ಸಾಧಕರು ಮರೆಯಾದರೂ ಅವರ ಆದರ್ಶ ಎಂದೆಂದೂ ಜೀವಂತ

6NGD7
ನಂಜನಗೂಡಿನ ಡಾ.ಬಿ.ಆರ್.ಅಂಬೇಡ್ಕರ್ ಭವನದ ಆವರಣದಲ್ಲಿ ಮಾಜಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಜನ್ಮದಿನಾಚರಣೆ ಅಂಗವಾಗಿ ಬೋಧಿವೃಕ್ಷವನ್ನು ನೆಟ್ಟು ನೀರೆರೆಯಲಾಯಿತು.
Published on

ನಂಜನಗೂಡು: ಜೀವನದಲ್ಲಿ ಸಾಧನೆ ಮಾಡಿರುವಂತಹ ಯಾವುದೇ ವ್ಯಕ್ತಿ ಭೌತಿಕವಾಗಿ ಮರೆಯಾಗಿದ್ದರೂ ಅವರ ಆದರ್ಶ, ವ್ಯಕ್ತಿತ್ವಕ್ಕೆ ಸಾವಿರುವುದಿಲ್ಲ. ಹೀಗಾಗಿ ಮಾಜಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ತಮ್ಮ ರಾಜಕೀಯ ಜೀವನದುದ್ದಕ್ಕೂ ಶೋಷಿತರ ಪರವಾಗಿ ನಡೆಸಿದ ಹೋರಾಟಗಳಿಂದಾಗಿ ಅವರ ಕಾಯ ಮರೆಯಾದರೂ ನಮ್ಮ ನಡುವೆ ಈಗಲೂ ಜೀವಂತವಾಗಿದ್ದಾರೆ ಎಂದು ಬೌದ್ಧ ಧರ್ಮ ಗುರು ಬೋಧಿರತ್ನ ಭಂತೇಜಿ ಹೇಳಿದರು.


ಪಟ್ಟಣದ ಅಂಬೇಡ್ಕರ್ ಭವನದ ಆವರಣದಲ್ಲಿ ಮಾಜಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಜನ್ಮದಿನಾಚರಣೆ ಅಂಗವಾಗಿ ವಿ.ಶ್ರೀನಿವಾಸ ಪ್ರಸಾದ್ ಅಭಿಮಾನಿಗಳು ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ತಮ್ಮ ರಾಜಕೀಯ ಜೀವನದಲ್ಲಿ ಅಸಮಾನತೆ ವಿರುದ್ಧ ಹೋರಾಡಿದ ವಿ.ಶ್ರೀನಿವಾಸ ಪ್ರಸಾದ್, ದಲಿತ ಸಮುದಾಯದ ಹಿರಿಯಣ್ಣನಾಗಿದ್ದರು, ಅವರು ನಮ್ಮ ಬೆನ್ನ ಹಿಂದೆ ಇದ್ದಾರೆ ಎಂಬ ಧೈರ್ಯ ದಲಿತ ಸಮಾಜಕ್ಕಿತ್ತು, ಶೋಷಿತರ ಪರ ಅಂತಃಕರಣ ಹೊಂದಿದ್ದರು, ನೀನು ಒಳ್ಳೆಯವನಾಗಿದ್ದರೆ ನಾನು ಒಳ್ಳೆಯವನು, ಕೆಟ್ಟವನಾಗಿದ್ದರೆ ನಾನು ನಿನಗಿಂತ ಕೆಟ್ಟವನು ಎನ್ನುತ್ತಿದ್ದರು. ಹೀಗಾಗಿ ಅವರು ನಮ್ಮ ಚೇತನ ಹಾಗೂ ಸ್ಫೂರ್ತಿಯ ಸೆಲೆಯಾಗಿದ್ದರು. ಇಂದಿನ ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದರು, ಬೌದ್ಧ ದಮ್ಮದಿಂದ ಮಾತ್ರ ನನ್ನ ಜನರಿಗೆ ಬೆಳಕು ತೋರಿಸಲು ಸಾಧ್ಯ ಎಂದು ಪ್ರತಿಪಾದಿಸುತ್ತಿದ್ದರು. ಅವರು ತೋರಿದ ತತ್ವ ಆದರ್ಶಗಳ ಹಾದಿಯಲ್ಲಿ ಸಾಗುವ ಮೂಲಕ ಅವರಿಗೆ ಗೌರವ ಸಲ್ಲಿಸೋಣ ಎಂದು ತಿಳಿಸಿದರು.


ಮಾಜಿ ಶಾಸಕ ಬಿ.ಹರ್ಷವರ್ಧನ್ ಮಾತನಾಡಿ ವಿ.ಶ್ರೀನಿವಾಸ ಪ್ರಸಾದ್ ತಮ್ಮ ತತ್ವಾದರ್ಶಗಳ ಮೂಲಕ ಆದರ್ಶ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು. ನಂಜನಗೂಡಿನಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ, ಅಂಬೇಡ್ಕರ್ ಪುತ್ಥಳಿ, ಮಿನಿ ವಿಧಾನ ಸೌಧ, ಹೈಟೆಕ್ ಬಸ್ ನಿಲ್ದಾಣ ಹಾಗೂ ಫ್ಲೈಓವರ್‌ಗಳನ್ನು ನಿರ್ಮಿಸಿದ್ದ ವಿ.ಶ್ರೀನಿವಾಸ ಪ್ರಸಾದ್ ಅವರಿಗೆ ಮೈಸೂರು-ಚಾಮರಾಜನಗರ ಜಿಲ್ಲೆಗಳಲ್ಲಿ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಅವರ ಪ್ರತಿ ಹುಟ್ಟುಹಬ್ಬದಂದು ರಾತ್ರಿ 12 ಗಂಟೆಗೆ ಇಡೀ ಕುಟುಂಬದವರು ಸೇರಿ ಕೇಕ್ ಕತ್ತರಿಸಿ ಅವರಿಗೆ ಶುಭಾಶಯ ಹೇಳುತ್ತಿದ್ದೆವು. ಆದರೆ ಈ ಬಾರಿ ಅವರಿಲ್ಲ ಎಂಬ ಶೂನ್ಯ ಕಾಡುತ್ತಿದೆ ಎಂದು ಹೇಳಿದರು.


ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರವಾಸ ಮಾಡುವ ಸಂದರ್ಭ ಅವರು ಕಟ್ಟಿಸಿದ ಸಮುದಾಯ ಭವನ ಹಾಗೂ ಸರ್ಕಾರಿ ಕಟ್ಟಡಗಳನ್ನು ತೋರಿಸಿ ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ತೋರುವಂತೆ ಹುರಿದುಂಬಿಸುತ್ತಿದ್ದರು. ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ನಂಜನಗೂಡಿನಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ವಿ.ಶ್ರೀನಿವಾಸ ಪ್ರಸಾದ್ ಅವರ ನೆನಪಿಗಾಗಿ ಈ ದಿನ ಅಂಬೇಡ್ಕರ್ ಭವನದ ಆವರಣದಲ್ಲಿ ಬೋಧಿವೃಕ್ಷವನ್ನು ನೆಟ್ಟಿದ್ದೇವೆ, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳಲ್ಲಿ ಬೋಧಿವೃಕ್ಷಗಳನ್ನು ನೆಡುವ ಮೂಲಕ ಅವರನ್ನು ಸ್ಮರಿಸಲಾಗುವುದು ಎಂದು ಹೇಳಿದರು.


ದಸಂಸ ಮುಖಂಡ ಚೋರನಹಳ್ಳಿ ಶಿವಣ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಕೆಂಡಗಣ್ಣಪ್ಪ, ಹೊರಳವಾಡಿ ಮಹೇಶ್, ನಗರಸಭೆ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಜಿ.ಪಂ.ಮಾಜಿ ಸದಸ್ಯ ಚಿಕ್ಕರಂಗನಾಯ್ಕ, ಮಂಡ್ಯ ಮಹದೇವು, ಗೋವರ್ಧನ್, ಮಹದೇವಪ್ರಸಾದ್, ಬಾಲಚಂದ್ರ, ಗಾಯತ್ರಿ, ಮುರುಗೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net