ಈ ವರ್ಷವಾದ್ರೂ ಆಗುತ್ತಾ ಪಾಲಿಕೆ ಎಲೆಕ್ಷನ್​​

bbmp office
Published on

ಆರ್​​.ತುಳಸಿಕುಮಾರ್​

ಬೆಂಗಳೂರು: ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲು ಸ್ಥಳೀಯ ಆಡಳಿತ ವ್ಯವಸ್ಥೆಯಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಸ್ತಿತ್ವದಲ್ಲಿ ಇಲ್ಲದಿರುವುದೇ ಕಾರಣ. ನಾಲ್ಕೂಕಾಲು ವರ್ಷದಿಂದ ಚುನಾವಣೆ ನಡೆಸದ ಕಾರಣ ಪಾಲಿಕೆಯ ಆಡಳಿತ ಹಳಿತಪ್ಪಿದೆ. ಈ ಅವಧಿಯಲ್ಲಿ ಬೆಂಗಳೂರಿಗೆ ಮೂಲಸೌಕರ್ಯ ಕಲ್ಪಿಸುವ ಆಶ್ವಾಸನೆಯನ್ನು ಸರ್ಕಾರ ಈಡೇರಿಸಿಲ್ಲ. ಹಾಗಾಗಿ ಈ ಹೊಸ ವರ್ಷ 2025ರಲ್ಲಾದರೂ ಬಿಬಿಎಂಪಿಗೆ ಚುನಾವಣೆ ನಡೆದು ಚುನಾಯಿತ ಆಡಳಿತ ಅಧಿಕಾರ ನಡೆಸಲಿ ಎಂಬ ಆಶಾವಾದ ಜನರಲ್ಲಿ ನಿರೀಕ್ಷೆ ಹುಟ್ಟಿಸಿದೆ.

ಕಳೆದ 2020ರ ಸೆ.10ರಂದೇ ಹಿಂದಿನ ಪಾಲಿಕೆಯ ಆಡಳಿತದ ಅವಧಿ ಪೂರ್ಣಗೊಂಡಿದೆ. ಆ ಬಳಿಕ ಅಧಿಕಾರದಲ್ಲಿದ್ದ ಸರ್ಕಾರಗಳು ಪಾಲಿಕೆಗೆ ಚುನಾವಣೆ ನಡೆಸುವುದಾಗಿ ಹೇಳಿದರೂ, ಕುಂಟು ನೆಪ ಮಾಡಿ ಎಲೆಕ್ಷನ್ ಮುಂದೂಡಿದವು. ನಾಲ್ಕೂ ವರ್ಷವೂ ಚುನಾವಣೆ ನಡೆಸುವುದಾಗಿ ಆಶ್ವಾಸನೆ ನಿಡುವಲ್ಲೇ ದಿನ ಕಳೆದ ಕಾರಣ ಪಾಲಿಕೆಯಿಂದ ಜನರಿಗೆ ಸಿಗಬೇಕಾದ ಹಲವು ನಾಗರಿಕ ಸೌಲಭ್ಯಗಳು ಸ್ಥಗಿತಗೊಂಡಿವೆ. ಎಸ್‌ಸಿ/ಎಸ್‌ಟಿ ಸೇರಿ ಬಡಜನರಿಗೆ ಕಡ್ಡಾಯವಾಗಿ ಸವಲತ್ತು ವಿತರಿಸಬೇಕಾದ ಕಾರ್ಯಕ್ರಮಗಳು ಕಾಗದದಲ್ಲೇ ಉಳಿದಿವೆ. ಪುರಪಿತೃಗಳು ಇಲ್ಲದ ಕಾರಣ ಜನರು ಅಧಿಕಾರಗಳಿಗೆ ಅರ್ಜಿ ನೀಡಿದರೂ, ಸೌಲಭ್ಯ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸತ್ಯವನ್ನು ಅರಿತಿರುವ ಸರ್ಕಾರ ಆಗಾಗ್ಗೆ ಎಲೆಕ್ಷನ್‌ಗೆ ಸಿದ್ಧವಿದ್ದೇವೆ, ಶೀಘ್ರವೇ ಚುನಾಯಿತ ಆಡಳಿತವನ್ನು ಸ್ಥಾಪಿಸುತ್ತೇವೆ ಎಂಬ ಹುಸಿಸುಳ್ಳು ಜನರಲ್ಲಿ ಆಕ್ರೋಶ ಮೂಡಿಸಿದೆ.

ಚುನಾಯಿತ ಆಡಳಿತ ಏಕೆ ಬೇಕು?:

ಬಿಬಿಎಂಪಿ ಇಡೀ ರಾಜ್ಯದಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡುವ ಹಾಗೂ ಮಾದರಿ ರೀತಿಯಲ್ಲಿ ಆಡಳಿತ ನೀಡುವಲ್ಲಿ ಮುಂದಿದೆ. ಹೊಸ ಹೊಸ ಯೋಜನೆಗಳನ್ನು ರೂಪಿಸಿ ಜನರಿಗೆ ತಲುಪಿಸುವ ಕಾರ್ಯಕ್ಕೆ ಒತ್ತು ನೀಡುತ್ತದೆ. ಮುಖ್ಯವಾಗಿ ವಾರ್ಡ್‌ಗಳಲ್ಲಿ ಸ್ಥಳೀಯ ಜನರ ಬೇಕು-ಬೇಡಗಳ ಬಗ್ಗೆ ಕಿವಿಯಾಗುವ ಕಾರ್ಪೊರೇಟರ್‌ಗಳು ಸ್ಪಂದಿಸುತ್ತಾರೆ. ಜ್ವಲಂತ ಸಮಸ್ಯೆಗಳನ್ನು ಕೌನ್ಸಿಲ್ ಸಭೆಗಳಲ್ಲಿ ಪ್ರಸ್ತಾಪಿಸಿ ಪರಿಹಾರ ಒದಗಿಸಲು ಸಾಧ್ಯವಿದೆ. ಕಾಲಮಿತಿಯೊಳಗೆ ವಾರ್ಡ್ ಜನರ ಅಹವಾಲಿನಂತೆ ಸವಲತ್ತು ಒದಗಿಸಲಾಗುತ್ತದೆ. ಅಧಿಕಾರಿ ಮಟ್ಟದಲ್ಲಿ ತಪ್ಪುಗಳಾಗಿದ್ದಲ್ಲಿ ಅವುಗಳನ್ನು ಸರಿಪಡಿಸಿ ಪಾರದರ್ಶಕ ಆಡಳಿತ ನೀಡಲು ಸಾಧ್ಯವಿದೆ. ಮುಖ್ಯವಾಗಿ ಪಾಲಿಕೆ ಆಡಳಿತದಲ್ಲಿ ವಾರ್ಡ್ ಮಟ್ಟದ ಸಮಿತಿಗಳನ್ನು ರಚಿಸಿ ಅಲ್ಲಿ ಸ್ಥಳೀಯ ಕಾರ್ಯಕ್ರಮಗಳ ಜಾರಿಗೆ ಅವಕಾಶ ಇರುತ್ತದೆ. ಯಾರ ಹಸ್ತಕ್ಷೇಪವೂ ಇಲ್ಲದೆ ಕೆಲವೊಂದು ಲೋಪಗಳನ್ನು ಹೊರತುಪಡಿಸಿ ತ್ವರಿತವಾಗಿ ಕೆಲಸಗಳಾಗುತ್ತವೆ ಎಂಬ ನಂಬಿಕೆ ನಾಗರಿಕರಲ್ಲಿ ಮನೆಮಾಡಿದೆ.

ಆದರೀಗ, ನಾಲ್ಕೂಕಾಲು ವರ್ಷದ ಆಡಳಿತಾಧಿಕಾರಿಗಳ ವ್ಯವಸ್ಥೆಯಲ್ಲಿ ಜನರಿಗೆ ಶೇ.20 ಸೌಲಭ್ಯ ಸಿಕ್ಕಿಲ್ಲ. ಇದನ್ನು ಎಲ್ಲ ಪಕ್ಷಗಳ ಶಾಸಕರು, ಮಾಜಿ ಕಾರ್ಪೊರೇಟರ್‌ಗಳು ಒಪ್ಪಿಕೊಳ್ಳಲಿದ್ದಾರೆ. ಜತೆಗೆ ಒಂದೂವರೆ ವರ್ಷದ ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ಮಣೆ ಹಾಕಿರುವುದರಿಂದ ರಾಜಧಾನಿ ಅಭಿವೃದ್ಧಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಜತೆಗೆ ಚುನಾಯಿತ ಸರ್ಕಾರ ಅಸ್ತಿತ್ವದಲ್ಲಿ ಇಲ್ಲದ ಕಾರಣ ಕೇಂದ್ರ ಸರ್ಕಾರ ಸೇರಿ ವಿವಿಧ ಬಾಬ್ತಿನಿಂದ ಬರಬೇಕಿದ್ದ ಅನುದಾನ ಸ್ಥಗಿತಗೊಂಡಿವೆ. ಹಾಗಾಗಿ ವಿಳಂಬ ಮಾಡದೆ ಪಾಲಿಕೆಗೆ ಕಾಲಮಿತಿಯೊಳಗೆ ಚುನಾವಣೆ ನಡೆಸಬೇಕು ಎಂಬುದಾಗಿ ಮಾಜಿ ಕಾರ್ಪೊರೇಟರ್‌ಗಳು ಆಗ್ರಹಿಸಿದ್ದಾರೆ.

ಗ್ರೇಟರ್ ಬೆಂಗಳೂರು ಕಾಯ್ದೆ ಅಡ್ಡಿ?:

ಹಿಂದಿನ ಬಿಜೆಪಿ ಸರ್ಕಾರ ಬಿಬಿಎಂಪಿಯ 198 ವಾಡ್‌ಗಳ ಸಂಖ್ಯೆಯನ್ನು 225ಕ್ಕೆ ಹಿಗ್ಗಿಸಿತು. ಆದರೆ, ವಾರ್ಡ್ ವಿಂಗಡಣೆ, ಮೀಸಲು ನಿಗದಿಯಲ್ಲಿ ಎಡವಿತು. ನಂತರ ಬಂದಂತೆ ಕಾಂಗ್ರೆಸ್ ಸರ್ಕಾರ ಮಹಾನಗರವನ್ನು ಪುನರ್ವಿಂಗಡಿಸಿ ಗರಿಷ್ಠ 400 ವಾರ್ಡ್‌ಗಳು, 10 ಪಾಲಿಕೆ ರಚಿಸಲು ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ (ಜಿಬಿಜಿಬಿ) ವನ್ನು ವಿಧಾನಮಂಡಲದಲ್ಲಿ ಮಂಡಿಸಿತು. ಇದಕ್ಕೆ ಪ್ರತಿಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿತು. ಪರಾಮರ್ಶೆಗಾಗಿ ಸಮಿತಿ ರಚಿಸಿದ್ದು, ಇದರ ಪೂರ್ಣ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ. ಸರ್ಕಾರ ಕೂಡ ಚುನಾವಣೆ ನಡೆಸಬೇಕೇ, ಬೇಡವೆ ಎಂಬ ಜಿಜ್ಞಾಸೆಯಲ್ಲೇ ಕಾಲ ದೂಡುತ್ತಿದೆ. ಈ ಮಧ್ಯೆ ಸುಪ್ರೀಂಕೋರ್ಟ್‌ನಲ್ಲಿ ಪಾಲಿಕೆ ಚುನಾವಣೆ ಸಂಬಂಧ ಪ್ರಕರಣವೊಂದು ಬಾಕಿ ಉಳಿದಿದೆ. ವಸ್ತುಸ್ಥಿತಿ ಹೀಗಿದ್ದರೂ, ಪಾಲಿಕೆಗೆ ಚುನಾವಣೆ ನಡೆಸಲು ಕಾನೂನು ಅಡ್ಡಿಯಿಲ್ಲ. ಸರ್ಕಾರದ ಇಚ್ಛಾಶಕ್ತಿ ಕೊರತೆಯೇ ಎಲೆಕ್ಷನ್ ಮುಂದಕ್ಕೆ ಹೋಗಲು ಕಾರಣವೆಂಬುದನ್ನು ಜನರೂ ಆಡಿಕೊಳ್ಳುವಂತಾಗಿದೆ. ಈ ಕಸರತ್ತನ್ನು ಮತ್ತಷ್ಟು ಹಿಗ್ಗಿಸದೆ ಶೀಘ್ರವೇ ಪಾಲಿಕೆಯಲ್ಲಿ ಹೊಸ ಆಡಳಿತ ವ್ಯವಸ್ಥೆ ಅಸ್ತಿತ್ವಕ್ಕೆ ಬರುವಂತಾಗಲಿ ಎಂಬ ಆಶಯ ಜನರದ್ದಾಗಿದೆ.

ಲಂಬಿಸುತ್ತಿವೆ ಬಾಕಿ ಕಾಮಗಾರಿಗಳ ಪಟ್ಟಿ:

* ಈಜಿಪುರ ಮೇಲ್ಸೇತುವೆ ಸಹಿತ 10ಕ್ಕೂ ಹೆಚ್ಚು ಫ್ಲೈಓವರ್ ಕಾಮಗಾರಿಗಳಿಗೆ ಹಿನ್ನಡೆ

* ರಸ್ತೆಗಳ ಅಭಿವೃದ್ಧಿ, ಮೇಲ್ದರ್ಜೆ ಹಾಗೂ ಹೊಸ ರೋಡ್‌ಗಳನ್ನು ಮಾಡಲು ವಿಳಂಬ

* ಪ್ರವಾಹ ತಡೆಗೆ ಮಳೆನೀರುಗಾಲುವೆ, ರಾಜಕಾಲುವೆಗಳ ಪುನಶ್ಚೇತನ ಕಾರ್ಯ ಸ್ಥಗಿತ

* ಬಡಜನರಿಗೆ ಪಾಲಿಕೆಯಿಂದ ಸಿಗಬೇಕಿರುವ ವಿವಿಧ ಸವಲತ್ತು, ಕಾರ್ಯಕ್ರಮಕ್ಕೆ ಕೊಕ್

* ವೈಟ್ ಟಾಪಿಂಗ್ ಸೇರಿ ಬೃಹತ್ ಕಾಮಗಾರಿಗಳ ಅನುಷ್ಠಾನ ನಿಧಾನ

* ಕೆರೆ, ಉದ್ಯಾನಗಳ ಒತ್ತುವರಿ ತೆರವು, ಪುನಶ್ಚೇತನ ಕಾರ್ಯಕ್ಕೆ ಅನುದಾನ ಕೊರತೆ

* ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆಗೆ ಹೊಸ ಡಂಪಿಂಗ್ ಸ್ಥಳಗಳ ಗುರುತು ವಿಳಂಬ

* ವಾರ್ಡ್ ಮಟ್ಟದ ವಿವಿಧ ಕಾಮಗಾರಿಗಳು, ವಾರ್ಡ್ ಸಭೆ ಮೇಲ್ವಿಚಾರಣೆಗೆ ಬೆನ್ನು

* ಹೊಸ ವಲಯ ಹಾಗೂ 110 ಹಳ್ಳಿಗಳಲ್ಲಿ ಮೂಲಸೌಕರ್ಯ ಕಲ್ಪಿಸದೆ ಸಮಸ್ಯೆ

* ಬಾಕಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡದೆ ಅರ್ಧದಲ್ಲೇ ಸ್ಥಗಿತ.

ಬಿಬಿಎಂಪಿಯಲ್ಲಿ ಚುನಾಯಿತ ಕಾರ್ಪೊರೇಟರ್‌ಗಳು ಇಲ್ಲದ ಕಾರಣ ಆಡಳಿತ ವ್ಯವಸ್ಥೆ ಕ್ಷೀಣಿಸಿದೆ. ಜನರಿಗೆ ನಾಗರಿಕ ಸೌಲಭ್ಯಗಳು ಸಿಗುತ್ತಿಲ್ಲ. ಅಧಿಕಾರಿ/ಇಂಜಿನಿಯರ್‌ಗಳು ಕಾಮಗಾರಿ ಪರಿವೀಕ್ಷಿಸುವುದನ್ನೇ ಮರೆತಂತಿದೆ. ನ್ಯಾಯಾಲಯಗಳು ಶೀಘ್ರವೇ ಚುನಾವಣೆ ನಡೆಸುವಂತೆ ಸೂಚಿಸಿದರೂ, ಸರ್ಕಾರ ಮಾತ್ರ ನೆಪ ಹೇಳುತ್ತಿದೆ. ಶಾಸಕರಿಗೂ ಎಲೆಕ್ಷನ್ ಇಷ್ಟವಿದ್ದಂತಿಲ್ಲ. ಜನರ ಹಿತದೃಷ್ಟಿಯಿಂದ ಬಿಬಿಎಂಪಿಗೆ ಬೇಗನೆ ಚುನಾವಣೆ ನಡೆಸಬೇಕು.

- ಕಟ್ಟೆ ಸತ್ಯನಾರಾಯಣ, ಮಾಜಿ ಮೇಯರ್

ಸ್ಥಳೀಯ ಆಡಳಿತಗಳಲ್ಲಿ ಒಂದು ದಿನವೂ ಚುನಾಯಿತ ಸರ್ಕಾರ ಇಲ್ಲದ ಸ್ಥಿತಿ ಬರಬಾರದು. ಪಾರದರ್ಶಕ ಆಡಳಿತ ಹಾಗೂ ನಾಗರಿಕರು ಪಾಲ್ಗೊಳ್ಳುವಿಕೆಗೆ ಅವಕಾಶ ನೀಡಲು ಬಿಬಿಎಂಪಿಗೆ ಚುನಾವಣೆ ನಡೆಸಲೇಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಆಡಳಿತದಲ್ಲಿ ಹೊಸ ವ್ಯವಸ್ಥೆ ತರುವ ಜತೆಗೆ 2025ರ ಮಧ್ಯಭಾಗದೊಳಗೆ ಪಾಲಿಕೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಇದಕ್ಕಾಗಿ ನಾವೂ ಕಾಯುತ್ತಿದ್ದೇವೆ.

- ಪಿ.ಆರ್.ರಮೇಶ್, ಮಾಜಿ ಮೇಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net