

ಶಿರಾ: ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ಹೊಂದಿರುವ ಗಣೇಶೋತ್ಸವ ಅರ್ಥಪೂರ್ಣವಾಗಿ ನಡೆಯಬೇಕು. ಗಣೇಶೋತ್ಸವದಲ್ಲಿ ಹಿಂದುಗಳೆಲ್ಲಾ ಒಗ್ಗೂಡಿದ್ದಾರೆ ಎಂಬ ಸಂದೇಶ ಕೊಡಬೇಕು ಎಂದು ಮಾಜಿ ಸಂಸದ ಪ್ರತಾಪಸಿಂಹ ಹೇಳಿದರು.
ನಗರದಲ್ಲಿ ಶನಿವಾರ ಹಿಂದು ಮಹಾಗಣಪತಿ ವಿಸರ್ಜನಾ ಮಹೋತ್ಸವದ ಹಿನ್ನೆಲೆಯಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ ಹಿಂದುಗಳು ಶೇ.79ರಷ್ಟು ಇದ್ದೇವೆ. ಆದರೂ ನಮಗೆ ಮೂರು ಕಾಸಿನ ಬೆಲೆ ಇಲ್ಲ. ಜಾತಿಗಣತಿಯ ಮೂಲಕ ಜಾತಿಗಳ ನಡುವೆ ವೈಮನಸ್ಯ ಉಂಟು ಮಾಡಿ ಹಿಂದುಗಳ ಒಗ್ಗಟ್ಟನ್ನು ಒಡೆಯುವ ಹುನ್ನಾರ ಕಾಂಗ್ರೆಸ ಸರ್ಕಾರಕ್ಕೆ ಇದೆ. ನೀವು ಯಾವ ಜಾತಿಯೇ ಆಗಿರಿ, ಯುವಕರು ಎಲ್ಲ ಜಾತಿ ವ್ಯವಸ್ಥೆ ತೊಡೆದು ಹಾಕಿ ಹಿಂದುತ್ವ ವಿಷಯಲ್ಲಿ ಒಗ್ಗಟ್ಟಾಗಿರಬೇಕು ಎಂದು ಗರ್ಜಿಸಿದರು.
ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೆಂಗಳೂರು ಡಿಜೆ ಹಳ್ಳಿ ಕೆಜಿ ಹಳ್ಳಿ ಕೇಸ್ ವಾಪಸು ತೆಗೆದುಕೊಂಡರು. ಈಗ ಅರಿಶಿಣ, ಕುಂಕುಮ ವಿರೋಧಿಸುವ ಹಾಗೂ ಹಿಂದು ನಂಬಿಕೆಯಾದ ಭುವನೇಶ್ವರಿ ತಾಯಿಯನ್ನು ವಿರೋಧಿಸುವ ಮಹಿಳೆಯಿಂದ ನಮ್ಮ ದಸರಾ ಉದ್ಘಾಟನೆಯಾಗುತ್ತಿದೆ. ವಕ್ಫ್ ಕಾಯ್ದೆ ಹೆಸರಿನಲ್ಲಿ ನಮ್ಮ ರೈತರ ಭೂಮಿ ಕಬಳಿಸುತ್ತಿದ್ದಾರೆೆ. ಆದ್ದರಿಂದ ಎಲ್ಲ ಹಿಂದುಗಳು ಎಚ್ಚೆತ್ತುಕೊಳ್ಳಬೇಕು ಎಂದು ಕರೆನೀಡಿದರು.
ಅದ್ದೂರಿ ಶೋಭಾಯಾತ್ರೆ: ಗವಿಆಂಜನೇಯ ದೇವಸ್ಥಾನದಿಂದ ಹಿಂದು ಮಹಾಗಣಪತಿ ಶೋಭಾಯಾತ್ರೆಯು ಮಧ್ಯಾಹ್ನ 12ಕ್ಕೆ ಗಂಟೆಗೆ ಪ್ರಾರಂಭವಾಗಿದ್ದು, ಜನಪದ ಕಲಾತಂಡಗಳು ಕಳೆಕಟ್ಟಿದವು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಗಣೇಶೋತ್ಸವ ಮೆರವಣಿಗೆಯುದ್ದಕ್ಕೂ ಯುವಕ ಯುವತಿಯರು ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ಜಾಜಮ್ಮನ ಕಟ್ಟೆಯಲ್ಲಿ ಗಣಪನ ಮೂರ್ತಿ ವಿಸರ್ಜಿಸಲಾಯಿತು. ಗಣೇಶೋತ್ಸವದಲ್ಲಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ತುಮುಲ್ ನಿರ್ದೇಶಕ ಎಸ್.ಆರ್.ಗೌಡ, ತೆಂಗು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್, ಹಿಂದು ಜಾಗರಣವೇದಿಕೆಯ ಮಂಜುನಾಥ್, ವಿನಯ್‌ಕುಮಾರ್ ಇತರರು ಭಾಗವಹಿಸಿದ್ದರು.
ಹಿಂದು ಮಹಾಗಣಪತಿ ವಿಸರ್ಜನಾ ಮಹೋತ್ಸವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗೆ ಆಸ್ಪದ ಕೊಡದಂತೆ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ನೇತೃತ್ವದಲ್ಲಿ 1 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಪ್ರತಾಪ್ ಸಿಂಹ: ಹಿಂದು ಬ್ರ್ಯಾಂಡ್ ಎನಿಸಿರುವ ಮಾಜಿ ಸಂಸದ ಪ್ರತಾಪಸಿಂಹ ಭಾಷಣ ಕೇಳಲು ಜನದಟ್ಟಣೆ ಸೇರಿತ್ತು. ಶೋಭಾಯಾತ್ರೆ ವೇಳೆಗೆ ಪ್ರತಾಪಸಿಂಹ ಆಗಮಿಸುತ್ತಿದ್ದಂತೆ ಶಿಳ್ಳೆ, ಕೇಕೆ ಮುಗಿಲುಮುಟ್ಟಿದವು. ಜಯೋಷಗಳ ಸಿಂಹ ಗರ್ಜನೆಯಾಯಿತು. ಪ್ರತಾಪ್ ಭಾಷಣದ ವೇಳೆ ಪೊಲೀಸರು ತೀವ್ರ ನಿಗಾವಹಿಸಿದ್ದರು.