

ಮಂಗಳೂರು: ಕಳೆದ 2-3 ದಿನಗಳಿಂದ ಮಳೆಯಾದರೂ ಕುಡಿಯುವ ನೀರು ಪೂರೈಕೆಯ ತುಂಬೆ ಡ್ಯಾಂ ನೀರಿನ ಮಟ್ಟ ಏರಿಕೆಯಾಗಿಲ್ಲ. ಭಾನುವಾರ ತುಂಬೆ ಡ್ಯಾಂನಲ್ಲಿ ಕನಿಷ್ಟ ನೀರು ಸಂಗ್ರಹವಾಗಿದೆ. ಆದರೆ ಕರಾವಳಿಯ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಮಳೆಯಾಗಿದ್ದರಿಂದ ಎಎಂಆರ್ ಡ್ಯಾಂ ನೀರಿನ ಮಟ್ಟದಲ್ಲಿ ಏರಿಕೆ ಕಂಡಿದೆ.
ಶನಿವಾರ ತುಂಬೆ ಡ್ಯಾಂನಟ ಮಟ್ಟ 3.45ಮೀ. ಇದ್ದು, ಭಾನುವಾರ 0.03 ಇಳಿಕೆಯಾಗಿ 3.42ಮೀ.ಗೆ ತಲುಪಿದೆ. 1993ರಿಂದ ತುಂಬೆ ವೆಂಟೆಡ್ ಡ್ಯಾಂನ ನೀರಿನ ಸಂಗ್ರಹದ ವಿವರಗಳನ್ನು ಗಮನಿಸಿದಾಗ 2003ರ ಜೂ.13ರಂದು ನೀರಿನ ಮಟ್ಟ 0.3 ಅಡಿಗಳಿಗೆ ಇಳಿದಿತ್ತು. ಇದು ಅಂದಿನಿಂದ ಇಂದಿನವರೆಗೆ ತುಂಬೆಯಲ್ಲಿ ಸಂಗ್ರಹವಾದ ಕನಿಷ್ಠ ನೀರಿನ ಸಂಗ್ರಹ. ಆಗ ಸತತ 9 ದಿನದವರೆಗೆ ಇಲ್ಲಿ 10 ಇಂಚಿಗಿಂತ ಕಡಿಮೆ ಪ್ರಮಾಣದಲ್ಲಿ ನೀರಿತ್ತು. (ಹಳೆಯ ಡ್ಯಾಂನಲ್ಲಿ ಅಡಿಗಳ ಆಧಾರದಲ್ಲಿ ನೀರಿನ ಪ್ರಮಾಣ ಲೆಕ್ಕ ಮಾಡಲಾಗುತ್ತಿತ್ತು). 2012(ಜೂ.15)ರಲ್ಲಿ ಕನಿಷ್ಠ 4.7 ಅಡಿ, 2013ರಲ್ಲಿ (ಜೂ.9) 5.3 ಅಡಿ, 2014ರಲ್ಲಿ (ಜೂ.11) 4.10 ಅಡಿ, 2015ರಲ್ಲಿ (ಡಿ.29) 6.3 ಅಡಿ ಹಾಗೂ 2016ರ ಮೇ 20ರಂದು 3.70 ಅಡಿ ನೀರು ಸಂಗ್ರಹವಾಗಿರುವುದು ಆಯಾ ವರ್ಷದ ಕನಿಷ್ಠ ನೀರು ಸಂಗ್ರಹ. 2016ರ ಡಿಸೆಂಬರ್‌ನಲ್ಲಿ ಹೊಸ ಡ್ಯಾಂ ನಿರ್ಮಾಣವಾಗಿ ಅದರಲ್ಲಿ 5 ಮೀ. ನೀರು ನಿಲುಗಡೆ ಮಾಡಲಾಗುತ್ತಿತ್ತು. 2017ರಲ್ಲಿ ಎ.24ರಂದು 4.10 ಮೀ. ನೀರು ಸಂಗ್ರಹಿಸಲಾಗಿರುವುದು ಆ ವರ್ಷದ ಕನಿಷ್ಠ ಸಂಗ್ರಹ. 2019ರ ಮೇ ಮಧ್ಯ ಭಾಗದಲ್ಲಿ ನೀರಿನ ಮಟ್ಟ 2.40 ಮೀ.ಗೆ ಇಳಿದಿತ್ತು! ಭಾನುವಾರ ತುಂಬೆಯಲ್ಲಿ 3.42 ಮೀ.ನೀರಿನ ಮಟ್ಟ ದಾಖಲಾಗಿದ್ದು, ಇತಿಹಾಸದ 2ನೇ ಕನಿಷ್ಠ ನೀರಿನ ಮಟ್ಟವಾಗಿ ದಾಖಲಾಗಿದೆ.
*ಎಎಂಆರ್ ನೀರಿನಮಟ್ಟ ಏರಿಕೆ
ಕುಡಿಯುವ ನೀರಿನ ಸಮರ್ಪಕ ಪೂರೈಕೆ ಉದ್ದೇಶದಿಂದ ಕಳೆದ ವಾರ ಬಿಳಿಯೂರು ಡ್ಯಾಂನಿಂದ ಎಎಂಆರ್ ಡ್ಯಾಂಗೆ ನೀರು ಹರಿಸಲು ಜಿಲ್ಲಾಧಿಕಾರಿ ಆದೇಶ ನೀಡಿದ್ದರು, ಈ ಹಿನ್ನೆಲೆಯಲ್ಲಿ 2 ಮೀ. ನೀರನ್ನು ಎಎಂಆರ್ ಡ್ಯಾಂಗೆ ಹರಿಸಲಾಗಿದೆ. ಕಳೆದ ಭಾನುವಾರ ಎಎಂಆರ್ ನೀರಿನಮಟ್ಟ 15.20ರಷ್ಟಿದ್ದು, ನಂತರ ಮಳೆಯಾಗಿದ್ದರಿಂದ ಗುರುವಾರದ ವೇಳೆ 16.20ಕ್ಕೆ ಏರಿಕೆಯಾಗಿತ್ತು. ಶನಿವಾರ ಎಎಂಆರ್ ನೀರಿನಮಟ್ಟ 17.11 ಮೀ. ಇದ್ದು, ಭಾನುವಾರ ಸಂಜೆ 17.65ಮೀ.ಗೆ ಏರಿಕೆಯಾಗಿದೆ.
---------------------
ಹಲವಡೆ ಮಳೆಯಾದರೂ ಮಂಗಳೂರು ಗ್ರಾಮೀಣ ಭಾಗದ ಹಲವೆಡೆ ನೀರಿನ ಅಭಾವ ಉಂಟಾಗಿದೆ. ನಗರದ ಕೆಲವು ಪ್ರದೇಶಕ್ಕೆ ನೀರು ತಲುಪದಿರುವುದರಿಂದ ಪಾಲಿಕೆ ವತಿಯಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆಯಾಗಿದೆ. ಭಾನುವಾರ ಬೆಂದೂರು ಸ್ಥಾವರ ವ್ಯಾಪ್ತಿಯ ಕೋರ್ಟ್ ವಾರ್ಡ್, ಕಾರ್‌ಸ್ಟ್ರೀಟ್, ಬಾವುಟಗುಡ್ಡೆ, ಆಕಾಶವಾಣಿ, ಪದವು, ಗೋರಿಗುಡ್ಡೆ, ಸೂಟರ್‌ಪೇಟೆ, ಶಿವಭಾಗ್, ಬೆಂದೂರು, ಕದ್ರಿ, ವಾಸ್ ಲೇನ್, ಕುದ್ರೋಳಿ, ಮೀನುಗಾರಿಕಾ ಬಂದರು, ಕೊಡಿಯಾಲ್‌ಬೈಲ್. ಪಡೀಲ್ ಸ್ಥಾವರ ವ್ಯಾಪ್ತಿಯ ಮಂಗಳಾದೇವಿ, ಅತ್ತಾವರ, ಬಾಬುಗುಡ್ಡೆ, ವೆಲೆನ್ಸಿಯ, ಜಪ್ಪಿನಮೊಗರು, ಬಿಕರ್ನಕಟ್ಟೆ, ಉಲ್ಲಾಸ್ ನಗರ, ಬಜಾಲ್, ತಿರುವೈಲು, ವಾಮಂಜೂರು. ಶಕ್ತಿನಗರ ಟ್ಯಾಂಕ್: ಕುಂಜತ್ತಬೈಲ್, ಮುಗುರೋಡಿ, ಶಕ್ತಿ ನಗರ, ಸಂಜಯ ನಗರ, ಪ್ರೀತಿ ನಗರ, ಮಂಜಡ್ಕ, ರಾಜೀವನಗರ, ಬೊಂದೆಲ್, ಗಾಂಧಿನಗರ, ಶಾಂತಿನಗರ, ಕಾವೂರು. ತುಂಬೆ ಪಣಂಬೂರು ನೇರ ಮಾರ್ಗ ವ್ಯಾಪ್ತಿಯ ಕಂಕನಾಡಿ, ನಾಗುರಿ, ಪಂಪ್‌ವೆಲ್, ಬಲ್ಲೂರುಗುಡ್ಡೆ, ಪಡೀಲ್‌ಗೆ ನೀರು ಪೂರೈಕೆಯಾಗಿದೆ.
----------------------
ಕಳೆದ ಒಂದಡೆರಡು ದಿನಗಳಿಂದ ಜಿಲ್ಲೆಯಲ್ಲಿ ಮಳೆಯಾಗಿದ್ದರಿಂದ ಡ್ಯಾಂಗಳಲ್ಲಿ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ನೇತ್ರಾವತಿ ನದಿಯ ಮೂರು ಡ್ಯಾಂಗಳಲ್ಲಿರುವ ನೀರಿನ ಮಟ್ಟವನ್ನು ಪ್ರತಿದಿನ ಅವಲೋಕನ ನಡೆಸಲಾಗುತ್ತಿದೆ. ಸಧ್ಯಕ್ಕೆ ತುಂಬೆ ಡ್ಯಾಂ ನೀರಿನ ಮಟ್ಟ ಯಥಾ ಸ್ಥಿತಿ ಕಾಯ್ದುಕೊಳ್ಳಲು ಶೇ.40ರಷ್ಟು ನೀರನ್ನು ತುಂಬೆ ಡ್ಯಾಂನ ಕೆಳಭಾಗದಿಂದ ನಿರಂತರ ಪಂಪಿಂಗ್ ಮಾಡಲಾಗುತ್ತಿದೆ.
ಸುಧೀರ್ ಶೆಟ್ಟಿ ಕಣ್ಣೂರು, ಮಂಗಳೂರು ಮೇಯರ್