

ಟೇಕಲ್ : ಪ್ರಸ್ತುತ ದಿನಗಳಲ್ಲಿ ಶುದ್ಧೀಕರಿಸಿದ ನೀರನ್ನೇ ಕುಡಿದರೂ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಕಾಲಟ್ಟದಲ್ಲಿ ಇದಕ್ಕೆ ಭಿನ್ನ ಎಂಬಂತೆ ತೆರೆದ ಬಾವಿ ನೀರು ಕುಡಿದು ಉತ್ತಮ ಆರೋಗ್ಯ ಹೊಂದಿರುವ ಗ್ರಾಮ ಎಲ್ಲರ ಸೋಜಿಗಕ್ಕೆ ಕಾರಣವಾಗಿದೆ. ಮಾತ್ರವಲ್ಲ, ಎಲ್ಲ ನೀರಿಗಿಂತ ನಿಸರ್ಗದತ್ತ ನೀರೇ ಪರಿಶುದ್ಧ ಎಂಬ ಮಾತಿಗೆ ಇದು ಪುಷ್ಟಿ ನೀಡಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ನ ನೋಟವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓಜಾರಹಳ್ಳಿಯೇ ಕೌತುಕಕ್ಕೆ ಸಾಯಾದ ಗ್ರಾಮ.
ಜಿಲ್ಲಾ ಕೇಂದ್ರದಿಂದ 25 ಕಿಮೀ ದೂರದಲ್ಲಿರುವ ಓಜಾರಹಳ್ಳಿಯಲ್ಲಿ 40 ಕುಟುಂಬಗಳು ವಾಸವಾಗಿವೆ. ಈ ಗ್ರಾಮವಾಸಿಗಳಾದ ಇವರೆಲ್ಲ ಇಂದಿಗೂ ಹಿರಿಯರು ಕಟ್ಟಿಸಿರುವ ಬಾವಿ ನೀರನ್ನೇ ಕುಡಿಯಲು ಬಳಸುತ್ತಿದ್ದಾರೆ. ಬಾವಿಯಲ್ಲಿ ಉಕ್ಕುವ ನಿಸರ್ಗದತ್ತ ನೀರು ಕುಡಿಯಲು ಯೋಗ್ಯ ಎಂಬ ಮಾತನ್ನು ಗ್ರಾಮಸ್ಥರು ಆಡುತ್ತಾರೆ. ಮಳೆಗಾಲದಲ್ಲಿ ನೀರು ಯಥೇಚ್ಛವಾಗಿ ಲಭ್ಯವಾಗುತ್ತದೆ. ಬೇಸಿಗೆಯಲ್ಲಿ ನೀರಿನ ಲಭ್ಯತೆ ಸ್ವಲ್ಪ ಕಡಿಮೆಯಾಗುತ್ತದೆ. ಆದರೂ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವುದಿಲ್ಲ.
ಓಜಾರಹಳ್ಳಿಯಲ್ಲಿ ನೋಟವೆ ಗ್ರಾಪಂನಿಂದ ಕೊಳವೆಬಾವಿ ಕೊರೆಸಿ ಪಂಪ್ ಮೋಟಾರ್ ಅಳವಡಿಸಿ ನೀರು ಪೂರೈಕೆ ಮಾಡುತ್ತಿದ್ದರೂ ಗ್ರಾಮಸ್ಥರು ಕೊಳವೆಬಾವಿ ನೀರನ್ನು ಕುಡಿಯುವ ಸಲುವಾಗಿ ಬಳಕೆ ಮಾಡಲು ಆಸಕ್ತಿ ತೋರುತ್ತಿಲ್ಲ ಎಂಬುದು ಪಂಚಾಯಿತಿಯವರ ಮಾತಾಗಿದೆ.
ಆಧುನಿಕತೆ ಬೆಳೆದರೂ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಸೇದುಬಾವಿಯನ್ನು ಆಶ್ರಯಿಸಿಕೊಂಡಿರುವುದು ಇಂಥ ಬಾವಿಗಳ ಉಳಿವಿನ ದೃಷ್ಟಿಯಿಂದ ಗಮನಿಸಬೇಕಾದ ವಿಷಯ.
ನಾನು ಈ ಗ್ರಾಮಕ್ಕೆ ಸೊಸೆಯಾಗಿ ಬಂದಾಗಿನಿಂದಲೂ ಗ್ರಾಮದಲ್ಲಿರುವ ಬಾವಿ ನೀರನ್ನೇ ಕುಡಿಯಲು ಉಪಯೋಗಿಸುತ್ತಿದ್ದೇವೆ. ನಮ್ಮ ಕುಟುಂಬದಲ್ಲಿ ಎಲ್ಲರೂ ಆರೋಗ್ಯವಂತರಾಗಿದ್ದೇವೆ. - ರಾಧಮ್ಮ ಗ್ರಾಮಸ್ಥೆಸೇದು ಬಾವಿ ಸುತ್ತಮುತ್ತ ವಾರದೊಳಗೆ ಸ್ವಚ್ಛಗೊಳಿಸಿ ಇಂತಹ ಬಾವಿ, ಕಲ್ಯಾಣಿಗಳನ್ನು ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿ ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮದು. - ಚವ್ಹಾಣ್, ನೋಟವೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ