10ವರ್ಷ ಕಳೆದರೂ ಶಾಲಾ ಕಟ್ಟಡ ನಿರ್ಮಾಣವಾಗಿಲ್ಲ

16 NGM 01
ನಾಗಮಂಗಲ ತಾಲೂಕಿನ ಕಂಬದಹಳ್ಳಿ ಗ್ರಾಮದಲ್ಲಿ 1.5 ಕೋಟಿ ರೂ.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭೂಮಿಪೂಜೆ ನೆರವೇರಿಸಿದರು.
Published on

ನಾಗಮಂಗಲ: ಕಳೆದ 7 ವರ್ಷಗಳ ಹಿಂದಿನ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದಾಗ ಕಂಬದಹಳ್ಳಿ ಗ್ರಾಮದಲ್ಲಿ ಗುಂಡಿ ಬಿದ್ದಿದ್ದ ರಸ್ತೆಗೆ ಕನಿಷ್ಠ ಮಣ್ಣು ಹಾಕಿಸಲು ಆಗಿರಲಿಲ್ಲ. ಈ ರಸ್ತೆ ಅಭಿವೃದ್ಧಿಪಡಿಸಲು ಮತ್ತೆ ನಾನೇ ಗೆದ್ದು ಬರಬೇಕಾಯಿತು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲೂಕಿನ ಬಿಂಡಿಗನವಿಲೆ ಹೋಬಳಿ ಕಂಬದಹಳ್ಳಿ ಗ್ರಾಮದಲ್ಲಿ 1.5 ಕೋಟಿ ರೂ.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಪಂಚಕೂಟಗಳ ಬಸದಿ ಮತ್ತು ಜೈನ ಮಠವಿರುವ ಕಂಬದಹಳ್ಳಿ ಗ್ರಾಮಕ್ಕೆ ಈ ಹಿಂದೆ ನಾನು ಶಾಸಕನಾಗಿದ್ದ ವೇಳೆ ರಸ್ತೆ ಮಾಡಿಸಿಕೊಟ್ಟು, ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರು ಮಾಡಿಸಿಕೊಟ್ಟಿದ್ದೆ. ಆದರೆ 10ವರ್ಷ ಕಳೆದರೂ ಶಾಲಾ ಕಟ್ಟಡ ನಿರ್ಮಾಣವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

2018ರ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಬಹಳ ಕಷ್ಟಪಟ್ಟು ಯಶಸ್ವಿಯಾದ ನಂತರದಲ್ಲಿ ಆಯ್ಕೆಯಾದವರನ್ನು ರಸ್ತೆ ಮಾಡಿಸಿಕೊಡಿ ಎಂದು ಕೇಳಲಿಲ್ಲವೇಕೆ ಎಂದು ಪ್ರಶ್ನಿಸಿದ ಅವರು, ಶಾಸಕರಾಗಿ ಆಯ್ಕೆಯಾಗುವುದು ಕಾಲಹರಣ ಮಾಡಲಿಕ್ಕೋಸ್ಕರವಲ್ಲ. ಅಧಿಕಾರ ಇರಲಿ, ಇಲ್ಲದಿರಲಿ ಆಡಳಿತ ಪಕ್ಷದ ಶಾಸಕನಾಗಿರಲಿ ಅಥವಾ ಪ್ರತಿಪಕ್ಷದ ಶಾಸಕನಾಗಿರಲಿ ಕ್ಷೇತ್ರದಲ್ಲಿ ಕೆಲಸ ಮಾಡುವ ಇಚ್ಛಾಶಕ್ತಿ ಇರಬೇಕು. ಗ್ರಾಮದಲ್ಲಿ ನನೆಗುದಿಗೆ ಬಿದ್ದಿರುವ ಮುರಾರ್ಜಿ ದೇಸಾಯಿ ವಸತಿ ಶಾಲಾ ಕಟ್ಟಡ ನಿರ್ಮಾಣಕ್ಕೆ 20 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ ಎಂದರು.

ಈ ಹಿಂದೆ 2013ರಲ್ಲಿ ನಾನು ಶಾಸಕನಾಗಿದ್ದ ಅವಧಿಯಲ್ಲಿ ಬಿಂಡಿಗನವಿಲೆ ಹೋಬಳಿಯ ಬಹುತೇಕ ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ ಮಂಜೂರಾಗಿತ್ತು. ನಂತರ 2018ರಲ್ಲಿ ನಾನು ಗೆದ್ದರೆ ಈ ಕೆಲಸ ಆಗುವುದಿಲ್ಲ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಈ ಕೆಲಸ ಪೂರ್ಣಗೊಳಿಸುತ್ತಾರಂತೆ ಎಂದು ನನ್ನನ್ನು ಸೋಲಿಸಲಾಯಿತು. ಎಚ್.ಡಿ.ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ತಾಲೂಕಿನಲ್ಲಿ ಜೆಡಿಎಸ್ ಪಕ್ಷದವರೇ ಶಾಸಕರಾಗಿ ಆಯ್ಕೆಯಾದರೂ 5ವರ್ಷ ಕಳೆದರೂ ಬಿಂಡಿಗನವಿಲೆ ಕೆರೆಗೆ ನೀರು ತರಲು ಆಗಲಿಲ್ಲ ಎಂದು ಹೇಳಿದರು.

ನನೆಗುದಿಗೆ ಬಿದ್ದಿದ್ದ ಆ ಯೋಜನೆಗೆ ಗಿಡುವಿನಹೊಸಹಳ್ಳಿ ಸಮೀಪ ಭೂಮಿಪೂಜೆ ನೆರವೇರಿಸಿದ್ದೇನೆ. 2026ರ ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಂಡು ಈ ಭಾಗದ ಎಲ್ಲ ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ಹರಿದುಬರಲಿದೆ. ಈಗಲಾದರೂ ನಿಮಗೆ ದೇವರು ಒಳ್ಳೆ ಬುದ್ಧಿ ಕೊಟ್ಟು ಕೆಲಸ ಮಾಡುವವರಿಗೆ ಸಹಾಯ ಮಾಡುವ ಮನಸು ಕೊಡಲಿ. ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು, ಯಾವುದೋ ವ್ಯಾಮೋಹ, ಭ್ರಮೆಯನ್ನು ಬಿಟ್ಟು ಚುನಾವಣೆ ಬಂದಾಗ ಕೆಲಸ ಮಾಡುವವರ ಪರ ನಿಲ್ಲಬೇಕು ಎಂದು ಮನವಿ ಮಾಡಿದರು.

ಗ್ರಾಮದ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲು ಆಗಮಿಸಿದ್ದ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಕಂಬದಹಳ್ಳಿ ಜೈನಮಠದ ಶ್ರೀ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಶಾಲು ಹೊದಿಸಿ ಆಶೀರ್ವದಿಸಿದರು.

ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಸತೀಶ್, ಲೋಕೋಪಯೋಗಿ ಇಲಾಖೆ ಎಇಇ ನಿಂಗರಾಜು, ಎಇ ಪರಮೇಶ್, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ರಾಜೇಗೌಡ, ಮನ್‌ಮುಲ್ ನಿರ್ದೇಶಕ ಲಕ್ಷ್ಮೀನಾರಾಯಣ್, ಮುಖಂಡರಾದ ಎನ್.ಟಿ.ಕೃಷ್ಣಮೂರ್ತಿ, ಆರ್.ಕೃಷ್ಣೇಗೌಡ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net