

ದೇವರಹಿಪ್ಪರಗಿ: ಶ್ರೀಮಠದ ನೂತನ ಕಟ್ಟಡ ಲೋಕಾರ್ಪಣೆ, ರೇಣುಕಾಚಾರ್ಯ ಮೂರ್ತಿ ಪ್ರತಿಷ್ಠಾಪನೆ, ಶ್ರೀಗಳ ಪಟ್ಟಾಧಿಕಾರದ 25ನೇ ವರ್ಧಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳುವುದು ಅಗತ್ಯವಾಗಿದೆ ಎಂದು ತುಂಬಗಿ-ಸಾಸನೂರ ಮಡಿವಾಳೇಶ್ವರಮಠದ ಮಹಾಂತಲಿಂಗ ಶ್ರೀಗಳು ಹೇಳಿದರು.
ಪಟ್ಟಣದ ಜಡಿಮಠದ ಆವರಣದಲ್ಲಿ ಬುಧವಾರ ಶ್ರೀ ಪಂಚಾಚಾರ್ಯ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಪಟ್ಟಣದಲ್ಲಿ ನಡೆದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಗಳಲ್ಲಿ ಎಲ್ಲರ ಉಪಸ್ಥಿತಿ, ಸಹಕಾರ ಅವಶ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಆಗಮಿಸಿ ಮಠದ ಮಹೋತ್ಸವ ಯಶಸ್ವಿಗೊಳಿಸಬೇಕು ಎಂದರು.
ಜಡಿಸಿದ್ಧೇಶ್ವರ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ಆವೋಗೇಶ್ವರ ಧಾಮದ ಸ್ವಾಮೀಜಿ ಉಪಸ್ಥಿತರಿದ್ದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ. ಕುದರಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸುಗೌಡ ಬಿರಾದಾರ(ಜಲಕತ್ತಿ), ಶಾಂತಯ್ಯ ಜಡಿಮಠ, ಡಾ.ಆರ್.ಆರ್. ನಾಯಿಕ್, ಬಾಬುಗೌಡ ಜಿಡ್ಡಿಮನಿ, ಉಮಾಕಾಂತ ಸೊನ್ನದ, ಪಿ.ಎಸ್. ಮಿಂಚನಾಳ, ಎಂ.ಆರ್. ಶಿರಸಂಗಿಮಠ, ಶಾಂತಗೌಡ ಯರನಾಳ, ಶಂಕರಗೌಡ ಪಾಟೀಲ, ಸೋಮಶೇಖರ ಹಿರೇಮಠ, ರಮೇಶ ಮಶಾನವರ, ಗಣೇಶ ಹಿರೇಮಠ, ಭೀಮರಾಯ ತೆಗನೂರ ಇದ್ದರು.