

ಹುಣಸೂರು: ನಮ್ಮ ದೇಶದ ಸಂವಿಧಾನ ಬಹುತ್ವವನ್ನು ಎತ್ತಿ ಹಿಡಿದ ಸಂವಿಧಾನವಾಗಿದೆ ಎಂದು ಶರಣ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಮೋದೂರು ಮಹೇಶಾರಾಧ್ಯ ಅಭಿಪ್ರಾಯಪಟ್ಟರು.
ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಭಾರತ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಹಲವಾರು ದೇಶಗಳ ಸಂವಿಧಾನವನ್ನು ಸುದೀರ್ಘವಾಗಿ ಸಮಗ್ರವಾಗಿ ಅಧ್ಯಯನ ಮಾಡಿದ ಬಳಿಕ ಅಂಬೇಡ್ಕರ್ ಉತ್ತಮ ಸಂವಿಧಾನ ರಚಿಸಿದ್ದಾರೆ. 75 ವರ್ಷ ಕಳೆದರೂ ಸಂವಿಧಾನದ ಆಶಯ ಇಂದಿಗೂ ಈಡೇರದಿರುವುದು ಈ ದೇಶದ ವಿಪರ್ಯಾಸ ಎಂದು ಹೇಳಿದರು.
ಶಾಂತಿ, ಸಮಾನತೆ, ಸಹೋದರತ್ವ, ಸಹಬಾಳ್ವೆ, ನ್ಯಾಯ ಮುಂತಾದವುಗಳನ್ನು ಸಂವಿಧಾನದ ಪೀಠಿಕೆಯಲ್ಲಿ ಅಳವಡಿಸಿರುವುದು ಭಾರತದ ಪ್ರಜೆಗಳಲ್ಲಿ ಆತ್ಮವಿಶ್ವಾಸ ಬೆಳೆಸಲು ಸಹಕಾರಿ. ಅಂತಹ ಮಹನೀಯರ ಆಶಯ ಮತ್ತು ಆದರ್ಶಗಳನ್ನು ಭಾರತದ ಪ್ರಜೆಗಳಾದ ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅಷ್ಟೇ ಮುಖ್ಯ. ಸಂವಿಧಾನವೇ ಭಾರತ ದೇಶದ ಧರ್ಮ ಗ್ರಂಥವಾಗಿದೆ ಎನ್ನುವುದನ್ನು ನಾವೆಲ್ಲರೂ ಅರಿತು ನಡೆದುಕೊಳ್ಳಬೇಕಾದ ಅತ್ಯಗತ್ಯತೆ ಇದೆ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಬಸವಲಿಂಗಯ್ಯ ಮಾತನಾಡಿ, ಸಂವಿಧಾನ ಸರ್ವ ಜನಾಂಗಕ್ಕೂ ಆದರ್ಶವಾಗಿದೆ. ಪ್ರಸ್ತುತ ಬದುಕಿಗೆ ನಾವೆಲ್ಲರೂ ಸಂವಿಧಾನಕ್ಕೆ ಕೃತಜ್ಞರಾಗಿರಬೇಕು ಎಂದು ಹೇಳಿದರು.
ನಗರಸಭೆಯ ಪ್ರಭಾರ ಪೌರಾಯುಕ್ತೆ ಶರ್ಮಿಳಾ ಸಂವಿಧಾನ ಜಾಗೃತಿ ಜಾಥಾ ರಥವನ್ನು ಬರಮಾಡಿಕೊಂಡರು. ನಗರಸಭಾ ಸದಸ್ಯರಾಗಿ ಸತೀಶ್ ಕುಮಾರ್, ಕೃಷ್ಣರಾಜಗುಪ್ತ, ವಿವೇಕಾನಂದ, ರಮೇಶ್, ಮುಖಂಡರಾದ ನಿಂಗರಾಜ ಮಲ್ಲಾಡಿ, ಬಸವರಾಜು, ಕುಮಾರ್ ಕೊಳಘಟ್ಟ ಕೃಷ್ಣ, ಕಾಂತರಾಜು, ರತ್ನಾಪುರಿ ಅಪ್ಪಣ್ಣ, ಜೆ.ಮಹದೇವ್, ಗಜೇಂದ್ರ ಕಿರಿಜಾಜಿ, ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸುಜೇಂದ್ರ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಜು, ನೋಡಲ್ ಅಧಿಕಾರಿ ಗಣಪತಿ ಜಕಾತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೋವಿಂದೇಗೌಡ, ದೈಹಿಕ ಶಿಕ್ಷಣ ಸಮನ್ವಯ ಅಧಿಕಾರಿ ಲೋಕೇಶ್ ಇತರರದ್ದರು.
ಕಿರಿಜಾಜಿ ಗಜೇಂದ್ರ ವಸಂತ ಹೊನ್ನೇನಹಳ್ಳಿ, ಸಿಂಗೇಶ್ ಮುಂತಾದ ಕಲಾವಿದರು ಅಂಬೇಡ್ಕರ್ ಕ್ರಾಂತಿ ಗೀತೆಗಳನ್ನು ಹಾಡಿದರು.