ಬೀಜೋಪಚಾರ ಮಾಡಿದ್ದರೂ ಕಡಲೆಗೆ ಸಿಡಿ ರೋಗ

NRGL KADALE CD
Published on

ನರೇಗಲ್ಲ: ಲಕ್ಷಾಂತರ ರೂಪಾಯಿ ವ್ಯಯಿಸಿ ಬಿತ್ತನೆ ಮಾಡಿದ್ದ ಕಡಲೆ ಬೆಳೆ ಸಂಪೂರ್ಣ ಸಿಡಿ ರೋಗಕ್ಕೆ ತುತ್ತಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ಸಮೀಪದ ಅಬ್ಬಿಗೇರಿ ಗ್ರಾಮದ ರೈತ ಪ್ರಕಾಶ ಪಾಟೀಲ ಅವರದ್ದಾಗಿದೆ.

‘ನಮ್ಮ ಕಂಪನಿಯ ರಾಸಾಯನಿಕ ಬಳಸಿ ಬೀಜೋಪಚಾರ ಮಾಡಿದರೆ, ಕಡಲೆ ಬೆಳೆಗೆ ಸಿಡಿ ರೋಗ ಬರುವುದಿಲ್ಲ ಎಂದು ಹೇಳಿ ಬೀಜೋಪಚಾರ ಮಾಡಿದ್ದ ಬೆಳೆ ಈಗ ಸಂಪೂರ್ಣ ಸಿಡಿ ರೋಗಕ್ಕೆ ತುತ್ತಾಗಿದ್ದು, ಕಂಪನಿಯ ಮಾತು ಕೇಳಿಕೊಂಡು ಸುಮಾರು 20 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಡಲೆ ಸಂಪೂರ್ಣ ನಾಶವಾಗಿದೆ. ಈ ಬಗ್ಗೆ ಕಂಪನಿಯವರು ಹಾಗೂ ಕೃಷಿ ಇಲಾಖೆಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ರೈತ ಪ್ರಕಾಶ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಅಬ್ಬಿಗೇರಿ ಗ್ರಾಮದ ಸರ್ವೆ ನಂ. 614/2 10.22 ಎಕರೆ ಹಾಗೂ 616/2 8.20 ಎಕರೆ ಪ್ರದೇಶದಲ್ಲಿ ಖಾಸಗಿ ಕಂಪನಿಯ ಬೀಜೋಪಚಾರ ಮಾಡಿದ ಕಡಲೆ ಬೀಜ ಬಿತ್ತನೆ ಮಾಡಲಾಗಿತ್ತು. ಕಂಪನಿಯ ಸಿಬ್ಬಂದಿ ಬೀಜೋಪಚಾರ ಮಾಡಿದಲ್ಲಿ ಸಿಡಿ ರೋಗ ಬರುವುದಿಲ್ಲ ಎಂದಿದ್ದರು. ಆದರೆ, ಪ್ರಾರಂಭದಲ್ಲಿ ಹುಲುಸಾಗಿ ಬೆಳೆದ ಕಡಲೆ ಈಗ ಸಂಪೂರ್ಣ ಸಿಡಿ ರೋಗಕ್ಕೆ ತುತ್ತಾಗಿದೆ. ಈ ಬಗ್ಗೆ ಕಂಪನಿಯವರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಕೃಷಿ ಅಧಿಕಾರಿಗಳು ನಾಮಕೇ ವಾಸ್ತೆ ಬಂದು ಶೇ. 40 ರಷ್ಟು ಬೆಳೆ ಹಾನಿಯಾಗಿದೆ ಎಂದು ವರದಿ ನೀಡಿ ಕೈ ತೊಳೆದುಕೊಂಡಿದ್ದಾರೆ. ಬೆಳೆ ಹಾನಿಗೆ ಯಾವುದೇ ಪರಿಹಾರ ನೀಡುತ್ತಿಲ್ಲ. ಬಿತ್ತನೆ ಬೀಜ, ಗೊಬ್ಬರ ಸೇರಿ ಕಡಲೆ ಬೆಳೆಗೆ ಲಕ್ಷಾಂತರ ರೂ. ಖರ್ಚಾಗಿದ್ದು, ಈ ವರ್ಷದ ಹಿಂಗಾರಿನ ಬೆಳೆ ಸಂಪೂರ್ಣ ಹಾಳಾಗಿದೆ. ಅದಕ್ಕೆ ಕಂಪನಿಯವರು ಬೆಳೆ ಹಾನಿ ಭರಿಸಬೇಕು ಎಂದು ರೈತ ಪ್ರಕಾಶ ಪಾಟೀಲ ಆಗ್ರಹಿಸಿದ್ದಾರೆ.

ಅಬ್ಬಿಗೇರಿ ಗ್ರಾಮದ ರೈತ ಪ್ರಕಾಶ ಪಾಟೀಲ ಅವರ ಜಮೀನಿನಲ್ಲಿನ ಕಡಲೆಗೆ ಸಿಡಿ ರೋಗ ಕಾಣಿಸಿಕೊಂಡ ಬಗ್ಗೆ ದೂರು ನೀಡಿದ್ದರು. ಅದರಂತೆ, ನರೇಗಲ್ಲ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು, ಶೇ. 40ರಷ್ಟು ಕಡಲೆ ಬೆಳೆ ಹಾನಿಯಾಗಿದೆ ಎಂದು ವರದಿ ನೀಡಿದ್ದಾರೆ. ಸಂಬಂಧಪಟ್ಟ ಖಾಸಗಿ ಕಂಪನಿಯವರಿಗೂ ಜಮೀನಿನಲ್ಲಿ ಬೆಳೆ ಹಾನಿ ಪರಿಶೀಲನೆ ಕೈಗೊಳ್ಳುವಂತೆ ತಿಳಿಸಲಾಗಿದೆ. ರವೀಂದ್ರಗೌಡ ಪಾಟೀಲ ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ರೋಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net