ಬಡವನಾಗಿದ್ದರೂ ಶ್ರೀಮಂತವಾಗಿ ಬದುಕಬೇಕು

Pravachan-Siddeshwar Shri new
Published on

ಒಬ್ಬ ಮುದುಕಿ. ಆಕೆಯದೊಂದು ಪುಟ್ಟ ಮನೆ. ಅಲ್ಲೊಂದು ಸಣ್ಣ ವನ. ಅಲ್ಲಿ ಅದ್ಭುತ ವನ ಮತ್ತು ಮನ ಇತ್ತು. ಸುತ್ತಲೂ ಒಂದಿಷ್ಟು ಹೂ ಮತ್ತು ಹಣ್ಣಿನ ಗಿಡಗಳನ್ನು ನೆಟ್ಟು, ಪೋಷಿಸಿ ಅವನ್ನೆಲ್ಲ ಸಂರಕ್ಷಿಸಿ ದೊಡ್ಡ ಮರಗಳನ್ನಾಗಿಸಿದ್ದಳು. ಹಲವು ವರ್ಷಗಳ ಹಿಂದೆ ಆಕೆಯ ಪತಿ ತೀರಿಕೊಂಡಿದ್ದ. ಅಗಲುವಾಗ ಆಕೆಗೆ ನೋಡು, ನಾನು ಹೋದೆನೆಂದು, ಕೊರಗದಿರು. ಗಿಡ-ಮರಗಳ ರೂಪದಲ್ಲಿ ಬರುವೆ. ಹೂವಿನ ಮೂಲಕ ಸುವಾಸನೆ, ಹಣ್ಣುಗಳ ಮೂಲಕ ರಸ ನೀಡುವೆ. ಹಾದು ಹೋಗುವವರಿಗೆ ಮರವಾಗಿ, ನೆರಳಾಗಿ ಇರುವೆ. ಚಿಂತಿಸದೆ ಗಿಡ-ಮರಗಳನ್ನು ಪೋಷಿಸು ಎಂದು ಹೇಳಿ ಜೀವಬಿಟ್ಟಿದ್ದ. ಅಂದಿನಿಂದ ಆಕೆ ಪತಿ ಇಲ್ಲವೆಂದು ಕಣ್ಣೀರು ಹಾಕದೆ ವೃಕ್ಷಗಳನ್ನು ಬೆಳೆಸುವುದರಲ್ಲೇ ತಲ್ಲೀನಳಾದಳು. ಪತಿ ಹೋದ ತರುವಾಯವೂ ಗಿಡ-ಮರಗಳನ್ನು ನೋಡುತ್ತ ಆನಂದದಿಂದ ಇದ್ದಳು. ಆ ಮುದುಕಿಯ ತೋಟದ ಹಾದಿಯಲ್ಲಿ ಅಡ್ಡಾಡುವ ಜನರೆಲ್ಲರೂ ಒಂದು ಕ್ಷಣ ಅಲ್ಲಿ ಕೂತು ಆಸರೆ ಪಡೆದು ದಣಿವಾರಿಸಿಕೊಳ್ಳುತ್ತಿದ್ದರು. ಮುದುಕಿಯು ಬಂದವರಿಗೆ ಹಣ್ಣು ಕೊಡುತ್ತಿದ್ದಳು. ಅವರು ಹೂವಿನ ಸುವಾಸನೆ ಹೀರುತ್ತ, ಹಣ್ಣಿನ ಸ್ವಾದವನ್ನು ಸವಿದು ಆನಂದದಿಂದ ಮತ್ತೆ ತಮ್ಮ ಹಾದಿಗೆ ಹೋಗುತ್ತಿದ್ದರು. ಬಂದ ಮಂದಿಗೆಲ್ಲ ನೀರು ನೀಡಿ ಉಪಚರಿಸುತ್ತಿದ್ದಳು. ಖುಷಿ ಪಡುತ್ತಿದ್ದಳು. ಹೀಗೆ ಸಾಗಿತ್ತು ಆಕೆಯ ದೈನಂದಿನ ಆನಂದದ ಜೀವನ. ಅದೊಮ್ಮೆ ಮುದುಕಿಯ ಗುಡಿಸಲಿನ ತುಸು ದೂರದಲ್ಲಿ ಶ್ರೀಮಂತನೊಬ್ಬ ಬಂದು ಆಸುಪಾಸಿನ ಹತ್ತಾರು ಎಕರೆ ಜಮೀನನ್ನು ಖರೀದಿಸಿ ಅರಮನೆಯೊಂದನ್ನು ಕಟ್ಟಿಸಿದ. ಉದ್ಘಾಟನೆ ದಿನ ಬಂಧು-ಮಿತ್ರರಿಗೆಲ್ಲ ಭೂರಿಭೋಜನವನ್ನೇ ಏರ್ಪಡಿಸಿದ. ಮುದುಕಿ ದೂರದಿಂದ ತನ್ನ ಗುಡಿಸಲಿನಿಂದಲೇ ಎಲ್ಲವನ್ನೂ ಗಮನಿಸಿ ಅರಮನೆಗೆ ಬಂದು ಹೋಗುವವರ ಕಂಡು ಸಂಭ್ರಮಪಟ್ಟಳು. ಪ್ರವೇಶಕ್ಕೆ ಬಂದ ಜನ ಉಂಡು ಮರಳುವಾಗ ಎಲ್ಲಿಂದಲೋ ಹೊಡೆದು ತಂದಾನ. ಇಲ್ಲಿ ತಂದು ಸುರಿವ್ಯಾನ ಅಷ್ಟ ಎಂದು ಹೇಳುತ್ತ ಹೊರಟರು. ಮನೆಯೊಳಗ ಬಂದ ಜನ ಶ್ರೀಮಂತನೆದುರು ಅಬ್ಬ..! ಏನು ಅರಮನೆ ನಿಂದು ಎಂದು ಹೊಗಳಿದವರು, ಅದೇ ಜನ ಹೊರಗೆ ಹೋಗುವಾಗ ಹಾಗೆ ಬೈಯುತ್ತ ಹೋಗುತ್ತಿದ್ದರು. ಹೀಗಿದೆ ಜನರ ಮನಸ್ಸು. ಇದೊಂದು ಎಲ್ಲರ ಮನಃಶಾಸ್ತ್ರದ ಪರಿಚಯ ಅಷ್ಟೇ. ಆದರೆ ಅರಮನೆ ಕಟ್ಟಿಸಿದ ಸಿರಿವಂತನಿಗೆ ಜನರ ಈ ಮಾತು ಗೊತ್ತಾಗಲಿಲ್ಲ.
ಒಂದು ದಿನ ತನ್ನ ಅರಮನೆ ಮಹಡಿ ಮೇಲೆ ಓಡಾಡುವಾಗ ಅನತಿ ದೂರದಲ್ಲಿದ್ದ ಸಣ್ಣ ಗುಡಿಸಲು ಕಂಡು ಕೋಪಗೊಂಡ. ನನ್ನ ಅರಮನೆ ಪಕ್ಕದಲ್ಲಿ ಸಣ್ಣ ಗುಡಿಸಲೇ? ಛೆ.. ಎಂತ ಕಳಂಕ ಎಂದುಕೊಂಡ. ಮನೆ ಕಟ್ಟಿಸಿದ ಎರಡೇ ದಿನಕ್ಕೆ ಶ್ರೀಮಂತನ ಆನಂದವೆಲ್ಲ ಮಾಯ. ಹೇಗಾದರೂ ಮಾಡಿ ಆ ಮುದುಕಿಯ ತೋಟ ಖರೀದಿಸಿ ಗುಡಿಸಲು ಕೆಡವಿಹಾಕಲು ನಿರ್ಧರಿಸಿ, ಮುದುಕಿ ಬಳಿ ತೆರಳಿ ಏ ಮುದುಕಿ, ನಿನ್ನ ಈ ತೋಟದ ಬೆಲೆ ಎಷ್ಟು? ನನ್ನ ಈ ಭವ್ಯ ಬಂಗಲೆಯ ಹತ್ತಿರ ನಿನ್ನ ಈ ಪುಟ್ಟ ಹರಕು-ಮುರುಕಿನ ಗುಡಿಸಲು ಶೋಭಿಸುತ್ತಿಲ್ಲ ಎಂದ. ಆ ಮುದುಕಿಯು ನಿನ್ನ ಮನೆ ಕಂಡು ನನಗೆ ಬಹಳ ಸಂತೋಷವಾಗಿದೆ. ನನ್ನ ಗುಡಿಸಲನ್ನು ಕಂಡು ನಿನಗೇಕೆ ತಾಪವಾಗಿದೆ? ನನ್ನ ಮನೆಯಿದು. ಎಪ್ಪತ್ತು ವರ್ಷಗಳ ಹಿಂದಿನದು. ನಿನ್ನದು ನಿನ್ನೆ-ಮೊನ್ನೆಯದು. ನಿನ್ನ ಮನೆಗೆ ಬಂದ ಜನ ನಿನ್ನನು ಹರಸಿ ಹೋಗುವಾಗ ನಾನದೆಷ್ಟು ಖುಷಿಪಟ್ಟೆ. ನನಗೀಗ ತಿಳಿಯಿತು. ನನ್ನ ಗುಡಿಸಲಿನಲಿ ಆನಂದವಿದೆ. ನಿನ್ನ ಅರಮನೆಯಲಿ ಬರೀ ತಾಪವಿದೆ ಎಂದಳು. ಎಷ್ಟು ಬೆಲೆ ಹೇಳತೀ, ಕೇಳತೀ ಕೇಳು. ಕೊಡುವೆ ಎಂದ. ನೋಡಪ್ಪ ಈ ನನ್ನ ಸಣ್ಣ ಮನೆಗೆ ದಿನಾಲೂ ನೂರಾರು ಜನ ಬರತಾರ, ಗಿಡದ ಕೆಳಗೆ ಕೂಡತಾರ, ಹಣ್ಣು ತಿಂದು ಆನಂದದಿಂದ ಹೋಗತಾರ. ಪಕ್ಷಿಗಳು ಖುಷಿಯಾಗಿ ಹಾಡತಾವ. ನನ್ನ ಈ ತೋಟ ಮಕ್ಕಳು, ಹಿರಿಯರು, ಪ್ರಾಣಿ-ಪಕ್ಷಿಗಳು ಪ್ರೀತಿಸುವ ಸ್ವರ್ಗ. ನನ್ನ ಪತಿಯ ಇರುವಿಕೆಯ ಸಾಕ್ಷಿ. ನಿನ್ನ ಮನ್ಯಾಗ ಏನದ? ಹೊರಗ ಎರಡು ನಾಯಿಗಳು. ಅವು ಯಾರೂ ಬರದಂಗ ಬೊಗಳುತಾವ. ಮನೆಯೊಳಗಿರುವ ನಾಯಿ ಹೊರಗಿನ ಜನ ಯಾರೂ ಒಳಗ ಬರದಂಗ ತಡೀತಾವ. ಎಂತಹ ದಾರಿದ್ರೃದ ಜೀವನ ನಿನ್ನದು. ಶ್ರೀಮಂತನಾಗಿಯೂ ದರಿದ್ರನಾಗಿ ಬದುಕೋದಕ್ಕಿಂತ, ಬಡವನಾಗಿದ್ದರೂ ಶ್ರೀಮಂತನಾಗಿ ಬದುಕುವುದು ಮಹತ್ವದ್ದು. ನಮ್ಮ ಮನೆ ನಮ್ಮನ್ನು ಶ್ರೀಮಂತನಾಗಿಸುವುದಿಲ್ಲ. ನಮ್ಮ ಮನಸ್ಸು ನಮ್ಮನ್ನು ಶ್ರೀಮಂತನನ್ನಾಗಿಸುತ್ತದೆ. ನಿಂದ್ಯಾವ ಸಂಪತ್ತು ಹೋಗು. ನಿನ್ನ ಇಡೀ ಆಸ್ತಿ ನನ್ನ ಈ ತೋಟದಲ್ಲಿನ ಒಂದು ಗಿಡದ ಎಲೆಗೂ ಸಮವಲ್ಲ. ಮೊದಲು ಇಲ್ಲಿಂದ ತೊಲಗು ಎಂದಳು.

-- ರಾಜೇಂದ್ರಕುಮಾರ ಬಿರಾದಾರ, ವಿಜಯಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net