ಸಂವಿಧಾನ ಸುಟ್ಟು ಹಾಕಿದರೂ ಮಾತಾಡಲಿಲ್ಲ ಮೋದಿ

h14-Congress 2
Published on

ಹುಬ್ಬಳ್ಳಿ: ಡಾ.ಬಿ.ಆರ್. ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಅಮೂಲ್ಯವಾದ ಸಂವಿಧಾನ ನೀಡಿದ್ದಾರೆ. ಆದರೆ ಅದೇ ಸಂವಿಧಾನವನ್ನು ಬಿಜೆಪಿಯವರು ಸುಟ್ಟು ಹಾಕಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಒಂದಿನಿತು ಮಾತನಾಡಲಿಲ್ಲ ಎಂದು ಗುಜರಾತ ಶಾಸಕ ಜಿಗ್ನೇಶ ಮೇವಾನಿ ಅವರು ಬಿಜೆಪಿ ವಿರುದ್ಧ ಹರಿಹಾಯ್ದರು.
ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ನಿಮಿತ್ತ ಕಾಂಗ್ರೆಸ್ ವತಿಯಿಂದ ಇಲ್ಲಿಯ ನೆಹರು ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಸದ ಅನಂತಕುಮಾರ ಹೆಗಡೆ ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿದರು. ಮೋದಿ ಅವಧಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರಗಳಾಗಿವೆ. ದಲಿತ ಮತ್ತು ಆದಿವಾಸಿಗಳ ಸಂಖ್ಯೆ ಹೆಚ್ಚಿದೆ. ಇದಕ್ಕೆ ಅನುಗುಣವಾಗಿ ಸೌಲಭ್ಯ ಸಿಕ್ಕಿಲ್ಲ.
ಎಲ್ಲ ರಂಗದಲ್ಲೂ ದಲಿತರು ಹಿಂದುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜಾತಿ ಗಣತಿ ಬಗ್ಗೆ ಮಾತನಾಡುತ್ತಿದೆ. ಇದನ್ನು ಬಿಜೆಪಿಗರು ಪರಿಗಣಿಸದೇ ವಿರೋಧಿಸುತ್ತಿದ್ದಾರೆ. ಇದರ ಜತೆಗೆ ಅಂಬೇಡ್ಕರ್ ಅವರನ್ನೂ ಹೀಗಳೆಯುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿ, ರಷ್ಯಾ-ಉಕ್ರೇನ್ ಯುದ್ಧವನ್ನು ಮೋದಿ ನಿಲ್ಲಿಸಿದರು ಎಂದು ಹೇಳುವ ಬಿಜೆಪಿಯವರು ಮಹದಾಯಿ-ಕಳಸಾ ಬಂಡೂರಿ ಯೋಜನೆಗೆ ಅರಣ್ಯ ಇಲಾಖೆ ಅನುಮತಿ ಕೊಡಿಸಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಕಳಸಾ ಬಂಡೂರಿ ಯೋಜನೆ ಜಾರಿಗೆ ಟೆಂಡರ್ ಕರೆದಿದೆ. ಅನುಮತಿ ಸಿಕ್ಕ ತಕ್ಷಣ ಕಾಮಗಾರಿ ಆರಂಭಿಸಲು ಸಿದ್ಧವಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಬರೀ ಸುಳ್ಳು ಹೇಳುವುದರಲ್ಲಿ ಮಗ್ನರಾಗಿದ್ದಾರೆ. ಸ್ವಾಮಿನಾಥನ್ ವರದಿ ಜಾರಿ ಮಾಡಲಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡಲಿಲ್ಲ. ನದಿ ಜೋಡಣೆ ಬಗ್ಗೆ ಮಾತನಾಡಲಿಲ್ಲ. ಗಂಗಾ ನದಿ ಶುದ್ಧೀಕರಣಕ್ಕಾಗಿ 11 ಸಾವಿರ ಕೋಟಿ ರೂ. ಖರ್ಚು ಮಾಡಿದ್ದಾರೆ. ಆದರೂ ಹೇಗಿರಬೇಕು ಹಾಗೇಯೇ ಗಂಗಾ ನದಿ ಇದೆ. ಕಾಂಗ್ರೆಸ್ ಸರ್ಕಾರ 70 ವರ್ಷಗಳಲ್ಲಿ ಏನು ಮಾಡಿದೆ ? ಎಂದು ಪ್ರಶ್ನೆ ಮಾಡುವ ಬಿಜೆಪಿಯವರಿಗೆ 10 ವರ್ಷದಲ್ಲಿ ಮಾಡಿದ ಹಗರಣಗಳ ಬಗ್ಗೆ ಪಟ್ಟಿ ಮಾಡಿ ಕೊಡುವೆ. ತಾಕತ್ತಿದ್ದರೆ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಕೆಲವರು ಮಾತೆದ್ದಿರೆ ಸಂವಿಧಾನ ಬದಲಾಯಿಸುವ ಮಾತನಾಡುತ್ತಿದ್ದಾರೆ. ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ. ಮುಟ್ಟಿದರೆ ಸುಟ್ಟು ಭಸ್ಮ ಆಗುತ್ತಾರೆ ಎಂದು ಬಿಜೆಪಿಯವರಿಗೆ ಎಚ್ಚರಿಕೆ ನೀಡಿದರು.
ಶಾಸಕ ಎನ್.ಎಚ್. ಕೋನರಡ್ಡಿ, ಧಾರವಾಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ, ಬಳ್ಳಾರಿ ಅಭ್ಯರ್ಥಿ ಈ. ತುಕಾರಂ, ಮಾಜಿ ಸಂಸದ ಪ್ರೊ.ಐ.ಜಿ. ಸನದಿ ಇತರರು ಮಾತನಾಡಿದರು.
ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಶಾಸಕರಾದ ಎಂ.ಎಸ್. ಅಕ್ಕಿ, ಕುಸುಮಾವತಿ ಶಿವಳ್ಳಿ, ಅಜ್ಜಂಪೀರ ಖಾದ್ರಿ, ಪ್ರಮುಖರಾದ ಅನಿಲಕುಮಾರ ಪಾಟೀಲ, ಅಲ್ತಾಫ ಹಳ್ಳೂರ, ಬಸವರಾಜ ಗುರಿಕಾರ, ಮೋಹನ ಲಿಂಬಿಕಾಯಿ, ಇಸ್ಮಾಯಿಲ್ ತಮಟಗಾರ, ರಜತ ಉಳ್ಳಾಗಡ್ಡಿಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net