

ಬಾಳೆಹೊನ್ನೂರು: ಹೋಬಳಿಯ ವಿವಿಧೆಡೆ ಕೆಲ ದಿನಗಳಿಂದ ಸುರಿಯುತ್ತಿರುವ ಪುಷ್ಯ ಮಳೆ ಹಾಗೂ ಗಾಳಿ ಅಬ್ಬರ ಭಾನುವಾರ ಕ್ಷೀಣಿಸಿದೆ. ಆದರೆ ವಿವಿಧೆಡೆ ಹಾನಿ ಮುಂದುವರಿದಿದೆ.
ಖಾಂಡ್ಯ ಹೋಬಳಿ ಬಿದರೆ ಗ್ರಾಮದ ರತ್ನ ಬೋಬಯ್ಯ ಎಂಬುವರ ಮನೆ ಕುಸಿದಿದೆ. ಇದೇ ಗ್ರಾಮದ ಶಕುಂತಲಾ ಮಂಜಪ್ಪಗೌಡ ಎಂಬುವರ ಮನೆ ಮೇಲೆ ಮರ ಬಿದ್ದು ಛಾವಣಿಗೆ ಹಾನಿಯಾಗಿದೆ. ಬಿದರೆ ಗ್ರಾಪಂ ಗುಂಡಿಹೊಂಬಳ-ಬಿದರೆ ರಸ್ತೆ ಹಾಗೂ ಬಿದರೆ ಗ್ರಾಮದ ಮುಖ್ಯರಸ್ತೆಗೆ ಮರ ಬಿದ್ದು ಸಂಪರ್ಕ ಕಡಿತಗೊಂಡಿದೆ. ಖಾಂಡ್ಯ ಶೌರ್ಯ ವಿಪತ್ತು ಘಟಕದ ಸದಸ್ಯರು ಮರ ತೆರವುಗೊಳಿಸಿದ್ದಾರೆ.
ಬಿದರೆ ಗ್ರಾಮದ ಚಂದ್ರವಳ್ಳಿ ಸಮೀಪದ ಕಿರು ಸೇತುವೆಯಲ್ಲಿ ಧಾರಾಕಾರ ಮಳೆಗೆ ನೀರು ಸರಾಗವಾಗಿ ಹರಿಯದೆ ಕಸಕಡ್ಡಿ ತುಂಬಿಕೊಂಡಿದ್ದು ರಸ್ತೆ ಮೇಲೆ ನೀರು ಹರಿಯುತ್ತಿತ್ತು. ಖಾಂಡ್ಯ ಶೌರ್ಯ ವಿಪತ್ತು ಘಟಕದ ಸ್ವಯಂ ಸೇವಕರು ತ್ಯಾಜ್ಯ ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದಾರೆ.
ಬಾಳೆಹೊನ್ನೂರು ಮೆಸ್ಕಾಂ ವ್ಯಾಪ್ತಿಯ ಅರಳೀಕೊಪ್ಪದಲ್ಲಿ ಸುಮಾರು 20 ವಿದ್ಯುತ್ ಕಂಬಗಳು ಶನಿವಾರ ಭಾರಿ ಗಾಳಿಗೆ ಮುರಿದುಬಿದ್ದು ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮೂರು ದಿನಗಳ ಹಿಂದೆ ರಂಭಾಪುರಿ ಪೀಠ, ಮಸೀದಿಕೆರೆ ವ್ಯಾಪ್ತಿಯಲ್ಲಿ ಬಿದ್ದಿರುವ ವಿದ್ಯುತ್ ಕಂಬಗಳನ್ನು ವಿದ್ಯುತ್ ಗುತ್ತಿಗೆದಾರರ ಮುಷ್ಕರದಿಂದಾಗಿ ಸರಿಪಡಿಸದೆ ಇರದ ಕಾರಣ ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ಮುಂದುವರಿದಿದೆ. ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಗ್ರಾಪಂನಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ರಂಭಾಪುರಿ ಪೀಠ, ಮಸೀದಿಕೆರೆ ಭಾಗದಲ್ಲಿ ಬಿದ್ದಿರುವ ಕಂಬಗಳನ್ನು ಹಾಗೂ ಲೈನ್ ದುರಸ್ತಿ ಕಾರ್ಯವನ್ನು ಜು.29ರ ಬೆಳಗ್ಗೆ ಆರಂಭಿಸುವುದಾಗಿ, ಎರಡು ದಿನದೊಳಗೆ ಈ ಭಾಗದ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡುವುದಾಗಿ ಮೆಸ್ಕಾಂ ಜೆಇ ಗಣೇಶ್ ತಿಳಿಸಿದ್ದಾರೆ.
ಮೂರ್ನಾಲ್ಕು ದಿನಗಳ ಹಿಂದೆ ಹುಯಿಗೆರೆ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಲೈನ್‌ಮನ್ ಒಬ್ಬರು ಹೊಳೆಯಲ್ಲಿ ಈಜಿ ವಿದ್ಯುತ್ ವೈರ್ ಜೋಡಿಸಿದ ಘಟನೆಯಂತೇ ಬಾಳೆಹೊನ್ನೂರು ಮೆಸ್ಕಾಂ ವ್ಯಾಪ್ತಿಯ ಗಡಿಗೇಶ್ವರದಲ್ಲಿ ತುಂಬಿ ಹರಿಯುವ ಭದ್ರಾ ನದಿಯಲ್ಲಿ ಉಕ್ಕಡದಲ್ಲಿ ತೆರಳಿ ವಿದ್ಯುತ್ ಲೈನ್ ದುರಸ್ತಿಪಡಿಸಿದ ಘಟನೆ ಶನಿವಾರ ನಡೆದಿದೆ. ಗಡಿಗೇಶ್ವರ ಫೀಡರ್‌ನಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದ್ದು, ಆ ವ್ಯಾಪ್ತಿಯ ಫೀಡರ್‌ನ ವಿದ್ಯುತ್ ಲೈನ್ ಭದ್ರಾ ನದಿಯ ಮತ್ತೊಂದು ದಡದಲ್ಲಿ ತುಂಡಾಗಿತ್ತು. ಇದನ್ನು ಸರಿಪಡಿಸಲು ನದಿಯನ್ನು ದಾಟಿಯೇ ತೆರಳಬೇಕಿತ್ತು. ಅಧಿಕ ಮಳೆ ಕಾರಣ ನದಿ ದಾಟಲು ಸಮಸ್ಯೆಯಾದ ಕಾರಣ ಬಾಳೆಹೊನ್ನೂರು ಮೆಸ್ಕಾಂ ಜೆಇ ಗಣೇಶ್, ಲೈನ್‌ಮನ್ ಕಾಂತರಾಜು, ಶಿವಕುಮಾರ್ ಅವರು ಉಕ್ಕಡದ ಮೂಲಕ ಭದ್ರಾ ನದಿಯನ್ನು ದಾಟಿ ಫೀಡರ್ ದುರಸ್ತಿಪಡಿಸಿದ್ದಾರೆ. ಅಪಾಯಕಾರಿ ಸ್ಥಿತಿಯಲ್ಲಿದ್ದರೂ ವಿದ್ಯುತ್ ಸಂಪರ್ಕಕ್ಕಾಗಿ ಶ್ರಮಿಸಿದ ಮೆಸ್ಕಾಂ ಸಿಬ್ಬಂದಿ ಶ್ರಮವನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.