ಭಾಷೆ ಬೇರೆಯಾದರೂ ಭಾವನೆ ಒಂದೇ

16 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಭಾಷೆ ಬೇರೆ ಬೇರೆ ಇದ್ದರೂ ಭಾವನೆಗಳು ಒಂದೇ. ಕರ್ನಾಟಕ, ಮಹಾರಾಷ್ಟ್ರ ಸಾಹಿತ್ಯಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಒಂದೇ ಆಗಿದ್ದು, ಎರಡೂ ಭಾಷೆಗಳಿಂದ ಕೂಡಿದ ಸ್ಥಳ ಕರ್ನಾಟಕ ಎಂದು ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್​ ಅಧ್ಯಕ್ಷೆ ಡಾ. ವಿನಯಾ ಒಕ್ಕುಂದ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಬೆಟಗೇರಿ ಕೃಷ್ಣಶರ್ಮ ದತ್ತಿ ನಿಮಿತ್ತ ಕೆ.ಇ. ಬೋರ್ಡ್​ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಆನಂದಕಂದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದು ಜಾತಿ, ಲಿಂಗ, ವರ್ಣ, ವರ್ಗ, ಭಾಷೆಗಳೆಂಬ ವೈರಸ್​ಗಳು ಜನರ ಮನಸ್ಸನ್ನು ಒಡೆಯುತ್ತವೆ. ಭಾಷಾ ಬಾಂಧವ್ಯ ಬೆಸೆಯುವ ಕಾರ್ಯವನ್ನು ಡಾ. ಬೆಟಗೇರಿ ಕೃಷ್ಣಶರ್ಮ ಮಾಡಿದ್ದರು. ಅವರ ಸಾಹಿತ್ಯದಲ್ಲಿ ಬಳಸಿದ ಜಾನಪದದ ಸೊಗಡು ಮಾನವೀಯ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ ಎಂದರು.

ಪ್ರಶಸ್ತಿ ಸ್ವೀಕರಿಸಿದ ಬೇಡಕಿಹಾಳದ ಡಾ. ಗೋಪಾಲ ಮಹಾಮುನಿ ಮಾತನಾಡಿ, ಭಾಷಾ ಭಿನ್ನತೆಯಿದ್ದರೂ ಸಂಸ್ಕೃತಿ ಒಂದೇ. ಎರಡೂ ಒಂದೇ ಸಂಸ್ಕೃತಿಯ ಪ್ರತಿಬಿಂಬ. ಕರ್ನಾಟಕ, ಮಹಾರಾಷ್ಟ್ರ ಭಾಷಾ ಸಮನ್ವಯ ಸಮಿತಿ ರಚನೆಯ ಅಗತ್ಯವಿದ್ದು, ಇದರಿಂದ ಗಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.

ಡಾ. ವಿಜಯಕುಮಾರ ತೊರಗಲ್​ ಮಾತನಾಡಿದರು. ಪ್ರೊ. ವಿದ್ಯಾ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಸತೀಶ ತುರಮರಿ, ಡಾ. ಧನವಂತ ಹಾಜವಗೋಳ, ಗುರುರಾಜ ಜಮಖಂಡಿ, ಡಾ. ಬಾಳಪ್ಪ ಚಿನಗುಡಿ, ಮಲ್ಲಿಕಾರ್ಜುನ ಚಿಕ್ಕಮಠ, ರೂಪಾ ಚಂದ್ರಗಿರಿ, ಸವಿತಾ ಕುಲಕರ್ಣಿ, ಇತರರು ಇದ್ದರು.

ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿನದತ್ತ ಹಡಗಲಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net