ಅಪಾಯಕಾರಿ ಸ್ಥಳಗಳಲ್ಲಿ ಒತ್ತುವರಿ ತೆರವು ಅನಿವಾರ್ಯ

12kls1
ಕಳಸ ಗ್ರಾಮ ಪಂಚಾಯಿತಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ದೀಪಕ್‌ದೊಡ್ಡಯ್ಯ, ಉಷಾ ವಿಶ್ವನಾಥ್, ರಂಗನಾಥ್ ಇದ್ದರು.
Published on

ಕಳಸ: ಬಡವರ ಒತ್ತುವರಿ ತೆರವಿಗೆ ಅವಕಾಶ ನೀಡುವುದಿಲ್ಲ, ಅಪಾಯಕಾರಿ ಸ್ಥಳಗಳಲ್ಲಿ ಒತ್ತುವರಿ ತೆರವು ಅನಿವಾರ್ಯ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕಳಸ ತಾಲೂಕಿನ ಐದು ಗ್ರಾಮ ಪಂಚಾಯಿತಿಗಳಲ್ಲಿ ಜನ ಸಂಪರ್ಕ ಸಭೆ ನಡೆಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಟವರ್ ಸಮಸ್ಯೆಗಳನ್ನು ಶೀಘ್ರದಲ್ಲಿ ಸರಿಪಡಿಸಲಾಗುವುದು. ಈಗಾಗಲೇ ಅರಣ್ಯ ಭೂಮಿ, ಕಂದಾಯ ಭೂಮಿ ಯಾವುದು ಎಂದು ಗುರುತು ಮಾಡಿಲ್ಲ .ಜಂಟಿ ಸರ್ವೇ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಶೀಘ್ರ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಕುದುರೆಮುಖ ಟೌನ್‌ಶಿಪ್ ಹಾಳು ಬಿದ್ದಿದ್ದು ಇಲ್ಲಿ ಯಾವ ಯೋಜನೆ ಮಾಡಬಹುದು ಎಂದು ಮುಂದಿನ ವಾರ ಕುದುರೆಮುಖದಲ್ಲಿ ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು. ಜಲ್‌ಜೀವನ ಯೋಜನೆಯಲ್ಲಿ ಬಿಟ್ಟು ಹೋದ ಊರುಗಳನ್ನು ಶೀಘ್ರದಲ್ಲಿ ಸೇರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಕಳಸ ಆಸ್ಪತ್ರೆಗೆ ಸಿಬ್ಬಂದಿ ನೇಮಕ ಹಾಗೂ ಸಂಸೆ-ದಿಡುಪೆ ರಸ್ತೆ ಅಭಿವೃದ್ಧಿಗೆ ಉಂಟಾಗಿರುವ ಅರಣ್ಯ ಇಲಾಖೆ ತೊಡಕು ನಿವಾರಿಸಿ ರಸ್ತೆ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕಳಸ ತಾಲೂಕು ಕೇಂದ್ರವಾಗಿದ್ದು, ಇಲ್ಲಿ ಮೊದಲು ಪಟ್ಟಣ ಪಂಚಾಯಿತಿ ಆಗಬೇಕಿದೆ. ತಾಲೂಕು ಕೇಂದ್ರದಲ್ಲಿ ಇರಬೇಕಾದ 28 ಇಲಾಖೆ ಕಳಸದಲ್ಲಿ ಪ್ರಾರಂಭ ಮಾಡಲು ಕ್ಷೇತ್ರದ ಶಾಸಕರ ಬಳಿ ಚರ್ಚಿಸಿ ಪೂರ್ಣ ಪ್ರಮಾಣದ ಕಚೇರಿಗಳು ಕಳಸಕ್ಕೆ ಬರಲು ಶ್ರಮಿಸಲಾಗುವುದು. 15 ದಿನದಲ್ಲಿ ಕಳಸ ಗ್ರಾಪಂನಲ್ಲಿ ಸಭೆ ನಡೆಸಿ ಗ್ರಾಮದ ಅಭಿವೃದ್ಧಿಗೆ ಸಾರ್ವಜನಿಕರಿಂದ ಸಲಹೆಗಳನ್ನು ಸ್ವೀಕರಿಸಲಾಗವುದು ಎಂದು ಹೇಳಿದರು.
ಜೆಡಿಎಸ್ ಮುಖಂಡ ಜಿ.ಕೆ.ಮಂಜಪ್ಪಯ್ಯ ಮಾತನಾಡಿ, ಇಲಾಖೆಗೆ ಯಾವುದು ಕಂದಾಯ ಭೂಮಿ ಯಾವುದೂ ಅರಣ್ಯಭೂಮಿ ಎನ್ನುವುದು ಖಾತರಿ ಇಲ್ಲ . ಆದರೂ ಮತ್ತೆ ಒತ್ತುವರಿ ತೆರವು ಮಾಡಲು ಅರಣ್ಯ ಇಲಾಖೆ ಮುಂದಾಗಿದೆ. ರಾಜಕೀಯ ಮುಖಂಡರು ದುಡ್ಡು ಪಡೆದು ಅರಣ್ಯ ಇಲಾಖೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ದೂರಿದರು.
ಸಭೆಗೂ ಮುನ್ನಾ ಕುದುರೆಮುಖ ಟೌನ್‌ಶಿಪ್, ಕುದುರೆಮುಖ ಲೇಬರ್ ಕಾಲನಿ ಹಾಗೂ ಸಂಸೆ-ಎಳನೀರು ರಸ್ತೆ ಪರಿಶೀಲಿಸಿದರು. ಸಂಸೆ, ಕಳಸ, ಮರಸಣಿಗೆ, ಇಡಕಣಿ, ತೋಟದೂರು ಪಂಚಾಯಿತಿಗಳಿಗೆ ತೆರಳಿ ಜನರ ಅವಹಾಲು ಸ್ವೀಕರಿಸಿದರು.
ಕಳಸ ಗ್ರಾಪಂ ಅಧ್ಯಕ್ಷೆ ಉಷಾ ವಿಶ್ವನಾಥ್, ಉಪಾಧ್ಯಕ್ಷ ರಂಗನಾಥ್, ಬಿಜೆಪಿ ಅಧ್ಯಕ್ಷ ನಾಗಭೂಷನ್, ಜೆಡಿಎಸ್ ಅಧ್ಯಕ್ಷ ಸಂತೋಷ್ ಹಿನಾರಿ ಮುಖಂಡರಾದ ಎಂ.ಎ.ಶೇಷಗಿರಿ, ದೀಪಕ್‌ದೊಡ್ಡಯ್ಯ, ಜ್ವಾನಲಯ್ಯ, ಜಗದೀಶ್ ನೆಲ್ಲಿಬೀಡು, ಬಿ.ಕೆ.ಮಹೇಶ್, ಸುಜಯ ಸದಾನಂದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net