ಸ್ವಯಂ ಉದ್ಯೋಗ ಸೃಷ್ಟಿಸದ ಇವಿ ಸ್ಕೂಟರ್!

22-01-rama-ambedkar schooter aa
Published on

*ನಿಂತಲ್ಲೇ ನಿಂತು ‘ಧೂಳು ಹಿಡಿದ ದ್ವಿಚಕ್ರ ವಾಹನ

* ಅರ್ಹರಿಗೆ ತಲುಪದ ಸೌಲಭ್ಯ

* ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳ ಎಡವಟ್ಟು

ಗಂಗಾಧರ್ ಬೈರಾಪಟ್ಟಣ ರಾಮನಗರ

ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಇಲ್ಲವಾದರೆ ಸರ್ಕಾರದ ಯೋಜನೆಗಳು ಹಳ್ಳ ಹಿಡಿಯುತ್ತವೆ ಎನ್ನುವುದಕ್ಕೆ ಜಿಲ್ಲಾಡಳಿತ ಸೌಧದಲ್ಲಿ ಹಲವು ವರ್ಷಗಳಿಂದ ‘ಧೂಳು ಹಿಡಿಯುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳೇ ಸಾಕ್ಷಿ.

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆಯಡಿ ಪರಿಶಿಷ್ಟ ಜಾತಿ ಯುವಕರಲ್ಲಿ ಸ್ವಯಂ ಉದ್ಯೋಗ ಉತ್ತೇಜಿಸಲು ಹಾಗೂ ಆತ್ಮ ವಿಶ್ವಾಸ ಹೆಚ್ಚಿಸಲು 1.5 ಲಕ್ಷ ರೂ. ಮೌಲ್ಯದ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಸಹಾಯ ಧನದ ಆಧಾರದ ಮೇಲೆ 2022-23ರಲ್ಲಿ ಅಂದಿನ ಸರ್ಕಾರ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿತ್ತು. ಈ ಯೋಜನೆಯಡಿ ರಾಮನಗರ ಜಿಲ್ಲೆಗೆ 2 ವರ್ಷಗಳ ಹಿಂದೆ ಬಂದ ಇವಿ ಸ್ಕೂಟರ್‌ಗಳು ಅಂದಿನಿಂದಲೂ ಜಿಲ್ಲಾಡಳಿತ ಸೌಧದ ನೆಲ ಮಹಡಿಯಲ್ಲಿ ‘ಧೂಳು ಹಿಡಿಯುತ್ತಿವೆ. ಇವುಗಳನ್ನು ಅರ್ಹರಿಗೆ ನೀಡಲು ಯಾರಿಗೂ ಕಾಳಜಿ ಇಲ್ಲವಾಗಿದೆ.

ಕಾಣೆಯಾದ ವಾಹನ

ಕನಿಷ್ಠ 16.5 ಲಕ್ಷ ರೂ. ಬೆಲೆ ಬಾಳುವ (ಪ್ರತಿ ಸ್ಕೂಟರ್‌ಗೆ ಸುಮಾರು 1.50 ಲಕ್ಷ ರೂ.) 11 ಇವಿ ಸ್ಕೂಟರ್‌ಗಳನ್ನು ಜಿಲ್ಲಾಡಳಿತ ಸೌಧದ ನೆಲ ಮಹಡಿಯಲ್ಲಿ ನಿಲ್ಲಿಸಲಾಗಿದೆ. ಎರಡು ವರ್ಷಗಳಿಂದಲೂ ಅಲ್ಲಿಯೇ ನಿಂತಿವೆ. ಸಾಲಿನಲ್ಲಿ ನಿಲ್ಲಿಸಿದ್ದ ಸ್ಕೂಟರ್‌ಗಳ ಮಧ್ಯದಲ್ಲಿ ಅಲ್ಲೊಂದು ಇಲ್ಲೊಂದು ವಾಹನ ಇಲ್ಲವಾಗಿದ್ದು, ಇವುಗಳನ್ನು ಇಲಾಖೆ ಫಲಾನುಭವಿಗಳಿಗೆ ನೀಡಿದೆಯೋ? ಇಲ್ಲ ಯಾರಾದರೂ ತೆಗೆದುಕೊಂಡು ಹೋದರೋ? ಎನ್ನುವ ಪ್ರಶ್ನೆ ಮೂಡಿದೆ.

ಲಭ್ಯಯ ಮಾಹಿತಿ ಪ್ರಕಾರ ಇವು ಜಿಲ್ಲಾಡಳಿತ ಸೌಧದ ನೆಲ ಮಹಡಿ ಸೇರಿ ಎರಡು ವರ್ಷಗಳೇ ಆಗಿರುವುದರಿಂದ ಸ್ಕೂಟರ್‌ಗಳ ಬ್ಯಾಟರಿಗಳೂ ಬಳಕೆಗೆ ಯೋಗ್ಯವಾಗಿರುವ ಸಾಧ್ಯತೆ ತುಂಬಾ ಕಡಿಮೆ. ಗೇಟ್ ಪಕ್ಕದಲ್ಲಿಯೇ ಇರುವ ಈ ಸ್ಕೂಟರ್‌ಗಳ ಬಗ್ಗೆ ಕೇಳುವರು ಗತಿಯೇ ಇಲ್ಲದಂತಿದ್ದು, ಯಾರೇ ಕದ್ದೊಯ್ದರೂ ಇಲಾಖೆಗೆ ಮಾಹಿತಿ ತಲುಪುವ ಸಾಧ್ಯತೆಯೂ ತುಂಬಾ ಕಡಿಮೆ.

ಎಂಎಲ್‌ಎಗಳು ಪಟ್ಟಿ ಕೊಟ್ಟಿಲ್ಲ

ಸದ್ಯಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ವ್ಯವಸ್ಥಾಪಕರ ಹುದ್ದೆ ಖಾಲಿ ಇದೆ. ಕನಕಪುರ ತಾಲೂಕು ಅಧಿಕಾರಿಗೆ ಈ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಎಷ್ಟು ಸ್ಕೂಟರ್‌ಗಳು ಮಂಜೂರಾಗಿದ್ದವು, ಸ್ಕೂಟರ್‌ಗಳು ಏಕೆ ನೆಲ ಮಹಡಿಯಲ್ಲಿಯೇ ನಿಲ್ಲಿಸಿದ್ದೀರಿ ಎನ್ನುವ ಪ್ರಶ್ನೆಯನ್ನು ಸಿಬ್ಬಂದಿ ಬಳಿ ಕೇಳಿದರೆ ಎಂಎಲ್‌ಎಗಳು ಪಟ್ಟಿಕೊಟ್ಟಿಲ್ಲ. ಹಿಂದೆ, ಅನಿತಾ ಕುಮಾರಸ್ವಾಮಿ ಅವರನ್ನು ಕೋರಿದ್ದೆವು ಅವರು ಕೊಟ್ಟಿಲ್ಲ. ಈಗ ಮತ್ತೊಮ್ಮೆ ಎಂಎಲ್‌ಎಗಳಿಗೆ ಕೇಳಿದ್ದೇವೆ ಎನ್ನುವ ಉತ್ತರವನ್ನಷ್ಟೇ ನೀಡುತ್ತಾರೆ. ಹಾಗಾದರೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಸ್ಕೂಟರ್‌ಗಳು ‘ಧೂಳು ಹಿಡಿಯುವಲ್ಲಿ ಹಿಂದಿನ ಮತ್ತು ಇಂದಿನ ಶಾಸಕರು ಕಾರಣವೇ ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿದೆ.

ನನಗೇನು ಗೊತ್ತೇ ಇಲ್ಲ?

ನಿಗಮದ ಜಿಲ್ಲಾ ವ್ಯವಸ್ಥಾಪಕರ ಹುದ್ದೆಯ ಪ್ರಭಾರ ಹೊಣೆ ಹೊತ್ತಿರುವ ಅಧಿಕಾರಿ ಜಯಪ್ರಕಾಶ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಈ ಬಗ್ಗೆ ವಿಚಾರಿಸಿದರೆ ನನಗೇನೂ ಗೊತ್ತೇ ಇಲ್ಲ. ಈ ಬಗ್ಗೆ ಜಿಲ್ಲಾ ಕಚೇರಿಗೆ ಹೋಗಿ ಕೇಳಿ, ಮಾಹಿತಿ ನೀಡುತ್ತಾರೆ ಎನ್ನುವ ಉತ್ತರ ನೀಡುತ್ತಾರೆ. ಹಾಗಾದರೆ ಇಷ್ಟೊಂದು ಬೆಲೆ ಬಾಳುವ ವಾಹನಗಳು ಧೂಳು ಹಿಡಿಯುತ್ತಿರುವ ವಿಚಾರವನ್ನು ಕಚೇರಿ ಸಿಬ್ಬಂದಿ ಜಿಲ್ಲಾ ಅಧಿಕಾರಿ ಗಮನಕ್ಕೆ ತರಲೇ ಇಲ್ಲವೇ? ಅಥವಾ ಮಾಹಿತಿ ಗೊತ್ತಿದ್ದರೂ ಅಧಿಕಾರಿ ಜಾಣ ಮೌನ ಪ್ರದರ್ಶನ ಮಾಡುತ್ತಿದ್ದಾರೆಯೇ ಎನ್ನುವ ಪ್ರಶ್ನೆಯೂ ಮೂಡುತ್ತಿದೆ.

ಶಾಸಕರೇ ಇತ್ತ ಗಮನ ಹರಿಸಿ

ಶಾಸಕರೇ ನೀವು ಪಟ್ಟಿಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಇವಿ ಸ್ಕೂಟರ್‌ಗಳನ್ನು ಅರ್ಹರಿಗೆ ತಲುಪಿಸುವ ಕೆಲಸ ನಡೆಯಲಿಲ್ಲ ಎನ್ನಲಾಗುತ್ತಿದೆ. ಇದು ನಿಜವೇ ಆಗಿದ್ದರೆ ಕೂಡಗಲೇ ಈ ಬಗ್ಗೆ ಗಮನಹರಿಸಿ, ‘ಧೂಳು ಹಿಡಿಯುತ್ತಿರುವ ವಾಹನಗಳಿಗೆ ಮುಕ್ತಿ ನೀಡಿ. ಯೋಜನೆಯೊಂದು ‘ಧೂಳು ಹಿಡಿಯಲು ಕಾರಣವಾದವರ ವಿರುದ್ಧವೂ ಸಹ ಕ್ರಮ ಕೈಗೊಳ್ಳಿ.

ಪರಿಶೀಲನೆ ಮಾಡಿ, ಏಕೆ ವಿತರಣೆ ಮಾಡಿಲ್ಲ ಎನ್ನುವ ಮಾಹಿತಿ ಪಡೆದು ಸೂಕ್ತ ಕ್ರಮವಹಿಸಲಾಗುತ್ತದೆ. ಯಶವಂತ ವಿ ಗುರುಕರ್ಜಿಲ್ಲಾಧಿಕಾರಿ, ರಾಮನಗರ

==

ಪರಿಶಿಷ್ಟ ಜಾತಿಯ ಯುವ ಸಮೂದಾಯ ಸ್ವಯಂ ಉದ್ಯೋಗ ಕಂಡುಕೊಳ್ಳಲು ಅನುಕೂಲವಾಗುವಂತೆ ಇವಿ ಸ್ಕೂಟರ್‌ಗಳನ್ನು ಮಂಜೂರು ಮಾಡಲಾಗಿದೆ. ಆದರೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಇವು ಹಳ್ಳ ಹಿಡಿಯುತ್ತಿವೆ. ವೆಂಕಟೇಶ್ಬಿವಿಎಸ್ ಸಂಘಟನೆ, ಜಿಲ್ಲಾ‘್ಯಕ್ಷ ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net