ಮೌಲ್ಯಮಾಪನ ಅತ್ಯಂತ ಪವಿತ್ರ ಕೆಲಸ

Evaluation is the most sacred work
Published on

ಹಾನಗಲ್ಲ: ಮೌಲ್ಯಮಾಪನವೆಂಬುದು ಅತ್ಯಂತ ಪವಿತ್ರವಾದ ಕೆಲಸವಾಗಿದೆ. ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಈ ಕಾರ್ಯದಲ್ಲಿ ಪ್ರಾಧ್ಯಾಪಕರ ಭೌತಿಕ ಉಪಸ್ಥಿತಿ ಜತೆಗೆ ಮಾನಸಿಕ ಸಿದ್ಧತೆಯ ಪರಿಪೂರ್ಣತೆಯು ಶಿಕ್ಷಣದ ಉತ್ಕೃಷ್ಟತೆ ಹೆಚ್ಚಿಸುತ್ತದೆ ಎಂದು ಹಾವೇರಿ ವಿವಿ ಮೌಲ್ಯಮಾಪನ ಕುಲಸಚಿವೆ ಡಾ.ವಿಜಯಲಕ್ಷ್ಮೀ ತಿರ್ಲಾಪುರ ಹೇಳಿದರು.

ಪಟ್ಟಣದ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಮೌಲ್ಯಮಾಪನ ಕೇಂದ್ರ ಉದ್ಘಾಟಿಸಿ, ಕನ್ನಡ ವಿಷಯದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಅತ್ಯಂತ ಅನುಕೂಲಕರ ಹಾಗೂ ಮೌಲ್ಯಮಾಪನ ಕಾರ್ಯಕ್ಕೆ ಮೂಲಸೌಕರ್ಯ ಹೊಂದಿದೆ. ಈ ಕಾರಣದಿಂದಲೇ ಹಾವೇರಿಯಂಥ ಜಿಲ್ಲಾ ಕೇಂದ್ರ ಬಿಟ್ಟು ಹಾನಗಲ್ಲಿನಲ್ಲಿ ಹಾವೇರಿ ವಿಶ್ವವಿದ್ಯಾಲಯದ ಕೇಂದ್ರೀಯ ಮೌಲ್ಯಮಾಪನ ಕೇಂದ್ರ ಸ್ಥಾಪಿಸಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ, ಮೌಲ್ಯಮಾಪನ ಕೇಂದ್ರದ ಮುಖ್ಯ ಸಂಯೋಜಕ ಡಾ.ಎಂ.ಎಚ್. ಹೊಳಿಯಣ್ಣನವರ ಮಾತನಾಡಿ, ವಿಶ್ವವಿದ್ಯಾಲಯ ನೀಡಿದ ಈ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುತ್ತೇವೆ ಎಂದರು.

ಕೇಂದ್ರೀಯ ಮೌಲ್ಯಮಾಪನ ಕೇಂದ್ರದ ಉಪಮುಖ್ಯ ಸಂಯೋಜಕ ಡಾ. ಪ್ರಕಾಶ ಹೊಳೇರ ಮಾತನಾಡಿ, ಈ ಮೌಲ್ಯಮಾಪನ ಕೇಂದ್ರಕ್ಕೆ ಹಾವೇರಿ ವಿಶ್ವವಿದ್ಯಾಲಯದ 40 ಪದವಿ ಕಾಲೇಜ್​ಗಳು ಒಳಪಟ್ಟಿದ್ದು, ಭಾಷಾ ಮತ್ತು ಕಲಾ ವಿಷಯಗಳ ಉತ್ತರ ಪತ್ರಿಕೆಗಳನ್ನು ಇಲ್ಲಿ ಮೌಲ್ಯಮಾಪನ ಮಾಡಲಾಗುವುದು. ಇಂದಿನಿಂದ ಮೊದಲು ಕನ್ನಡ ವಿಷಯ ಪ್ರಾರಂಭಿಸಿದ್ದು, ಹಂತ-ಹಂತವಾಗಿ ಉಳಿದ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಲಾಗುವುದು. ಮೌಲ್ಯಮಾಪಕರಾಗಿ ಹಾವೇರಿ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜ್​ಗಳ ವಿಷಯವಾರು ಪ್ರಾಧ್ಯಾಪಕರನ್ನು ಹಿರಿತನದ ಆಧಾರದ ಮೇರೆಗೆ ನಿಯುಕ್ತಿಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ ಅವರು ಮಹಾವಿದ್ಯಾಲಯವನ್ನು ವಿಶ್ವವಿದ್ಯಾಲಯದ ಕೇಂದ್ರೀಯ ಮೌಲ್ಯಮಾಪನ ಕೇಂದ್ರವಾಗಿಸಿದ್ದಕ್ಕಾಗಿ ಅಭಿನಂದಿಸಿದರು.

ಕನ್ನಡ ವಿಷಯದ ಅಧ್ಯಕ್ಷ ಡಾ.ಜಗದೀಶ ಹೊಸಮನಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕ ದುಷ್ಯಂತ ನಾಗರವಳ್ಳಿ, ಸಂಯೋಜಕರಾದ ಎ.ಕೆ. ಚಂದ್ರು, ಗಣಪತಿ ದೇಸಾಯಿ, ಮಂಜುನಾಥ ಮಡಿವಾಳರ, ಸಾದಿಕ್ ಬಡಗಿ, ಸುಶೀಲಾ ಬಡಿಗೇರ, ಎನ್.ಜಿ. ಸುಷ್ಮಾ, ಪ್ರಿಯಾ ಮಹರಾಜಪೇಟ, ಸುಚಿತ್ರಾ ಅಂಬಿಗ, ಸಿ.ಹನುಮಂತಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net