೆಚ್ಚು ಲಾಭ ಪಡೆಯುವ ದುರುದ್ದೇಶದಿಂದ ದೂರ ದೂರಕ್ಕೆ ಕಂಬಗಳನ್ನು ನೆಟ್ಟಿದ್ದರು. ಅದರ ಪರಿಣಾಮ ಇದೀಗ ತಂತಿಗಳು ಜೋತು ಬಿದ್ದು, ಕೈಗೆ ಎಟಕುವ ಹಂತಕ್ಕೆ ತಲುಪಿವೆ. ಜೋತು ಬಿದ್ದಿರುವ ತಂತಿಗಳನ್ನು ಸರಿಪಡಿಸುವಂತೆ ಹಾಗೂ ವಾಲಿರುವ ಕಂಬಗಳನ್ನು ದುರಸ್ಥಿ ಮಾಡುವಂತೆ ಗ್ರಾಮಸ್ಥರು ಬೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನೆ ಆಗುತ್ತಿಲ್ಲ. ಇದರಿಂದಾಗಿ ಜನರು ಪ್ರಾಣಾಪಾಯದಿಂದ ಪಾರಾಗಲು ಜೋತು ಬಿದ್ದಿರುವ ವಿದ್ಯುತ್​ ತಂತಿಗಳಿಗೆ ಆಧಾರವಾಗಿ ಮರದ ಕಂಬಗಳನ್ನು ಇಟ್ಟಿದ್ದಾರೆ. ಇದು ತಾತ್ಕಾಲಿಕ ಪರಿಹಾರವಾಗಿದ್ದು, ಮುಂದೆ ಮಳೆಗಾಲ ಆರಂಭವಾದರೆ ಮತ್ತಷ್ಟು ಪರಿಸ್ಥಿತಿ ಬಿಗಡಾಯಿಸಬಹುದು. ಆದ್ದರಿಂದ ಕೂಡಲೇ ಬೆಸ್ಕಾಂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗ್ರಾಮದಲ್ಲಿ ಈ ಹಿಂದೆ ವಿದ್ಯುತ್​ ಕಂಬಗಳನ್ನು ನೆಡುವಾಗ ಅಂತರ ಕಾಯ್ದುಕೊಳ್ಳಬೇಕಿದ್ದ ಗುತ್ತಿಗೆದಾರರು ಎಲ್ಲ ನಿಯಮವನ್ನು ಗಾಳಿಗೆ ತೂರಿದ್ದು, ಇದೀಗ ವಿದ್ಯುತ್​ ತಂತಿಗಳು ಕೈಗೆ ಸಿಗುತ್ತಿವೆ. ಕೆಲವು ಕಡೆ ಕಂಬಗಳು ನೆಲಕ್ಕೆ ಬೀಳುವಂತೆ ವಾಲಿವೆ. ಸರಿಪಡಿಸಲು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಬಂದು ನೋಡಿಕೊಂಡು ಹೋದರಾದರೂ ಸರಿಪಡಿಸುವ ಕಾರ್ಯಕ್ಕೆ ಮುಂದಾಗಿಲ್ಲ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ತಂತಿಗಳಿಗೆ ಮರದ ಆಶ್ರಯ ಕಲ್ಪಿಸಿದ್ದೇವೆ. | ಅಪ್ಪೋಜಿರಾವ್​ ಕದಿರಿನತ್ತ ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net