

ರಿಪ್ಪನ್‌ಪೇಟೆ: ಭರತ ಮುನಿಯು ದೇವತೆಗಳನ್ನು ರಂಜಿಸಲು ನಾಟಕವನ್ನು ಸಾಧನವನ್ನಾಗಿ ಮಾಡಿಕೊಂಡಿದ್ದರು ಎಂಬುದು ಪುರಾಣದಲ್ಲಿ ಉಲ್ಲೇಖವಿದ್ದು ಗ್ರೀಕರು ನಾಟಕಕ್ಕೆ ಆದ್ಯತೆ ಕೊಟ್ಟು ಹೆಚ್ಚು ಪ್ರಚಲಿತದಲ್ಲಿದ್ದಾರೆ. ನಮ್ಮ ಪೂರ್ವಜನರು ಬಿಡುವಿನ ವೇಳೆಯ ಮನರಂಜನೆಗಾಗಿ ಮಾಡಿಕೊಂಡಂತಹ ಮಾಧ್ಯಮವೇ ನಾಟಕ ಎಂದು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್.ಎಸ್.ವಿರೂಪಾಕ್ಷಪ್ಪ ತಿಳಿಸಿದರು.
ಶನಿವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ಐಕ್ಯೂ ಎಸಿ ಮತ್ತು ಸಾಂಸ್ಕೃತಿಕ ವೇದಿಕೆಯ ಸಹಯೋಗದೊಂದಿಗೆ ಬಿಎ ವಿದ್ಯಾರ್ಥಿಗಳಿಗೆ ಕನ್ನಡ ಪಠ್ಯದಲ್ಲಿರುವ ರಾಷ್ಟ್ರಕವಿ ಕುವೆಂಪು ರಚಿತ ಮಹಾರಾತ್ರಿ ನಾಟಕದ ವಿಶ್ಲೇಷಣೆ ಮತ್ತು ಪ್ರದರ್ಶನದಲ್ಲಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ನಾಟಕ ಗ್ರಾಮೀಣ ಪ್ರದೇಶದ ಜನರಿಗೆ ಮನಮುಟ್ಟುವ ಒಂದು ಉತ್ಕೃಷ್ಟ ಕಲೆಯಾಗಿತ್ತು. ಅಭಿವೃದ್ಧಿಶೀಲ ಸಮಾಜದಲ್ಲಿ ನಾಟಕ ನೇಪತ್ಯಕ್ಕೆ ಸರಿದಿದ್ದರೂ ಒಂದು ಆಕರ್ಷಣೀಯ ಮನೋ ಅಭಿನಯದ ಸ್ಥಿತಿಯಾಗಿಯೇ ಇಂದಿಗೂ ಉಳಿದುಕೊಂಡಿದೆ ಎಂದರು.
ಮನಸ್ಸಿಗೆ ಹತ್ತಿರವಾದ ಅಭಿನಯ ನಾಟಕದಲ್ಲಿ ದೊರೆಯುತ್ತಿದ್ದು, ಈಗಿನ ಮೊಬೈಲ್ ಯುಗದಲ್ಲಿಯೂ ಜೀವನದ ಪಾಠ ಕಲಿಸುವ ನಾಟಕಗಳ ಪ್ರದರ್ಶನದ ಅಗತ್ಯವಿದೆ. ಇಂತಹ ಒಂದು ವಿಶಿಷ್ಟ ಪ್ರಯತ್ನದಲ್ಲಿ ಸಾಗರದ ಸ್ಪಂದನ ತಂಡ ಹಲವು ವರ್ಷಗಳಿಂದ ತೊಡಗಿಕೊಂಡಿರುವುದು ಹೆಮ್ಮೆಯ ಸಂಗತಿ. ಪುಸ್ತಕದಲ್ಲಿರುವ ಪಠ್ಯವನ್ನು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಅಭಿನಯಿಸಿ ಮನನ ಮಾಡುವುದು ಒಂದು ವಿಶೇಷ ಉಪನ್ಯಾಸವಾಗಿದೆ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳ ಲಾಭ ಪಡೆದುಕೊಳ್ಳಬೇಕೆಂದರು.
ಸಿದ್ಧಾರ್ಥ ತನ್ನ ವೈಭೋಗವನ್ನು ಬಿಟ್ಟು ಬುದ್ಧನಾದ ವೃತ್ತಾಂತ ನಾಟಕದಲ್ಲಿ ಮನೋಜ್ಞವಾಗಿ ಅಭಿನಯಿಸಿದರು. ರಂಗಕರ್ಮಿ ಎಂ.ವಿ. ಪ್ರತಿಭಾ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಟಿ.ಚಂದ್ರಶೇಖರ್, ಪ್ರಾಧ್ಯಾಪಕರಾದ ಡಾ. ರತ್ನಾಕರ್ ಕುನುಗೋಡು, ನರೇಂದ್ರ ಕುಳಗಟ್ಟಿ, ಡಾ. ಶಿವಾಜಿರಾವ್, ಕೆ.ಬಿ.ಮಂಜುಳಾ, ದೈಹಿಕ ಶಿಕ್ಷಣ ನಿರ್ದೇಶಕ ಕುಮಾರಸ್ವಾಮಿ, ಗ್ರಂಥಪಾಲಕ ರಜನಿಕಾಂತ್ ಇತರರಿದ್ದರು.