

ಕೊಲ್ಹಾರ: ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಗೆ ಪತ್ರಕರ್ತರನ್ನು ಆಹ್ವಾನಿಸಿ, ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡದೆ ಅವಮಾನ ಮಾಡಿದ ಘಟನೆ ಮಂಗಳವಾರ ನಡೆದಿದೆ. ಇದರಿಂದ ಕೆಲ ಕಾಲ ಪತ್ರಕರ್ತರ ಮತ್ತು ಪಟ್ಟಣ ಪಂಚಾಯಿತಿ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು.
ನಂತರ ಗದ್ದಲದ ನಡುವೆಯೇ ಆರಂಭವಾದ ಸಾಮಾನ್ಯ ಸಭೆಯಲ್ಲಿ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆದವು.
ಸದಸ್ಯ ಮಹಾಂತೇಶ ಗಿಡ್ಡಪ್ಪಗೋಳ ಮಾತನಾಡಿ, ಪಟ್ಟಣದ ಜನತೆ 25 ವರ್ಷಗಳ ಹಿಂದೆ ಮನೆ ಕಟ್ಟಿಕೊಂಡಿದ್ದಾರೆ. ಈಗ ಇ-ಸ್ವತ್ತು ಮಾಡಿಸಲು ಉತಾರ ನೀಡಲು ಕಟ್ಟಡದ ಪರವಾನಗಿ ಕೇಳಿದರೆ ಅವರು ಎಲ್ಲಿಂದ ಕೊಡಬೇಕು? ಕಟ್ಟಡ ಪರವಾನಗಿ ಇಲ್ಲದೆ ಇ-ಸ್ವತ್ತು ಉತಾರ ನೀಡಲು ಅವಕಾಶ ಮಾಡಿ ಕೊಡಬೇಕು ಎಂದು ಮನವಿ ಮಾಡಿದರು.
ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೆಲ ಬಡಾವಣೆಗಳಲ್ಲಿ ಬೀದಿ ದೀಪಗಳಿಲ್ಲ. ಸಮಯಕ್ಕೆ ಸರಿಯಾಗಿ ನೀರು ಬಿಡುತ್ತಿಲ್ಲ. ಪಟ್ಟಣ ಪಂಚಾಯಿತಿ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುತ್ತಿಲ್ಲ. ಇದರಿಂದ ಸಾರ್ವಜನಿಕರ ಕೆಲಸಗಳಾಗುತ್ತಿಲ್ಲ. ಅಂಥ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಪಟ್ಟಣದಲ್ಲಿ ರಸ್ತೆ ಮಧ್ಯದಲ್ಲೇ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ವಾಹನ ನಿಲುಗಡೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಸದಸ್ಯ ತೌಶ್ೀ ಗಿರಗಾವಿ ಸಭೆಯ ಗಮನಕ್ಕೆ ತಂದರು.
ಪಂ.ಪಂ. ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ, ಮುಖ್ಯಾಧಿಕಾರಿ ಉಮೇಶ ಚಲವಾದಿ, ಸದಸ್ಯರಾದ ಮಹಾಂತೇಶ ಗಿಡ್ಡಪ್ಪಗೋಳ, ಬಾಬು ಭಜಂತ್ರಿ, ತೌಶ್ೀ ಗಿರಗಾವಿ, ಲಕ್ಷ್ಮೀಬಾಯಿ ಜಿಡ್ಡಿಬಾಗಿಲ, ನಿಂಗಪ್ಪ ಗಣಿ, ಲಕ್ಷ್ಮೀಬಾಯಿ ಹೆರಕಲ್ಲ, ಅಪ್ಪೇಶಿ ಮಟ್ಯಾಳ ಉಪಸ್ಥಿತರಿದ್ದರು.
ಸಂಬಳ ಕೊಟ್ಟಿಲ್ಲವೆಂದು ಮಹಿಳಾ ಸಿಬ್ಬಂದಿ ಕಣ್ಣೀರು: ಪಟ್ಟಣ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ಶಂಕ್ರಮ್ಮ ಚೌಡಪ್ಪಗೋಳ ಅವರು, ಕಳೆದ ಎರಡು ವರ್ಷದಿಂದ ಸಂಬಳ ನೀಡಿಲ್ಲ. ಜೀವನ ಸಾಗಿಸುವುದು ಕಷ್ಟವಾಗುತ್ತಿದೆ ಎಂದು ಸಭೆಯಲ್ಲಿ ಕಣ್ಣೀರು ಹಾಕಿದರು. ಆಗ ಸದಸ್ಯ ಅಪ್ಪೇಶಿ ಮಟ್ಯಾಳ ಸೇರಿದಂತೆ ಹಲವು ಸದಸ್ಯರು ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ತಕ್ಷಣ ವೇತನ ನೀಡುವಂತೆ ತಾಕೀತು ಮಾಡಿದರು.
ಪತ್ರಕರ್ತರಿಗೆ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಆದರೆ ಪ.ಪಂ. ಅಧ್ಯಕ್ಷರು ಪತ್ರಕರ್ತರನ್ನು ಹೊರಗೆ ಕಳಿಸಿ ಎಂದು ಸೂಚಿಸಿದ್ದರಿಂದ ಅವರನ್ನು ಹೊರಗೆ ಕಳಿಸಬೇಕಾಯಿತು.
| ಉಮೇಶ ಚಲವಾದಿ, ಪಪಂ ಮುಖ್ಯಾಧಿಕಾರಿ
ಪ.ಪಂ. ಸಾಮಾನ್ಯ ಸಭೆಗೆ ಪತ್ರಕರ್ತರಿಗೆ ಅವಕಾಶ ನೀಡಬೇಕೋ ಬೇಡವೋ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಪತ್ರಕರ್ತರನ್ನು ಹೊರಗೆ ಹಾಕಿ ಎಂದು ನಾನು ಮುಖ್ಯಾಧಿಕಾರಿಗೆ ಸೂಚಿಸಿಲ್ಲ.
| ಚೆನಮಲ್ಲಪ್ಪ ಗಿಡ್ಡಪ್ಪಗೋಳ, ಪ.ಪಂ. ಅಧ್ಯಕ್ಷ