ಹಕ್ಕುಪತ್ರ ಸಿಕ್ಕರೂ ಸಿಗುತ್ತಿಲ್ಲ ನಿವೇಶನ

Published on

ಶಿಡ್ಲಘಟ್ಟ ಪೌರಾಯುಕ್ತರಿಗೆ ನಾಗರಿಕರ ಮನವಿ

ವಿಜಯವಾಣಿ ಸುದ್ದಿಜಾಲ ಶಿಡ್ಲಘಟ್ಟ

ನಗರಸಭೆಯಿಂದ ನಿವೇಶನದ ಹಕ್ಕುಪತ್ರ ಪಡೆದುಕೊಂಡಿರುವ ಫಲಾನುಭವಿಗಳು ನಿವೇಶನಕ್ಕಾಗಿ ಪರದಾಡುವಂತಾಗಿದೆ.

ನಗರಸಭೆಯಿಂದ ನಿವೇಶನದ ಹಕ್ಕುಪತ್ರ ಪಡೆದುಕೊಂಡಿರುವ ಫಲಾನುಭವಿಗಳು ನಿವೇಶನಕ್ಕಾಗಿ ಪೌರಾಯುಕ್ತೆ ಅಮೃತಾ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, 20 ವರ್ಷಗಳ ಹಿಂದೆ ನಗರಸಭೆಯಿಂದಲೇ ಹಕ್ಕುಪತ್ರಗಳನ್ನು ನೀಡಲಾಗಿದೆಯಾದರೂ ಇದುವರೆಗೆ ಫಲಾನುಭವಿಗಳಿಗೆ ನಿವೇಶನ ಪಡೆಯಲು ಸಾಧ್ಯವಾಗಿಲ್ಲ. ಪುರಸಭೆ, ನಗರಸಭೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ನಗರಸಭೆಯಿಂದ ಪಡೆದ ಹಕ್ಕುಪತ್ರಗಳನ್ನು ತೆಗೆದುಕೊಂಡು ನಿವೇಶನ ಪಡೆಯಲು ಹೋದರೆ ಅಲ್ಲಿ ಖಾಸಗಿ ವ್ಯಕ್ತಿಗಳು ಇದು ನಮಗೆ ಸೇರಿದ ಜಾಗ ಎಂದು ಗಲಾಟೆ ಮಾಡುತ್ತಿದ್ದಾರೆ. ಬಡವರೊಂದಿಗೆ ಏಕೆ ಚೆಲ್ಲಾಟ? ಎಂದು ಫಲಾನುಭವಿಗಳು ಪ್ರಶ್ನಿಸಿದರು.

ವಿ.ಮುನಿಯಪ್ಪ ಶಾಸಕರಾಗಿ, ನಂದ ಮುನಿಕೃಷ್ಣಪ್ಪ ನಗರಸಭೆಯಲ್ಲಿ ಅಧ್ಯಕ್ಷರಾಗಿದ್ದಾಗ ಬಡವರಿಗೆ ನಿವೇಶನದ ಹಕ್ಕುಪತ್ರ ನೀಡಲಾಗಿದೆ. ಆದರೆ ಅಧಿಕಾರಿಗಳ ಕೈವಾಡದಿಂದ ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತಾಗಿದೆ.

ಸೂಕ್ತ ತನಿಖೆ ನಡೆಸಿ ನಿವೇಶನಗಳನ್ನು ನೀಡುವಂತೆ ಸಾರ್ವಜನಿಕರು ಕೋರುತ್ತಿದ್ದಾರೆ. ನಗರಸಭೆಯಿಂದ ಹಾಕಿರುವ ನಾಮಫಲಕವನ್ನೂ ಸಹ ಕೆಲ ಖಾಸಗಿ ವ್ಯಕ್ತಿಗಳು ತೆರವುಗೊಳಿಸಿದ್ದಾರೆ. ಹೀಗಿರುವಾಗ ನಿವೇಶನ ಪಡೆಯಲು ಸಾಧ್ಯವೇ? ಎಂದು ಫಲಾನುಭವಿಗಳು ನಗರ ಸಭೆಯ ಪೌರಾಯುಕ್ತರ ಮುಂದೆ ಅವಲತ್ತುಕೊಂಡರು.

ಫಲಾನುಭವಿಗಳ ಸಮಸ್ಯೆಗಳನ್ನು ಆಲಿಸಿದ ಪೌರಾಯುಕ್ತೆ ಅಮೃತಾ, ಮತ್ತೊಮ್ಮೆ ಮನವಿ ಪತ್ರ ನೀಡಿ, ಅದನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿ, ಸಲಹೆ, ಸೂಚನೆ ಮೇರೆಗೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net