

ಮೈಸೂರು: ಬದಲಾಗುತ್ತಿರುವ ಜೀವನ ಶೈಲಿಯಿಂದ ಕೂಡು ಕುಟುಂಬದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಎಂಎಂಕೆ ಮತ್ತು ಎಸ್‌ಡಿಎಂ ಕಾಲೇಜು ಪ್ರಾಂಶುಪಾಲೆ ಪ್ರೊ.ಸಾಯಿನಾಥ ಮಲ್ಲಿಗೆ ಮಾಡು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಜಯಲಕ್ಷ್ಮೀಪುರಂನ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಜ್ಞಾನವಿಕಾಸ ಕೇಂದ್ರದ ಉದ್ಘಾಟನೆ ಹಾಗೂ ಮಹಿಳಾ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
ಮೊದಲೆಲ್ಲ ಕೂಡು ಕುಟುಂಬಗಳು ಕಂಡು ಬರುತ್ತಿದ್ದವು. ಅಜ್ಜ-ಅಜ್ಜಿ, ಅಣ್ಣ- ತಮ್ಮ, ಅಕ್ಕ-ತಂಗಿ ಸೇರಿದಂತೆ ಮನೆಯಲ್ಲಿ ಎಲ್ಲರೂ ಒಟ್ಟಿಗೆ ವಾಸಿಸುತ್ತಿದ್ದರು. ಸರಿ- ತಪ್ಪುಗಳನ್ನು ತಿದ್ದಿ-ತೀಡಿ ಜೀವನ ಸಾಗಿಸುತ್ತಿದ್ದರು. ಆದರೀಗ ಆರ್ಥಿಕ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ರೀತಿಯ ವಾಣಿಜ್ಯೀಕರಣದಿಂದಾಗಿ ಜೀವನದಲ್ಲಿ ಬದಲಾವಣೆಯಾಗಿದೆ ಎಂದು ಹೇಳಿದರು.
ಈಗ ಜೀವನದ ದೃಷ್ಟಿಕೋನ ಬದಲಾಗಿದೆ. ಹಣ ಸಂಪಾದನೆಯೇ ಮುಖ್ಯವಾಗಿರುವುದರಿಂದ ಮೌಲ್ಯಗಳು ಕುಸಿದಿವೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಹಣದ ಅವಶ್ಯಕತೆ ಇದೆ ಎಂಬ ಕಾರಣಕ್ಕೆ ರಕ್ತ ಸಂಬಂಧವನ್ನು ದೂರ ಮಾಡಿಕೊಳ್ಳಬಾರದು. ಕೂಡು ಕೌಟುಂಬಿಕ ವ್ಯವಸ್ಥೆ ಮುಂದುವರಿಯಬೇಕು. ಪ್ರತಿಯೊಬ್ಬರಿಗೂ ಗುರಿ ಹಾಗೂ ಒಳ್ಳೆಯ ಮೌಲ್ಯಗಳು ಇರಬೇಕು. ಮಹಿಳೆಯರ ಆರ್ಥಿಕ ಸಬಲೀಕರಣ ಬೇಕು. ಉತ್ತಮ ವಿದ್ಯಾಭ್ಯಾಸ ಕೂಡ ಬೇಕು ಎಂದು ಹೇಳಿದರು.
ಇತ್ತೀಚಿನ ದಿನಮಾನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ. ಇದರಿಂದ ಮಹಿಳೆಯರ ಆರ್ಥಿಕ ಸಬಲೀಕರಣ, ಕುಟುಂಬದ ಸಬಲೀಕರಣದ ಮೂಲಕ ಸಮಾಜದಲ್ಲೂ ಕೂಡ ಸಬಲೀಕರಣ ಆಗುತ್ತಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಮಹಿಳಾ ಸಬಲೀಕರಣ ಉದ್ದೇಶದಿಂದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಡಾ. ಹೇಮಾವತಿ ಹೆಗ್ಗಡೆ ಅವರು ಹತ್ತು ಹಲವು ಯೋಜನೆಗಳ ಮೂಲಕ ನೆರವು ನೀಡುತ್ತಿದ್ದಾರೆ. ಇದರ ಪ್ರಯೋಜನ ಪಡೆದು, ಕುಟುಂಬದ ಆರ್ಥಿಕ ಸ್ಥಿತಿ ಸುಧಾರಣೆ ಜತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.
ಮೈಸೂರು ಪ್ರಾದೇಶಿಕ ವಿಭಾಗದ ಹಿರಿಯ ನಿರ್ದೇಶಕ ವಿ.ವಿಜಯಕುಮಾರ್ ನಾಗನಾಳ ಮಾತನಾಡಿ, ಮಹಿಳೆಯರ ಆರೋಗ್ಯ, ನೆರ್ಮಲ್ಯ, ಪೌಷ್ಟಿಕ ಆಹಾರ, ಸಂಸ್ಕಾರ, ಶಿಕ್ಷಣ ಹಾಗೂ ಆರ್ಥಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಜ್ಞಾನವಿಕಾಸ ಕಾರ್ಯಕ್ರಮ ಜಾರಿ ಮಾಡಲಾಗಿದೆ ಎಂದರು.
ಹೆಬ್ಬಾಳು ಪಿ.ಆರ್. ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷೆ ಸುಜಾತಾ ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಎಂ.ಎಸ್. ಗೀತಾ, ಮಮತಾ, ರೂಪಾ, ನಿವೃತ್ತ ಪ್ರಾಂಶುಪಾಲ ನಾ.ಭಾ.ಕೆಂಪರಾಜು, ಮೇಘಾವತಿ ಮೊದಲಾದವರು ಇದ್ದರು.
ಇದೇ ವೇಳೆ ಮಹಿಳೆಯರಿಗೆ ಪುಷ್ಪಗುಚ್ಛ, ಬೆಂಕಿ ಇಲ್ಲದೆ ಅಡುಗೆ ತಯಾರಿ ಸ್ಪರ್ಧೆ, ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು. ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟವೂ ಇತ್ತು.