ಆರು ತಿಂಗಳಾದರೂ ಸರ್ಕಾರ ಟೇಕಾಫ್ ಆಗಿಲ್ಲ

jds programme
ಶುಭಮಂಗಳಾ ಸಮುದಾಯ ಭವನದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಕಡಿದಾಳ್ ಗೋಪಾಲ್ ಅಧಿಕಾರ ಸ್ವೀಕರಿಸಿದರು. ಶಾರದಾ ಪೂರ್ಯಾನಾಯ್ಕ, ಎಸ್.ಎಲ್.ಭೋಜೇಗೌಡ, ಕೆ.ಬಿ.ಪ್ರಸನ್ನಕುಮಾರ್, ಶಾರದಾ ಅಪ್ಪಾಜಿಗೌಡ, ರಾಜಾರಾಮ್, ಗೋವಿಂದಪ್ಪ, ಸಿದ್ದಪ್ಪ, ಗೀತಾ ಸತೀಶ್, ಕಾಂತರಾಜು, ದೀಪಕ್ ಸಿಂಗ್ ಇದ್ದರು.
Published on

ಶಿವಮೊಗ್ಗ: ಆರು ತಿಂಗಳಾದರೂ ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ. ಗ್ಯಾರಂಟಿಗಳ ನಡುವೆ ಅಭಿವೃದ್ಧಿ ಕುಂಠಿತವಾಗಿದ್ದು ಸರ್ಕಾರಕ್ಕೆ ಕನಿಷ್ಠ ಶಾಸಕರ ನಿಧಿಯನ್ನೂ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕಿ ಶಾರದಾ ಪೂರ್ಯಾನಾಯ್ಕ ಕಿಡಿಕಾರಿದರು.

ನಗರದಲ್ಲಿ ಸೋಮವಾರ ಜೆಡಿಎಸ್ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ಈ ರೀತಿಯ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ. ಜನರ ಆದೇಶಕ್ಕೆ ತಲೆಬಾಗಲೇಬೇಕಿದೆ. ಆದರೆ ನಿರೀಕ್ಷೆಯಂತೆ ಸರ್ಕಾರ ಆಡಳಿತ ನಡೆಸಲು ವಿಫಲವಾಗಿದೆ ಎಂದು ದೂರಿದರು.
ಸರ್ಕಾರ ರಚನೆ ಮಾಡಿ ಉಳಿಯುವಷ್ಟು ಶಾಸಕರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಆದರೂ ಕಾಂಗ್ರೆಸ್‌ನವರು ಇತರ ಪಕ್ಷಗಳ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಜೆಡಿಎಸ್ ಪಕ್ಷದ 19 ಶಾಸಕರಲ್ಲಿ ನನ್ನನ್ನೂ ಸೇರಿ ಯಾರೊಬ್ಬರೂ ಕಾಂಗ್ರೆಸ್‌ಗೆ ಹೋಗುವುದಿಲ್ಲ. ಪಕ್ಷದ ವರ್ಚಸ್ ಹೆಚ್ಚಿಸುವ ಕೆಲಸ ಆಗಬೇಕಿದೆ. ಜೆಡಿಎಸ್ ಪಕ್ಷ ಮುಳುಗೇ ಹೋಯ್ತು ಎನ್ನುವ ಕಾಲದಲ್ಲಿ ಪಕ್ಷ ಫಿನಿಕ್ಸ್‌ನಂತೆ ಎದ್ದು ಬರುತ್ತಲೇ ಇದೆ. ಮತ್ತೊಮ್ಮೆ ಆ ಕೆಲಸ ಆಗಬೇಕಿದೆ. ಅದಕ್ಕೆ ಎಲ್ಲ ಕಾರ್ಯಕರ್ತರು ಕೈಜೋಡಿಸಬೇಕಿದೆ ಎಂದು ಮನವಿ ಮಾಡಿದರು.
ಕಡಿದಾಳ್ ಗೋಪಾಲ್ ಅವರು ಪಕ್ಷದ ಧ್ವಜ ಸ್ವೀಕರಿಸುವ ಮೂಲಕ ಜಿಲ್ಲಾಧ್ಯಕ್ಷರಾಗಿ ಪದಗ್ರಹಣ ಮಾಡಿದರು. ಜಿಲ್ಲಾ ಕಾರ್ಯದರ್ಶಿ ಕೆ.ಎಂ.ರಾಮಕೃಷ್ಣ ಪ್ರಸ್ತಾವಿಕವಾಗಿ ಮಾತನಾಡಿದರು. ವಿಧಾನಸಭೆ ಕ್ಷೇತ್ರಗಳ ಅಭ್ಯರ್ಥಿಗಳಾಗಿದ್ದ ಭದ್ರಾವತಿಯ ಶಾರದಾ ಅಪ್ಪಾಜಿಗೌಡ, ತೀರ್ಥಹಳ್ಳಿಯ ರಾಜಾರಾಮ್, ಜಿಲ್ಲಾ ಉಪಾಧ್ಯಕ್ಷ ಗೋವಿಂದಪ್ಪ, ಕಾರ್ಯಾಧ್ಯಕ್ಷ ಸಿದ್ದಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷ ಕಸಟ್ಟಿ ಸತೀಶ್, ಗ್ರಾಮಾಂತರ ಕಾರ್ಯಾಧ್ಯಕ್ಷ ಕಾಂತರಾಜು, ನಗರ ಅಧ್ಯಕ್ಷ ದೀಪಕ್ ಸಿಂಗ್, ಕಣ್ಣಪ್ಪ, ಹುಚ್ಚಪ್ಪ, ಮಧುಕುಮಾರ್, ದಾದಾಪೀರ್, ಮಹೇಶ್, ನರಸಿಂಹ, ಶಿವನಾಯ್ಕ, ಮಹಮ್ಮದ್ ಯುಸೂಫ್, ರಾಜೇಂದ್ರ, ಬಾಸೂರು ಚಂದ್ರೇಗೌಡ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net