

ಆಲೂರು: ಎತ್ತಿನಹೊಳೆ ಯೋಜನೆ ಕಾಮಗಾರಿ ಸ್ಥಳಕ್ಕೆ ಹಾಸನ ಜಿಲ್ಲೆಯ ಭೂ ಸ್ವಾಧೀನಾಧಿಕಾರಿ ಮಾರುತಿಗೌಡ, ಸಕಲೇಶಪುರ ಉಪವಿಭಾಗಾಧಿಕಾರಿ ಡಾ.ಶೃತಿ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ತಾಲೂಕಿನ ಪಾಳ್ಯ ಹೋಬಳಿ ಜಿಜಿಕೊಪ್ಪಲು ಬೀರಕನಹಳ್ಳಿ ಗ್ರಾಮಗಳ ಬಳಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯ ಕಾಮಗಾರಿಗಳ ರೂಪುರೇಷೆ, ಸಾಧಕ-ಬಾಧಕಗಳ ಬಗ್ಗೆ ಅಧಿಕಾರಿಗಳ ಬಳಿ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು 2-3 ಗ್ರಾಮಗಳ ಮಧ್ಯೆ ಹಾದು ಹೋಗಿರುವ ಎತ್ತಿನಹೊಳೆ ನಾಲೆ ಮಧ್ಯಭಾಗದಲ್ಲಿ ಬೃಹದಾಕಾರದ ಬಂಡೆ ಇದೆ. ಈ ಬಂಡೆ ಸಿಡಿದರೆ ನಮ್ಮ ಮನೆಗಳು ಹಾನಿಗೊಳಗಾಗುವುದು ಖಚಿತ. ಆದ್ದರಿಂದ ಯೋಜನೆಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ನಮಗೆ ಸೂಕ್ತ ಪರಿಹಾರ ನೀಡಿ ನಂತರ ಕಾಮಗಾರಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ನಂತರ ಅಧಿಕಾರಿಗಳು ಜಿ.ಜಿ. ಕೊಪ್ಪಲು ಹಾಗೂ ಬೀರಕನಹಳ್ಳಿ ಗ್ರಾಮಗಳ ಮಧ್ಯೆ ಇರುವ ದೊಡ್ಡ ಬಂಡೆಯ ಬಳಿ ತೆರಳಿ ವೀಕ್ಷಣೆ ನಡೆಸಿದರು. ಇದೇ ವೇಳೆ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಕೆ.ಎಸ್.ಮಂಜೇಗೌಡ ಮಾತನಾಡಿ, ಎತ್ತಿನಹೊಳೆ ಯೋಜನೆಯ ಕಾಮಗಾರಿ ನಡೆಸುವ ವೇಳೆ ಡೈನಾಮೇಟ್ ಬಳಸಿ ಬಂಡೆ ಸಿಡಿಸಲಾಗುತ್ತಿದೆ. ಇದರಿಂದ ಈಗಾಗಲೇ ಹಲವು ಮನೆಗಳ ಗೋಡೆ ಬಿರುಕು ಬಿಟ್ಟು, ಕುಸಿಯುವ ಸ್ಥಿತಿಯಲ್ಲಿವೆ. ಆದ್ದರಿಂದ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವವರೆಗೂ ಕಾಮಗಾರಿ ಮುಂದುವರಿಸಕೂಡದು ಎಂದು ಮನವಿ ಮಾಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಭೂ ಸ್ವಾಧೀನಾಧಿಕಾರಿ ಮಾರುತಿಗೌಡ, ಈಗಾಗಲೇ ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಸ್ಥಳೀಯರು ಕಾಮಗಾರಿ ನಡೆಸಲು ಅವಕಾಶ ಕೊಡಬೇಕು. ಕಾಮಗಾರಿ ನಡೆಯುವ ವ್ಯಾಪ್ತಿಯಲ್ಲಿ ಬರುವ ಮನೆಗಳ ಮಾಲೀಕರಿಗೆ ಭರವಸೆಯ ಪತ್ರಗಳನ್ನು ನೀಡಲಾಗುವುದು. ಕಾಮಗಾರಿ ಮುಗಿದ ಕೂಡಲೇ ಸೂಕ್ತ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ತಾಲೂಕಿನ ಪಾಳ್ಯ ಹೋಬಳಿ ಬೀರಕನಹಳ್ಳಿ ಜಿಜಿಕೊಪ್ಪಲು ಗ್ರಾಮಗಳ ಬಳಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆ ಕಾಮಗಾರಿ ಸ್ಥಳಕ್ಕೆ ಹಾಸನ ಜಿಲ್ಲೆಯ ಭೂಸ್ವಾಧೀನಾಧಿಕಾರಿ ಮಾರುತಿಗೌಡ, ಸಕಲೇಶಪುರ ಉಪವಿಭಾಗಾಧಿಕಾರಿ ಡಾ.ಶ್ರುತಿ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.