ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸೋತರೂ ಮರಳಿ ಯತ್ನಿಸಿ

12
Published on


ಮೈಸೂರು:
ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು ಸೋತರೂ ನಿರಾಶರಾಗದೆ ಮರಳಿ ಯತ್ನ ಮಾಡುವ ಮೂಲಕ ಗುರಿ ಮುಟ್ಟಬೇಕು ಎಂದು ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸಲಹೆ ನೀಡಿದರು.

ಕೆಎಸ್‌ಒಯುನ ಸ್ಪರ್ಧಾತ್ಮಕ ತರಬೇತಿ ಕೇಂದ್ರವು ಗುರುವಾರ ಆಯೋಜಿಸಿದ್ದ ಕೆಎಎಸ್ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರದ ಸಮಾರೋಪದಲ್ಲಿ ಅಧ್ಯಯನ ಪುಸ್ತಕ ‘ಮುಕ್ತ ಭಂಡಾರ’ ಬಿಡುಗಡೆ ಮಾಡಿ ಮಾತನಾಡಿದರು.

ಯಶಸ್ಸು ಗಳಿಸಿದಾಗ, ಕನಸು ನನಸು ಮಾಡಿಕೊಂಡ ಮೇಲೆ ಸೇವೆಯತ್ತ ಪರಿಪೂರ್ಣ ಸಮರ್ಪಿಸಿಕೊಳ್ಳಬೇಕು. ವ್ಯಕ್ತಿ ಎಷ್ಟೇ ಉನ್ನತ ಹುದ್ದೆಗೆ ಹೋದರೂ ಮಾನವೀಯ ಮೌಲ್ಯಗಳನ್ನು ಮರೆಯಬಾರದು ಎಂದು ಸಲಹೆ ಮಾಡಿದರು.

10ನೇ ತರಗತಿಯಲ್ಲಿ ಓದುವಾಗಲೇ ಭವಿಷ್ಯದಲ್ಲಿ ನಾನು ಕೆಲಸ ಮಾಡಬೇಕಾದ ಕ್ಷೇತ್ರ ಯಾವುದೆಂದು ನಿರ್ಧರಿಸಬೇಕು. ಅದಕ್ಕಾಗಿ ತಯಾರಿಯನ್ನೂ ಆರಂಭಿಸಬೇಕು. ಗುರಿ ಬಗ್ಗೆ ಸ್ಪಷ್ಟತೆಯಿದ್ದರೆ ಅದನ್ನು ತಲುಪುವುದು ಕಷ್ಟವಾಗುವುದಿಲ್ಲ ಎಂದು ಹೇಳಿದರು.
ಕೆಪಿಎಸ್‌ಸಿ, ಯುಪಿಎಸ್‌ಸಿ ಪರೀಕ್ಷೆ ಬರೆದು ನಾಗರಿಕ ಸೇವೆಗಳ ಉನ್ನತ ಹುದ್ದೆಗೇರುವ ಕನಸು ಕಂಡವರಿಗೆ ಸುಲಭವಾಗಿ ಯಶಸ್ಸು ಸಿಗುವುದಿಲ್ಲ. ಕಷ್ಟಪಟ್ಟು ಪ್ರಯತ್ನ ಮಾಡಬೇಕು ಎಂದರು.

ಕೇಂದ್ರ ನಾಗರಿಕ ಸೇವಾ ಪರೀಕ್ಷಾರ್ಥಿಗಳು ಪದವಿಯಲ್ಲಿ ಓದಿದ ವಿಷಯವನ್ನೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಐಚ್ಛಿಕ ವಿಷಯವಾಗಿ ತೆಗೆದುಕೊಳ್ಳುವುದಿಲ್ಲ. ನಾನೂ ವಿಜ್ಞಾನ ವಿದ್ಯಾರ್ಥಿ. ಆದರೆ, ಪರೀಕ್ಷೆಯಲ್ಲಿ ಮಾನವಿಕ ವಿಷಯಗಳನ್ನು ಆಯ್ದುಕೊಂಡಿದ್ದೆ. ಪದವಿಯಲ್ಲಿ ಓದಿದ ವಿಷಯವನ್ನೇ ಆಯ್ದುಕೊಂಡರೇ ವಿಷಯ ಸ್ಪಷ್ಟತೆ ಜೊತೆಗೆ ಪರೀಕ್ಷಾ ಪಠ್ಯಕ್ರಮ ಮುಗಿಸುವುದು ಸುಲಭವಾಗುತ್ತದೆ ಎಂದರು.

ನಾಗರಿಕ ಸೇವಾ ಪರೀಕ್ಷೆಯು ವರ್ಷಕ್ಕೊಮ್ಮೆ ಎದುರಾಗುತ್ತದೆ. ಮೂರು ಹಂತದ ಪರೀಕ್ಷೆಗಳಿರುತ್ತವೆ. ಒಂದು ಹಂತದಲ್ಲಿ ವಿಫಲರಾದರೆ ಮತ್ತೆ ಮೊದಲಿಂದ ಓದಬೇಕು. ತಾಳ್ಮೆ, ಪರಿಶ್ರಮ ಬೇಡುವ ಪರೀಕ್ಷೆಯಾಗಿದ್ದು, ಓದಿನಲ್ಲಿ ನಿರಂತರತೆ ಕಾಯ್ದುಕೊಳ್ಳುವುದು ಮುಖ್ಯ ಎಂದು ಶಾಲಿನಿ ಹೇಳಿದರು.
ಮೂರು ಪ್ರಯತ್ನದಲ್ಲೂ ಐಎಎಸ್ ಉತ್ತೀರ್ಣರಾಗುವುದು ಕಷ್ಟವಾದಾಗ ಸೋಲಿಗೆ ಪಶ್ಚಾತಾಪ ಪಡಬಾರದು. ಎಲ್ಲಿ ಎಡವಿದ್ದೇವೆಂಬುದನ್ನು ಗುರುತಿಸಿ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾಗಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಜಯ ನಮ್ಮದಾಗುತ್ತದೆ ಎಂದರು.
ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ, ಪರೀಕ್ಷಾಂಗ ಕುಲಸಚಿವ ಪ್ರೊ.ಎಚ್.ವಿಶ್ವನಾಥ್, ಶೈಕ್ಷಣಿಕ ಡೀನ್ ಪ್ರೊ.ಎನ್.ಲಕ್ಷ್ಮಿ, ಪ್ರೊ.ಎಂ.ರಾಮನಾಥ ನಾಯ್ಡು, ಐಎಫ್‌ಎಸ್ ಅಧಿಕಾರಿ ಮನೋಜ್ ರಾಜನ್, ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net