

ಎನ್.ವಿ.ವೆಂಕಟೇಶ್, ಗುಡಿಬಂಡೆ
ತಾಲೂಕಿನಾದ್ಯಾಂತ ಮಳೆ ಇಲ್ಲದೇ ಬಿತ್ತನೆ ಮಾಡಿರುವ ಬೆಳೆಗಳು ಒಣಗಿದ್ದು, ಈಗ ಮಳೆ ಬಂದರೂ ಬೆಳೆ ಕೈಗೆ ಸಿಗುವುದು ಕಷ್ಟ. ಇಂಥ ಸಮಯದಲ್ಲಿ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಲ್ಲಿ ಗುಡಿಬಂಡೆ ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿಲ್ಲದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ಅವೈಜ್ಞಾನಿಕ ವರದಿ ಕೈಬಿಟ್ಟು ವೈಜ್ಞಾನಿಕ ವರದಿ ಸಿದ್ಧಪಡಿಸುವಂತೆ ಮುಗಿಬಿದ್ದಿದ್ದಾರೆ.
ತಾಲೂಕಿನಲ್ಲಿ ಶೇ.80 ರೈತರು ಮಳೆಯನ್ನೇ ಅವಲಂಬಿಸಿದ್ದಾರೆ. ಮಳೆಯಿಲ್ಲದೇ ರೈತಾಪಿ ವರ್ಗ ಕಂಗಾಲಾಗಿದೆ. ಒಂದು ವೇಳೆ ಮಳೆ ಬರದೆ ಇದ್ದರೆ ಕನಿಷ್ಠ ಪಕ್ಷ ಸರ್ಕಾರವಾದರೂ ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡಿ ಪರಿಹಾರ ನೀಡುತ್ತದೆ ಎಂಬ ನಂಬಿಕೆಯಲ್ಲಿ ತಾಲೂಕಿನ ಜನ ಜೀವನ ಮಾಡುತ್ತಿದ್ದರು. ಆದರೆ, ರಾಜ್ಯ ವಿಪತ್ತು ನಿರ್ವಹಣೆ ಕೇಂದ್ರ ನೀಡಿರುವ ಅವೈಜ್ಞಾನಿಕ ವರದಿಯಿಂದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಗುಡಿಬಂಡೆ ಕೈ ಬಿಟ್ಟಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ತಾಲೂಕಿನಲ್ಲಿ ಬರ ಅಧ್ಯಯನ ನಡೆಸಿ, ಮರು ಪರಿಶೀಲನೆಯೊಂದಿಗೆ ಸರ್ಕಾರಕ್ಕೆ ವೈಜ್ಞಾನಿಕ ವರದಿ ನೀಡಿ ರೈತರಿಗೆ ಆಗುವ ನಷ್ಟಕ್ಕೆ ಪರಿಹಾರ ನೀಡಬೇಕೆಂದು ತಾಲೂಕಿನ ರೈತರು ಒತ್ತಾಯವಾಗಿದೆ.
ವಿವಿಧ ಬಗೆಯ ಪ್ರಾರ್ಥನೆ
ತಾಲೂಕಿನಲ್ಲಿ ಮಳೆ ಇಲ್ಲದೆ ಬಿತ್ತಿದ ಬೆಳೆಗಳು ಒಣಗಿ ನಾಶವಾಗಿವೆ. ಇಂಥ ಸಮಯದಲ್ಲಿ ತಾಲೂಕಿನ ರೈತರು ಮಳೆಗಾಗಿ ವಿವಿಧ ದೇವರ ಮೊರೆ ಹೋಗಿ ಪೂಜೆ ಕೈಗೊಂಡು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಅಧಿಕಾರಿಗಳು ತಪು$್ಪ ವರದಿ ನೀಡಿರುವುದು ಸಮಂಜಸವಲ್ಲ. ಸರ್ಕಾರಕ್ಕೆ ವರದಿ ನೀಡುವ ಅಧಿಕಾರಿಗಳು ಎಸಿ ಕೊಠಡಿಗಳಲ್ಲಿ ಕುಳಿತು ವರದಿ ನೀಡುವುದಲ್ಲ, ರೈತರ ಜಮೀನುಗಳಿಗೆ ಭೇಟಿ ನೀಡಿ ವಾಸ್ತವಾಂಶ ಅರಿತು, ರೈತರ ಕಷ್ಟ ಕೇಳಿ ಅವರೊಂದಿಗೆ ಸಮಾಲೋಚನೆ ನಡೆಸಿ ಸರ್ಕಾರಕ್ಕೆ ವೈಜ್ಞಾನಿಕ ವರದಿ ನೀಡಬೇಕು ಎಂಬುದು ತಾಲೂಕಿನ ರೈತಾಪಿ ವರ್ಗದ ವಾದವಾಗಿದೆ.
ತಾಲೂಕಿನಲ್ಲಿ ಮಳೆಯಿಲ್ಲದೇ ತತ್ತರಿಸುತ್ತಿದ್ದೇವೆ, ಬಿತ್ತನೆ ಬೀಜಗಳ ಮತ್ತು ರಸಗೊಬ್ಬರದ ಬೆಲೆ ಹೆಚ್ಚಾಗಿದ್ದರೂ ಸಹ ಸಾಲ ಮಾಡಿ ಬಿತ್ತನೆ ಮಾಡಿದ್ದೇವೆ. ಮಳೆ ಇಲ್ಲದೇ ಬಿತ್ತನೆ ಮಾಡಿರುವ ಬೆಳೆ ಒಣಗಿ ನಾಶವಾಗಿದೆ. ಇಂಥ ಸಮಯದಲ್ಲಿ ಸರ್ಕಾರ ಹೆಚ್ಚು ನಷ್ಟ ಪರಿಹಾರ ಘೋಷಣೆ ಮಾಡಬೇಕು. ಆದರೆ, ಗುಡಿಬಂಡೆಯನ್ನೇ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಕೈಬಿಟ್ಟಿರುವುದು ಅವೈಜ್ಞಾನಿಕವಾಗಿದೆ. ಕೂಡಲೇ ಅಧಿಕಾರಿಗಳು ಮರು ಪರಿಶೀಲನೆ ಮಾಡಿ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿ ನಷ್ಟ ಪರಿಹಾರ ನೀಡಬೇಕು.
ವೇಣುಗೋಪಾಲ, ಚಿಕ್ಕತಮ್ಮನಹಳ್ಳಿ ರೈತ
ಅಧಿಕಾರಿಗಳ ತಪ್ಪು ವರದಿಯೋ ಅಥವಾ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಮಿತಿ ನೀಡಿರುವ ವರದಿಯ ತಪ್ಪೋ ಗೊತ್ತಿಲ್ಲ. ತಾಲೂಕಿನಲ್ಲಿ ಇನ್ನು ಮಳೆ ಬಂದರು ಬೆಳೆಗಳು ಆಗುವುದಿಲ್ಲ. ಇಂತಹ ಸಮಯದಲ್ಲಿ ಸರ್ಕಾರ ರೈತರಿಗೆ ಬೆನ್ನೆಲುಬಾಗಿ ನಿಂತು ಪರಿಹಾರ ಘೋಷಣೆ ಮಾಡಬೇಕು. ಆದರೆ, ಇಷ್ಟೆಲ್ಲ ಬರ ಇದ್ದರು ಸಹ ಈಗಾಗಲೇ ಬರಪೀಡಿತ ತಾಲೂಕುಗಳ ಪಟ್ಟಿ ಘೋಷಣೆ ಮಾಡಿದೆ. ಅದರೆ, ಆ ಪಟ್ಟಿಯಲ್ಲಿ ಗುಡಿಬಂಡೆ ತಾಲೂಕನ್ನು ಕೈ ಬಿಟ್ಟಿರುವುದನ್ನು ಗಮನಿಸಿದರೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ತಪ್ಪಾಗಿದೆ ಎನಿಸುತ್ತದೆ. ಕೂಡಲೇ ಮತ್ತೊಮ್ಮೆ ಪರಿಶೀಲನೆ ಮಾಡಬೇಕಾಗಿದೆ.
ಶ್ರ್ರೀನಿವಾಸ, ಉಪ್ಪಾರಹಳ್ಳಿ
ಸರ್ಕಾರಕ್ಕೆ ಯಾವ ಅಧಿಕಾರಿಯೂ ವರದಿ ನೀಡಿಲ್ಲ, ಸರ್ಕಾರ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ವರದಿ ಪಡೆದು ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡಿದೆ, ನಮ್ಮ ತಾಲೂಕಿನಲ್ಲೂ ಸಹ ಮಳೆಯ ಕೊರತೆಯಿಂದ ಬೆಳೆಗಳು ಒಣಗಿವೆ. ಈ ಬಗ್ಗೆ ಮತ್ತೊಮ್ಮೆ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿ ಗುಡಿಬಂಡೆ ತಾಲೂಕಿನಲ್ಲೂ ಸಹ ಮಳೆಯ ಅಭಾವ ಇದೆ ಎಂದು ಮನವಿ ಮಾಡಿ, ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆ ಮಾಡಲು ಮನವಿ ಮಾಡಲಾಗುತ್ತದೆ.
ಅಮರ ನಾರಾಯಣ ರೆಡ್ಡಿ, ಸಹಾಯಕ ಕೃಷಿ ನಿರ್ದೇಶಕರು, ಗುಡಿಬಂಡೆ.