

ಶಿವಮೊಗ್ಗ: ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ಬಿಡುಗಡೆ ಆಗುವುದು ತಡವಾಗಿತ್ತು. ಈಗ ಬರ ಪರಿಹಾರ ಬಿಡುಗಡೆಯೂ ತಡವಾಗಿದೆ. ಪರಿಹಾರವನ್ನೇ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಕೇಂದ್ರದಿಂದ ನೆರೆ ಇಲ್ಲವೇ ಬರ ಪರಿಹಾರ ನೀಡಲು ಕೆಲವು ಮಾನದಂಡಗಳಿರುತ್ತವೆ. ಕೇಂದ್ರದಿಂದ ಪರಿಹಾರ ಬಿಡುಗಡೆಯಾಗುವುದು ತಡವಾದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮೊದಲು ತನ್ನ ಪಾಲಿನ ಪರಿಹಾರವನ್ನು ರೈತರಿಗೆ ನೀಡಲಿ ಎಂದು ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಜಾನೆ ಖಾಲಿಯಾಗಿದೆ. ರೈತರಿಗೆ ಪರಿಹಾರ ನೀಡಲು ಇವರ ಬಳಿ ಹಣ ಇಲ್ಲ. ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಸಾಧ್ಯವಾಗುವುದಿಲ್ಲ. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 10 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದಿದ್ದ ಸಿಎಂ ಸಿದ್ದರಾಮಯ್ಯ ಎರಡು ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಅಲ್ಪಸಂಖ್ಯಾತರಿಗೆ ನೀಡಲು ಇವರ ಬಳಿ ಹಣವಿದೆ. ಆದರೆ ರೈತರಿಗೆ ಪರಿಹಾರ ನೀಡಲು ಹಣವಿಲ್ಲ ಎಂದು ಕಿಡಿಕಾರಿದರು.
ಬಿಜೆಪಿ ಸರ್ಕಾರ ಇದ್ದಾಗ ನೆರೆ ಪರಿಹಾರ ಹಾಗೂ ತೋಟಗಾರಿಕೆ ಬೆಳೆಗಳ ನಷ್ಟಕ್ಕೆ 24 ಸಾವಿರ ರೂ. ಪರಿಹಾರ ನೀಡಲಾಗಿತ್ತು. ಭತ್ತ ಬೆಳೆದ ರೈತರಿಗೆ ಹೆಕ್ಟೇರ್‌ಗೆ 14 ಸಾವಿರ ರೂ. ಬಿಡುಗಡೆ ಮಾಡಲಾಗಿತ್ತು. ಮನೆ ಕಳೆದುಕೊಂಡವರಿಗೂ ಪರಿಹಾರ ನೀಡಲಾಗಿತ್ತು. ಈಗ ಸಿಎಂ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ದೂರಿದರು.