ವಿಪತ್ತು ನಿರ್ವಹಣೆ ಕಾಯ್ದೆಯಡಿ ಕಟ್ಟಡ ತೆರವುಗೊಳಿಸಿ: ಡಿಸಿಎಂ ಶಿವಕುಮಾರ್ ಸೂಚನೆ

dcm visit
Published on

ಬೆಂಗಳೂರು: ಮಳೆ ನೀರು ಸರಾಗವಾಗಿ ಹರಿಯಲು ಅಡ್ಡವಿರುವ ಕಟ್ಟಡಗಳನ್ನು ವಿಪತ್ತು ನಿರ್ವಹಣೆ ಕಾಯ್ದೆ ಅಡಿ ತೆರವುಗೊಳಿಸುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಾಗವಾರದ ಮಾನ್ಯತಾ ಟೆಕ್ ಪಾರ್ಕ್ ಬಳಿ ಮಳೆ ಪ್ರವಾಹಕ್ಕೆ ಕಾರಣವಾಗಿರುವ ರಾಜಕಾಲುವೆ ಹಾಗೂ ನಾಲೆಗಳನ್ನು ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದರು.

ಕಳೆದ ವಾರ ನಾನು ಹಾಗೂ ಸಿಎಂ ನಗರದ ಮಳೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ನಾಗವಾರ ಜಂಕ್ಷನ್ ಪ್ರಮುಖ ಭಾಗವಾಗಿದೆ. ಇಲ್ಲಿ ಸಮಸ್ಯೆ ಆದಲ್ಲಿ ನಂತರ ಉಳಿದ ಪ್ರದೇಶಗಳಲ್ಲೂ ಸಮಸ್ಯೆಯಾಗುತ್ತಿದೆ. ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಅಡ್ಡಿಪಡಿಸುತ್ತಿದ್ದಾರೆ. ಅಧಿಕಾರಿಗಳಿಗೂ ಸಹಕಾರ ನೀಡುತ್ತಿರಲಿಲ್ಲ. ಹೀಗಾಗಿ ಸಮಸ್ಯೆಗೆ ಕಾರಣವಾಗಿರುವ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಕಟ್ಟಡ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸ್ಪಷ್ಟಪಡಿಸಿದರು.

ಶಾಶ್ವತ ಪರಿಹಾರಕ್ಕೆ ಭರವಸೆ:

ನಮಗೆ ಯಾರ ಆಸ್ತಿಯನ್ನು ನಷ್ಟ ಮಾಡಲು ಇಷ್ಟವಿಲ್ಲ. ಯಾರಿಗೂ ಅನ್ಯಾಯ ಮಾಡಲು ಬಯಸುವುದಿಲ್ಲ. ನೀರು ಸರಾಗವಾಗಿ ಹರಿಯಬೇಕು. ಹೀಗಾಗಿ ನಾನೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವೆ. ಕಾಮಗಾರಿ ಮುಂದುವರಿಸಲು ನನ್ನ ಮುಂದೆ ಎಲ್ಲರೂ ಒಪ್ಪಿಕೊಂಡಿದ್ದು, ಇದಕ್ಕೆ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ಡಿಸಿಎಂ ವಿವರಿಸಿದರು.

ಸ್ಥಳಪರಿಶೀಲನೆ ವೇಳೆ ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ ಮಹೇಶ್ವರ್ ರಾವ್, ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್, ಯಲಹಂಕ ವಲಯದ ಮುಖ್ಯ ಆಯುಕ್ತ ಕರಿಗೌಡ ಹಾಜರಿದ್ದರು.

ಮುಖ್ಯ ಆಯುಕ್ತರಿಗೆ ಅಧಿಕಾರ:

ಮಳೆ ನೀರು ಸರಾಗವಾಗಿ ಹರಿಯುವುದು ಇಲ್ಲಿ ಮುಖ್ಯವೇ ಹೊರತು ಇನ್ಯಾರೂ ಅಲ್ಲ. ನಾವು ಯಾವುದೇ ಕಟ್ಟಡಗಳಿಗೆ ಅಡಚಣೆ ಮಾಡಲು ಬಯಸುವುದಿಲ್ಲ. ಈ ಭಾಗದ ಭೂಮಾಲೀಕರಿಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದೇವೆ. ತಾಂತ್ರಿಕ ಕಾರಣಗಳಿಂದ ತಪ್ಪಾಗಿದ್ದರೆ ಅದಕ್ಕೆ ಪರಿಹಾರ ನೀಡಲಾಗುವುದು. ನಮಗೆ ಈ ವಿಚಾರವಾಗಿ ಶಾಶ್ವತ ಪರಿಹಾರ ಬೇಕಾಗಿದ್ದು, ಇದಕ್ಕೆ ಎಲ್ಲರೂ ಒಪ್ಪಿಗೆ ನೀಡಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಈ ವಿಚಾರದಲ್ಲಿರುವ ಅಡಚಣೆ ನಿವಾರಿಸಲು ಅಧಿಕಾರ ನೀಡಲಾಗಿದೆ ಎಂದು ಡಿಸಿಎಂ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net