ಮಾಸ್ಟರ್ ಪ್ಲಾನ್ ಅಂತಿಮವಾಗದಿದ್ದರೂ ಅಪಪ್ರಚಾರ

5ark1
ಅರಕಲಗೂಡಿನಲ್ಲಿ ಶಾಸಕ ಎ. ಮಂಜು 2041 ಮಾಸ್ಟರ್ ಪ್ಲಾನ್ ಪ್ರದರ್ಶಿಸಿದರು.
Published on

 ಅರಕಲಗೂಡು : ಕೈಗಾರಿಕಾ ಕ್ಷೇತ್ರ ಸೇರಿದಂತೆ ಪಟ್ಟಣದ ಸಮಗ್ರ ಅಭಿವೃದ್ಧಿ ಹಿನ್ನೆಲೆಯಲ್ಲಿ 2041ರ ಮಾಸ್ಟರ್ ಪ್ಲಾನ್ ಸಿದ್ಧಗೊಂಡಿದ್ದು, ಇನ್ನೂ ಅಂತಿಮಗೊಂಡಿಲ್ಲ. ಹೀಗಿದ್ದರೂ ಕೆಲವರು ಮಾಸ್ಟರ್ ಪ್ಲಾನ್‌ನಲ್ಲಿ ಒಳಗೊಂಡಿರುವ ಸರ್ವೇ ನಂಬರ್ ಮಾಲೀಕರನ್ನು ಸಂಪರ್ಕಿಸಿ ಆಮಿಷ ಒಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ರೀತಿಯ ಅನ್ಯಾಯಕ್ಕೆ ಯಾರೂ ಕೂಡ ಬಲಿಯಾಗಬಾರದು ಎಂದು ಶಾಸಕ ಎ. ಮಂಜು ಮನವಿ ಮಾಡಿದರು.

ಪಟ್ಟಣದ ಬೆಳವಣಿಗೆಗೆ ಮಾಸ್ಟರ್ ಪ್ಲಾನ್ ಪೂರಕವಾಗಿದೆ. ತಾಲೂಕು ಕೇಂದ್ರದಿಂದ 5 ಕಿ.ಮೀ. ದೂರದ ಒಳಗೆ ಪಟ್ಟಣದ ಸಮಗ್ರ ಅಭಿವೃದ್ಧಿಯನ್ನು ಈ ಪ್ಲಾನ್‌ನ ಒಳಗೊಂಡಿದೆ. ಇದರ ರೂಪುರೇಷೆಗಳ ಕುರಿತು ಯಾವುದೇ ಅಧಿಕಾರಿಗಳು ನನ್ನೊಂದಿಗೆ ಚರ್ಚಿಸಿಲ್ಲ. ಪ್ಲಾನ್ ಸಿದ್ಧಗೊಂಡಿದೆ ವಿನಾ ಅಂತಿಮಗೊಂಡಿಲ್ಲ. ಕ್ಷೇತ್ರದಲ್ಲಿ ಕೆಲವರು ಈ ಪ್ಲಾನ್ ಹಿಡಿದುಕೊಂಡು ನಿಮ್ಮ ಜಮೀನಿನಲ್ಲಿ ರಸ್ತೆ ಹೋಗುತ್ತೆ, ಬಫರ್ ಜೋನ್, ಯೆಲ್ಲೋ ಜೋನ್ ಇತರ ವಿಷಯಗಳನ್ನು ಇಟ್ಟುಕೊಂಡು ನಿಮ್ಮ ಜಮೀನನ್ನು ಈ ಪ್ಲಾನ್‌ನಿಂದ ಕೈಬಿಡುತ್ತೇವೆ ಎಂದು ಹೇಳಿ ವಸೂಲಾತಿ ನಡೆಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇಂತಹವರ ಹೆಸರನ್ನು ಸೂಕ್ತ ಸಮಯದಲ್ಲಿ ಬಹಿರಂಗಪಡಿಸುವೆ. ಇದಕ್ಕೆ ಯಾರೂ ಅವಕಾಶ ಮಾಡಿಕೊಡಬೇಡಿ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಯೋಜನೆ ಅನುಮೋದನೆಗೆ ಇನ್ನೂ ಕಾಲಾವಕಾಶ ಇದೆ. ಈ ವೇಳೆ ನಿಮ್ಮ ಜಮೀನು ಈ ನಿಗದಿ ಯೋಜಿತ ಪ್ಲಾನ್‌ಗೆ ಒಳಪಟ್ಟಿದ್ದರೆ ಒಂದಕ್ಕೆ ನಾಲ್ಕು ಪಟ್ಟು ಪರಿಹಾರ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಈಗಿನ ಪ್ಲಾನ್‌ನಲ್ಲಿ ಒಂದಷ್ಟು ಅಭಿವೃದ್ಧಿಗೆ ಜಾಗವನ್ನು ಗುರುತಿಸಲಾಗಿದೆ. 489.62 ಹೆಕ್ಟೇರ್ ವಿಸ್ತೀರ್ಣ(ಶೇ.63.15) ವಸತಿಗೆಂದು ಗುರುತಿಸಲಾಗಿದೆ. ಟ್ರಾನ್ಸ್‌ಪೊರ್ಟೇಶನ್ ಆ್ಯಂಡ್ ಕಮ್ಯುನಿಕೇಷನ್‌ಗೆಂದು 127.97 ಹೆಕ್ಟೇರ್(ಶೇ.16.51) ಆಗಿದೆ. ಒಟ್ಟು 775.52 ಹೆಕ್ಟೇರ್ ಇರಬೇಕಿದೆ. ಇವುಗಳನ್ನು ಸೇರಿಸಿ ಒಟ್ಟು ಶೇ.100ರಷ್ಟು ಪ್ರದೇಶವನ್ನು ಗುರುತಿಸಲಾಗಿದೆ. ಈ ಪ್ಲಾನ್ ಇನ್ನೂ ಅಂತಿಮಗೊಂಡಿಲ್ಲದ ಪರಿಣಾಮ ಕೆಲವು ವ್ಯಕ್ತಿಗಳು ಇದನ್ನೇ ತೋರಿಸಿಕೊಂಡು ದುರುಪಯೋಗ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ. ಈ ಕೆಲಸವನ್ನು ಕೂಡಲೇ ನಿಲ್ಲಿಸಬೇಕು. ಅಲ್ಲದೆ ಸಂಬಂಧಪಟ್ಟ ಅಧಿಕಾರಿಗಳು ಕೂಡ ಸೂಕ್ತ ತಿಳಿವಳಿಕೆಯನ್ನು ಜನ ಸಾಮಾನ್ಯರಿಗೆ ತಿಳಿಹೇಳಬೇಕಿದೆ ಎಂದರು.

ಈ ನಿಯೋಜಿತ ಪ್ಲಾನ್‌ನ್ನು ತೋರಿಸಿಕೊಂಡು ಕೆಲವರು ಬಂಡವಾಳ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಕೆಲಸ ನಿಲ್ಲಿಸದ್ದಿದ್ದರೆ ಸಾರ್ವಜನಿಕರಿಂದ ನಿಂದನೆಗೆ ಒಳಗಾಗಬೇಕಾಗುತ್ತದೆ. ಅಧಿಕಾರ ಸಿಕ್ಕಿದೆ ಎಂಬ ದುರಹಂಕಾರದಿಂದ ಕೆಲವರು ದುರುಪಯೋಗ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ಕ್ರಮ ಎದುರಿಸಬೇಕಾಗುತ್ತದೆ ಎಂದು ಶಾಸಕರು ಎಚ್ಚರಿಸಿದರು.

ಪಟ್ಟಣದ ಸಾಲಗೇರಿ ರಸ್ತೆ ವಿಸ್ತರಣೆ ವೇಳೆ ಕೋರ್ಟ್ ಮೊರೆ ಹೋಗಿದ್ದ ವ್ಯಕ್ತಿಗೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹುದ್ದೆ ವಹಿಸಿರುವುದು ಸರಿಯಲ್ಲ. ಅಭಿವೃದ್ಧಿಗೆ ಅಡ್ಡಗಾಲು ಹಾಕಿದ್ದ ವ್ಯಕ್ತಿಗೆ ನೀಡಿರುವ ಅಧ್ಯಕ್ಷ ಸ್ಥಾನದ ಹುದ್ದೆಯಿಂದ ವಿಮುಕ್ತಗೊಳಿಸಿ ಬೇರೆಯವರಿಗೆ ನೀಡುವುದು ಒಳಿತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net