

ಶೃಂಗೇರಿ: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ದ್ವೇಷದ ರಾಜಕಾರಣ ತಾಂಡವಾಡುತ್ತಿದ್ದು, ಪಟ್ಟಭದ್ರ ಹಿತಾಸಕ್ತಿಗಳ ಗುಂಪಿನ ದ್ವೇಷದಿಂದ ಬಡ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಡಿ.ಎನ್.ಜೀವರಾಜ್ ಆರೋಪಿಸಿದರು.
ಮಂಗಳವಾರ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಮಂಡಲ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಇತ್ತೀಚೆಗೆ ಗಾಂಧಿಮೈದಾನದಲ್ಲಿ ಹೊಳೆಕರಾಬು ಎಂದು ಹೇಳಿ ಅಲ್ಲಿರುವ ಒಂಭತ್ತು ಅಂಗಡಿಗಳನ್ನು ಅಧಿಕಾರಿಗಳು ಧ್ವಂಸ ಮಾಡಿ ಸರ್ವಾಧಿಕಾರಿ ಧೋರಣೆ ತೋರಿದ್ದಾರೆ ಎಂದು ದೂರಿದರು.
ಗಾಂಧಿ ಮೈದಾನದಲ್ಲಿದ್ದ ಅಂಗಡಿಗಳನ್ನು ರಾತ್ರೋ ರಾತ್ರಿ ತೆರವು ಮಾಡಿರುವುದು ಪಪಂ ಅಡಳಿತ ಮಂಡಳಿ ಎಂದು ಆರೋಪಿಸಲಾಗಿದೆ. ರಾಜ್ಯದಲ್ಲಿ ನಿಮ್ಮ ಪಕ್ಷ ಆಡಳಿತದಲ್ಲಿದೆ. ಜಿಲ್ಲಾಧಿಕಾರಿ ಕೂಡಾ ನಿಮ್ಮ ಆದೇಶ ಪಾಲಿಸಬೇಕು. ನಿಮ್ಮ ಆದೇಶವಿಲ್ಲದೆ ತೆರವು ಮಾಡಲು ಸಾಧ್ಯವಿಲ್ಲ. ಬಡವರು ಸಾಕಷ್ಟು ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದ ಅಂಗಡಿಗಳನ್ನು ತೆರವು ಮಾಡಿ ಎಂದು ಪಪಂನ ಕಾಂಗ್ರೆಸ್ ಸದಸ್ಯರು ಹಾಗೂ ನಾಮನಿರ್ದೇಶನ ಸದಸ್ಯರು ಜಿಲ್ಲಾಧಿಕಾರಿಗೆ, ಉಸ್ತುವಾರಿ ಮತ್ರಿಗಳಿಗೆ ಬರೆದ ನಕಲು ಪ್ರತಿ ನಮ್ಮಲ್ಲಿದೆ ಎಂದರು.
ಪಪಂನ ಆಡಳಿತ ಮಂಡಳಿ ಎಲ್ಲರನ್ನೂ ಸಮಾನವಾಗಿ ನೋಡುತ್ತಿದೆ. ಆದರೆ ಅಲ್ಲಿನ ಕಾಂಗ್ರೆಸ್ ಸದಸ್ಯರ ದ್ವಂದ ನೀತಿ ಜನರನ್ನು ಬೀದಿಗೆ ತಳ್ಳಿದೆ. ನಾಮ ನಿರ್ದೇಶಕರೊಬ್ಬರು ಹೊಳೆಕರಾಬು ಜಾಗದಲ್ಲಿ ಶ್ರೀಮಠದ ಕಟ್ಟಡ ಸೇರಿದೆ ಎಂದು ಹೇಳುತ್ತಿದ್ದಾರೆ. ನಾವೆಲ್ಲರೂ ಶ್ರೀಮಠದ ಭಕ್ತರು. ಅವರು ಮಠಕ್ಕೆ ಸಂಬಂಧಿಸಿದ ಕಟ್ಟಡ ಮುಟ್ಟಿದರೆ ಮುಂದಾಗುವ ಅನಾಹುತಕ್ಕೆ ಅವರೇ ಕಾರಣವಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ಉಮೇಶ್ ತಲಗಾರು, ಪ್ರಧಾನ ಕಾರ್ಯದರ್ಶಿ ನೂತನ್ ಕುಮಾರ್, ವಕ್ತಾರ ದಿನೇಶ್ ಅಂಗುರ್ಡಿ, ಪಪಂ ಉಪಾಧ್ಯಕ್ಷ ಪ್ರಕಾಶ್, ಸದಸ್ಯರಾದ ಶ್ರೀವಿದ್ಯಾ, ರಾಧಿಕಾ, ಬಿಜೆಪಿ ಮುಖಂಡರಾದ ಪ್ರವೀಣ್, ರಾಘವೇಂದ್ರ, ವಿಜಯ ತಿಪ್ಪರಮಕ್ಕಿ, ಎಚ್.ಎಸ್.ನಟೇಶ್, ಜಿ.ವಿ.ಮೋಹನ್ ಇದ್ದರು.