

ಕೊಳ್ಳೇಗಾಲ: ಕೊಳ್ಳೇಗಾಲದಲ್ಲಿ ಸಾಕಷ್ಟು ಸರ್ಕಾರಿ ಆಸ್ತಿಗಳನ್ನು ದೊಡ್ಡ ದೊಡ್ಡ ಪ್ರಭಾವಿಗಳು ಕಬಳಿಸಿ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಇವರ ಮೇಲೆ ಯಾವುದೇ ಕ್ರಮ ವಹಿಸದ ಸರ್ಕಾರ, ಬಡವರು ವಾಸಿಸುತ್ತಿರುವ ಜಾಗಗಳ ತೆರವು ಮಾಡಿಸುತ್ತಿದೆ ಎಂದು ಜೆಡಿಎಸ್ ಮುಖಂಡ ಬಿ.ಪುಟ್ಟಸ್ವಾಮಿ ಅಸಮಾಧಾನ ಹೊರಹಾಕಿದರು.
ಪಟ್ಟಣದ ಎಪಿಎಂಸಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಮರಡಿಗುಡ್ಡ ತಪ್ಪಲಿನ ಸರ್ಕಾರಿ ಸ್ಥಳದಲ್ಲಿ ನಿರ್ಮಿಸಲಾಗಿದ್ದ ಮಳಿಗೆಗಳ ತೆರವು ಮಾಡಿರುವ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ ಅವರು, ಮಳಿಗೆ ಹಾಗೂ ಮನೆಗಳಲ್ಲಿ ವಾಸವಿರುವ ಜನರಿಗೆ ಸಾಂತ್ವನ ಹೇಳಿದ ಬಳಿಕ ಮಾತನಾಡಿದರು.
ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟ ಜಾಗವನ್ನು ಹಿಡಿದುಕೊಂಡಿದ್ದರೆ ತೆರವುಗೊಳಿಸಲು ಯಾವುದೇ ಅಭ್ಯಂತರವಿಲ್ಲ. ಆದರೆ, ಇಲ್ಲಿರುವ ಬಡ ಜನರು ತಮ್ಮ ಮನೆಗಳಿಗೆ ನಗರಸಭೆಗೆ ಕಂದಾಯ ಕಟ್ಟಿದ್ದಾರೆ. ನಗರಸಭೆಯಿಂದ ನೀರು ಹಾಗೂ ಸೆಸ್ಕ್‌ನಿಂದ ವಿದ್ಯುತ್ ಸಂಪರ್ಕ ದೊರೆತಿದೆ. 30 ರಿಂದ 40ವರ್ಷದಿಂದ ಜನರು ಈ ಜಾಗದಲ್ಲಿ ವಾಸ ಮಾಡುತ್ತಿದ್ದಾರೆ. ಇದೀಗ ಧಿಡೀರ್ ತೆರವು ಮಾಡಿದರೆ ಅವರು ಎಲ್ಲಿ ಹೋಗಬೇಕೆಂದು ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಪ್ರಶ್ನಿಸಿದರು.
ನಮ್ಮ ಒತ್ತಾಯವಿಷ್ಟೆ ಈ ಬಡಜನರಿಗೆ ಪರ್ಯಾಯ ಮನೆಗಳ ವ್ಯವಸ್ಥೆಯನ್ನು ಜರೂರಾಗಿ ಮೊದಲು ನೀಡಬೇಕು. ನಂತರ ತೆರವು ಮಾಡಲಿ ನಾವು ಕೂಡ ಸಹಕಾರ ನೀಡುತ್ತೇವೆ. ಏಕಾಏಕಿ ಮನೆಗಳನ್ನು ತೆರವು ಮಾಡಿದರೆ ಅವರ ಪರಿಸ್ಥಿತಿ ಏನಾಗಬಹುದು.
ಬುಧವಾರ ಅಧಿಕಾರಿಗಳು ಸರ್ಕಾರಿ ಸ್ಥಳವೆಂದು ಅಂಗಡಿಗಳನ್ನು ತೆರವು ಮಾಡಿಸಿದ್ದಾರೆ. ಮನೆಗಳಿಗೆ 10 ದಿನದ ಗಡುವು ನೀಡಲಾಗಿದೆ. ಈ ಆಘಾತದಿಂದ ಇಬ್ಬರು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದಿದ್ದಾರೆ. ಮುಂದೆ ಈ ಬಡಜನರಿಗೆ ಏನಾದರೂ ತೊಂದರೆ ಆದರೆ ಯಾರು ಹೊಣೆ ಎಂದರು.
ಜೆಡಿಎಸ್ ಮುಖಂಡರಾದ ಸಿದ್ದರಾಜ ನಾಯಕ, ಸೋಮಣ್ಣ, ನಾಗು ಮುಡಿಗುಂಡ, ರವಿ ಆಲಹಳ್ಳಿ, ನಿವಾಸಿಗಳಾದ ಶಾರದಮ್ಮ, ನಾಗಮ್ಮ, ಆಶಾ, ಮಂಜಮ್ಮ, ಮಲಜ್ಜಮ್ಮ, ಗಾಯತ್ರಿ ಇದ್ದರು.