ಗಜೇಂದ್ರಗಡದಲ್ಲಿ ಅಕ್ರವಾಗಿ ತಲೆಎತ್ತಿದ್ದ 34 ಗೂಡಂಗಡಿ ತೆರವು

07 GJD
Published on

ಗಜೇಂದ್ರಗಡ: ಪಟ್ಟಣದ ತಹಸೀಲ್ದಾರ್ ಕಚೇರಿ ಕಾಂಪೌಂಡ್ ಬಳಿಯ 34ಕ್ಕೂ ಅಧಿಕ ಅನಧಿಕೃತ ಗೂಡಂಗಡಿಗಳನ್ನು ಭಾನುವಾರ ಪುರಸಭೆ ಅಧಿಕಾರಿಗಳು ಹಾಗೂ ಪೋಲಿಸ್ ಇಲಾಖೆಯ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು.

ಕಚೇರಿಯ ಕಾಂಪೌಂಡ್‌ಗೆ ಹೊಂದಿಕೊಂಡಿದ್ದ 34ಕ್ಕೂ ಅಧಿಕ ಗೂಡಂಗಡಿಗಳನ್ನು ಕೆಲವರು ಪರವಾನಗಿ ಇಲ್ಲದೆ ಬಾಡಿಗೆಗೆ ನೀಡಿದ್ದರು. ಈ ಮಳಿಗೆ ತೆರವು ಮಾಡುವಂತೆ ಪುರಸಭೆಗೆ ಎರಡು ತಿಂಗಳ ಹಿಂದೆ ತಹಸೀಲ್ದಾರ್ ಅವರು ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಜ.4ರಂದು ಪೋಲಿಸ್ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ಗೂಡಂಗಡಿಗಳು ಇರುವ ಸ್ಥಳಕ್ಕೆ ತೆರಳಿ, ಅಲ್ಲಿರುವ ವ್ಯಾಪಾರಸ್ಥರಿಗೆ ಜ.6ರ ಒಳಗೆ ಅಂಗಡಿ ತೆರವು ಮಾಡಿಕೊಳ್ಳುವಂತೆ ಗಡುವು ನೀಡಿದ್ದರು. ಶನಿವಾರ ತಡರಾತ್ರಿ ವರೆಗೂ ಕಾದಿದ್ದ ಪುರಸಭೆ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳು ಭಾನುವಾರ ಬೆಳಗ್ಗೆ 5ಗಂಟೆಯಿಂದಲೇ ತೆರವು ಕಾರ್ಯಾಚರಣೆ ನಡೆಸಿ, 24ಕ್ಕೂ ಅಧಿಕ ಗೂಡಂಗಡಿಗಳನ್ನು ತೆರವು ಮಾಡಿದರು. ಈ ವೇಳೆ ಕೆಲವು ವ್ಯಾಪಾರಸ್ಥರು ಹಾಗೂ ಅಧಿಕಾರಗಳ ನಡುವೆ ಮಾತಿನ ಚಕುಮಕಿಯೂ ನಡೆಯಿತು.

ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಮಾತನಾಡಿ, ಈಗ ತಹಸೀಲ್ದಾರ್ ಕಚೇರಿ ಬಳಿಯ ಅಂಗಡಿಗಳನ್ನು ಮಾತ್ರ ತೆರವುಗೊಳಿಸಲಾಗಿದೆ. ರೋಣ ರಸ್ತೆಯಲ್ಲಿರುವ ಗೂಡಂಗಡಿಗಳಿಗೆ ಜ.8ರ ಸಂಜೆಯ ತನಕ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು. ಈ ಕುರಿತು ‘ವಿಜಯವಾಣಿ’ ಜ.4ರಂದು ‘ಫುಟ್‌ಪಾತ್ ಅತಿಕ್ರಮಣ ಅವ್ಯಾಹತ’ ಶಿರ್ಷಿಕೆಯಡಿ ವಿಸ್ತ್ರತ ವರದಿ ಪ್ರಕಟಿಸಿತ್ತು.

ಗಜೇಂದ್ರಗಡ ಪಟ್ಟಣ ಜಿಲ್ಲೆಯಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿದೆ. ವಾಹನ ಸವಾರರಿಗೆ ಕಿರಿಕಿರಿಯಾಗದಂತೆ ನೋಡಿಕೊಳ್ಳುವುದು ಪುರಸಭೆಯ ಕರ್ತವ್ಯವಾಗಿದೆ. ರೋಣ ರಸ್ತೆಯಲ್ಲಿರುವ ಅನಧಿಕೃತ ಮಳಿಗೆಗಳಿಗೂ ಕಾಲಾವಕಾಶ ನೀಡಲಾಗಿದೆ. ಗೂಡಂಗಡಿಗಳಿಂದ ಟ್ರಾಫಿಕ್ ಸಮಸ್ಯೆಯಾಗದಂತೆ ಕ್ರಮವಹಿಸಲಾಗುವುದು.-ಬಸವರಾಜ ಬಳಗಾನೂರ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net