ಭಕ್ತಿಯಿಂದ ನೀರು ಕೊಟ್ಟರೂ ಭಗವಂತ ಸಂಪ್ರೀತ

31 HHR P 1
ಹೊಳೆಹೊನ್ನೂರಿನಲ್ಲಿ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಅಷ್ಟಾವಧಾನ ನಡೆಸಿಕೊಟ್ಟ ಜಯತೀರ್ಥ ವಿದ್ಯಾಪೀಠದ ವಿದ್ಯಾರ್ಥಿ ಭಾವಬೋಧ ಅವರನ್ನು ಶ್ರೀ ಸತ್ಯಾತ್ಮ ತೀರ್ಥರು ಸನ್ಮಾನಿಸಿದರು.
Published on

ಹೊಳೆಹೊನ್ನೂರು: ಭಕ್ತಿಯಿಂದ ಏನೇ ನೀಡಿದರೂ ಭಗವಂತ ಸ್ವೀಕಾರ ಮಾಡುತ್ತಾನೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.

ಗುರುವಾರ ಇಲ್ಲಿನ ಶ್ರೀ ಸತ್ಯಧರ್ಮ ಮಠದಲ್ಲಿ ನಡೆಯುತ್ತಿರುವ 28ನೇ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಶ್ರೀಗಳು, ಭಕ್ತಿಯಿಂದ ಪತ್ರ, ಪುಷ್ಪ, ಫಲ ಕೊನೆಗೆ ನೀರನ್ನು ಕೊಟ್ಟರೂ ಆತನಿಗೆ ಪ್ರೀತಿಯಾಗುತ್ತದೆ. ಆದರೆ ಆತನಲ್ಲಿ ನಮಗೆ ಅನನ್ಯವಾದ ಭಕ್ತಿ ಇರಬೇಕು. ಭಕ್ತಿ ಇರದೆ ಬೇಕಾದ್ದು ಕೊಟ್ಟರೂ ದೇವರು ಪ್ರೀತನಾಗುವುದಿಲ್ಲ. ಭಕ್ತಿ ಇಲ್ಲದೆ ಎಂಥಹ ವಸ್ತು ಕೊಟ್ಟರೂ ದೇವರು ಸ್ವೀಕಾರ ಮಾಡುವುದಿಲ್ಲ. ನವವಿಧ ಭಕ್ತಿಯಿಂದ ಕೂಡಿದ ನವನೀತವನ್ನು ನೀಡಿದರೆ ನಾನು ಸ್ವೀಕಾರ ಮಾಡುತ್ತಾನೆ. ಹೀಗಾಗಿ ಯಥಾಶಕ್ತಿ ದೇವರ ಗುಣವನ್ನು ಹೇಳಬೇಕು. ಅವನ ದಾಸ್ಯವನ್ನು ನಾವು ಬಯಸಬೇಕು ಎಂದರು.
ಪಂಡಿತ ಆಲೂರು ಶ್ರೀನಿವಾಸಾಚಾರ್ಯ ಮಾತನಾಡಿ, ಶ್ರೀಪಾದಂಗಳವರು ಗುಣಿ ಮತ್ತು ಗುಣರಾಗಿ ಎರಡೂ ಆಗಿದ್ದಾರೆ. ಮನುಷ್ಯ ತಾನು ಗುಣಿಯಾಗಿದ್ದರೆ ಮಾತ್ರ ಇನ್ನೊಬ್ಬನ ಗುಣ ಅರ್ಥವಾಗುತ್ತದೆ. ಗುಣಗಳ ಬಗ್ಗೆ ಮಾತ್ಸರ್ಯ ಇರುವವರ ಸಂಖ್ಯೆಯೇ ಜಾಸ್ತಿ. ಆದರೆ ನಮ್ಮ ಸ್ವಾಮಿಗಳು ಸಣ್ಣ ಗುಣವಿದ್ದವರನ್ನೂ ಪಾಲಿಸುತ್ತಿದ್ದಾರೆ ಎಂದು ಹೇಳಿದರು.
ಜಯತೀರ್ಥ ವಿದ್ಯಾಪೀಠದ ಪ್ರಾಚಾರ್ಯ ಪಂಡಿತ ಸತ್ಯಧ್ಯಾನಾಚಾರ್ಯ ಕಟ್ಟಿ ಮಾತನಾಡಿ, ವಿದ್ಯಾಪೀಠದ ವಿದ್ಯಾರ್ಥಿಗಳ ಕಾರ್ಯಕ್ರಮ ನೀಡಲು ಸ್ವಾಮೀಜಿ ಈ ಬಾರಿ ಮೂರು ದಿನಗಳ ಕಾಲ ಅವಕಾಶ ನೀಡಿದ್ದಾರೆ. ವಿಜ್ಞಾನಿಗಳು ಒಂದೊಡೆ ಚಂದ್ರಯಾನ ನಡೆಸಿದ್ದರೆ, ನಮ್ಮ ವಿದ್ಯಾರ್ಥಿಗಳು ಚರ್ಚಾಗೋಷ್ಠಿಯ ಮೂಲಕ ನಕ್ಷತ್ರಯಾನ ನಡೆಸಿದ್ದಾರೆ ಎಂದರು.
ಸಭಾ ಕಾರ್ಯಕ್ರಮದಲ್ಲಿ ಪಂಡಿತ ವಾಸುದೇವಾಚಾರ್ಯ ಕನಗೋವಿ ಪ್ರವಚನ ನೀಡಿದರು. ಉತ್ತರಾದಿ ಮಠದ ದಿವಾನರಾದ ಶಶಿ ಆಚಾರ್, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷರಾದ ಸುಬ್ಬಣ್ಣಾಚಾರ್ಯ ನವರತ್ನ, ಶ್ರೀನಿವಾಸಾಚಾರ್ಯ ನವರತ್ನ, ಪುರುಷೋತ್ತಮಾಚಾರ್ಯ ನವರತ್ನ, ರಘೂತ್ತಮಾಚಾರ್ಯ ಸಂಡೂರು, ಬಾಳಗಾರು ಜಯತೀರ್ಥಾಚಾರ್ಯ, ಕೃಷ್ಣಾಚಾರ್ಯ ರಾಯಚೂರು, ಪ್ರಕಾಶಾಚಾರ್ಯ, ಅನಿಲ್ ರಾಮಧ್ಯಾನಿ, ಗುರುರಾಜ್ ಕಟ್ಟಿ, ಸಿ.ಪಿ.ವಾದಿರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net