ಕಡೆಯ ದಿನವೂ ಅಬ್ಬರಿಸಿದ ಪುನರ್ವಸು

bhr car
ಬಾಳೆಹೊನ್ನೂರಿನಿಂದ ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಮಹಲ್ಗೋಡು ಸೇತುವೆ ಮೇಲಿನ ಪ್ರವಾಹದಲ್ಲಿ ಕಾರು ಚಲಿಸುತ್ತಿರುವುದು.
Published on

ಬಾಳೆಹೊನ್ನೂರು: ಐದು ದಿನಗಳಿಂದ ಬಾಳೆಹೊನ್ನೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಬ್ಬರಿಸುತ್ತಿದ್ದ ಪುನರ್ವಸು ಮಳೆ ಕೊನೆಯ ದಿನ ಗುರುವಾರವೂ ಎಡೆಬಿಡದೆ ಸುರಿದು ಜನಜೀವನ ಅಸ್ತವ್ಯಸ್ತಗೊಳಿಸಿತು.

ಬುಧವಾರ ಕೊಂಚ ಕಡಿಮೆಯಾಗಿದ್ದ ಮಳೆ ರಾತ್ರಿ ಮತ್ತೆ ಬಿರುಸುಗೊಂಡಿತು. ಗುರುವಾರ ಇಡೀ ದಿನ ಧಾರಾಕಾರವಾಗಿ ಸುರಿಯಿತು. ಭಾರಿ ಗಾಳಿ, ಮಳೆಗೆ ರಂಭಾಪುರಿ ಪೀಠ-ಮೇಲ್ಪಾಲ್ ರಸ್ತೆಯ ಕೋಣೆಮನೆ ಎಂಬಲ್ಲಿ ಗುರುವಾರ ಬೆಳಗ್ಗೆ ಬೃಹತ್ ಗಾತ್ರದ ಮರ ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳೀಯರು ಮರ ತೆರವುಗೊಳಿಸಿ ಸಂಚಾರ ವ್ಯವಸ್ಥೆ ಸುಗಮಗೊಳಿಸಿದರು.
ಮೇಗರಮಕ್ಕಿ ಗ್ರಾಮದ ಬಿಂತ್ರವಳ್ಳಿ ದ್ಯಾವಯ್ಯ ಎಂಬುವರ ಅಡಕೆ ತೋಟಕ್ಕೆ ದೊಡ್ಡ ಮರ ಬಿದ್ದು ಅಡಕೆ ಮರಗಳು ಮುರಿದುಬಿದ್ದಿವೆ. ಆಡುವಳ್ಳಿ ಗ್ರಾಮದ ಗಡಿಗೇಶ್ವರದ ಸುಂದರೇಶ್ ಎಂಬುವರ ಜಾನುವಾರು ಕೊಟ್ಟಿಗೆ ಕುಸಿದಿದೆ.
ಪಟ್ಟಣದ ಸುದರ್ಶಿನಿ ಚಿತ್ರಮಂದಿರದ ಸಮೀಪ ಕಾಂಕ್ರೀಟ್ ರಸ್ತೆ ರಿವಿಟ್‌ಮೆಂಟ್ ಕುಸಿದಿದ್ದು, ಮಳೆ ಮುಂದುವರಿದಲ್ಲಿ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.
ಮಾಗುಂಡಿಯಿಂದ ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಮಹಲ್ಗೋಡು ಸೇತುವೆ ಮೇಲೆ ಪ್ರವಾಹದ ನೀರು ಹರಿಯುತ್ತಿದ್ದು, ಕೆಲವು ವಾಹನಗಳು ಅಪಾಯವನ್ನರಿಯದೆ ಸೇತುವೆ ಮೇಲೆ ಸಂಚರಿಸುತ್ತಿದ್ದವು. ಸ್ಥಳೀಯರು ವಾಹನಗಳನ್ನು ಪ್ರವಾಹದ ನೀರಿನಲ್ಲಿ ಚಲಾಯಿಸದಂತೆ ಮನವಿ ಮಾಡಿದರೂ ಕೇಳುತ್ತಿರಲಿಲ್ಲ.
ಭದ್ರಾ ನದಿಯಲ್ಲಿ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ದಂಡೆಯ ತೋಟ, ಗದ್ದೆಗಳಿಗೆ ನೀರು ನುಗ್ಗಿತು. ಪಟ್ಟಣದ ಮೀನು ಮಾರ್ಕೆಟ್ ರಸ್ತೆಯ ಬಳಿಯ ಸಂತೆ ಮಾರುಕಟ್ಟೆ ಸಂಕೀರ್ಣಗಳಿಗೆ ಪ್ರವಾಹದ ನೀರು ನುಗ್ಗಲಾರಂಭಿಸಿತು. ಡೋಬಿ ಹಳ್ಳದ ದಂಡೆಯಲ್ಲಿರುವ ಹೋಟೆಲ್, ಜನೌಷಧ ಕೇಂದ್ರದ ಒಳಗೂ ನೀರು ನುಗ್ಗಿತು.
ಮರಗಳು ಬಿದ್ದು ಬಾಳೆಹೊನ್ನೂರು ಮೆಸ್ಕಾಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ 60ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಮೆಸ್ಕಾಂ ಸಿಬ್ಬಂದಿ ಅವಿರತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ಶ್ರಮಿಸುತ್ತಿದ್ದಾರೆ. ಕಂಬಗಳು ತುಂಡಾದ ಕಡೆಗಳಿಗೆ ಮೆಸ್ಕಾಂ ಸಿಬ್ಬಂದಿ ತಕ್ಷಣವೇ ತೆರಳಿ ಹೊಸ ಕಂಬಗಳನ್ನು ಅಳವಡಿಸುತ್ತಿದ್ದಾರೆ ಎಂದು ಮೆಸ್ಕಾಂ ಜೆಇ ಗಣೇಶ್ ತಿಳಿಸಿದ್ದಾರೆ.
ಹಿರೇಗದ್ದೆ ಗ್ರಾಪಂ ವ್ಯಾಪ್ತಿಯ ಅರಳೀಕೊಪ್ಪ ಸುತ್ತಮುತ್ತಲಿನ ಪ್ರದೇಶದಲ್ಲಿ 7ಕ್ಕೂ ಅಧಿಕ ವಿದ್ಯುತ್ ಕಂಬಗಳು ತುಂಡಾಗಿದ್ದು, ಅವುಗಳನ್ನು ಸರಿಪಡಿಸಿ ವಿದ್ಯುತ್ ಸಂಪರ್ಕ ನೀಡಲಾಗಿದೆ. ಗುರುವಾರ ಮುಂಜಾನೆ ಮುಖ್ಯರಸ್ತೆಗೆ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ವಾಲಿಕೊಂಡಿದ್ದು ಅವುಗಳನ್ನು ಸಿಬ್ಬಂದಿ ಸರಿಪಡಿಸಿದ್ದಾರೆ ಎಂದು ಜಯಪುರ ಮೆಸ್ಕಾಂ ಜೆಇ ಪ್ರಶಾಂತ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net