ಪರಿಹಾರ ದರ ನಿಗದಿಗೆ ಸಿಎಂ ಜತೆ ಚರ್ಚೆ: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ

16Tmk_Ettinahole_JCM
Published on

ತುಮಕೂರು: ಎತ್ತಿನಹೊಳೆ ಯೋಜನೆಯಡಿ ಬೈರಗೊಂಡ್ಲು ಜಲಾಶಯ ನಿರ್ಮಾಣಕ್ಕೆ ಭೂಸ್ವಾಧೀನಕ್ಕೊಳಪಡುವ ರೈತರ ಜಮೀನಿಗೆ ಸೂಕ್ತ ಪರಿಹಾರದ ದರ ನಿಗದಿ ಸಂಬಂಧ ಸಿಎಂ ಜತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಎತ್ತಿನಹೊಳೆ ಯೋಜನೆಯಡಿ ಕೊರಟಗೆರೆ ತಾಲೂಕು ವ್ಯಾಪ್ತಿಯಲ್ಲಿ ಉದ್ದೇಶಿಸಿತ ಬೈರಗೊಂಡ್ಲು ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಕುರಿತು ಜಿಲ್ಲಾಧಿಕಾರಿಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಜಲಾಶಯ ನಿರ್ಮಾಣಕ್ಕೆ ಕೊರಟಗೆರೆ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ರೈತರ ಜಮೀನು ಭೂಸ್ವಾಧೀನ ಪಡಿಸಿಕೊಳ್ಳಲಾಗುತ್ತಿದ್ದು, ದೊಡ್ಡಬಳ್ಳಾಪುರ ತಾಲೂಕಿನ ರೈತರಿಗೆ ನೀಡುತ್ತಿರುವ ಪ್ರತಿ ಎಕರೆಗೆ 32ಲಕ್ಷ ರೂ., ಪರಿಹಾರ ದರದಂತೆ ಕೊರಟಗೆರೆ ತಾಲೂಕಿನ ರೈತರಿಗೂ ದೊರೆಯಬೇಕೆನ್ನುವುದು ನನ್ನ ಆಶಯ. ಈ ನಿಟ್ಟಿನಲ್ಲಿ ಸಿಎಂ ಜತೆ ಚರ್ಚಿಸಿ ಸರ್ಕಾರದ ಮಟ್ಟದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

350 ಕೋಟಿ.ರೂ., ಪರಿಹಾರ: ಉದ್ದೇಶಿತ ಜಲಾಶಯದಿಂದ ಬೈರಗೊಂಡ್ಲು ಗ್ರಾಮದ ಸುತ್ತಮುತ್ತಲಿನ 5 ಹಳ್ಳಿಗಳು ಮುಳುಗಡೆಯಾಗಿ ಸ್ಥಳಾಂತರಗೊಳ್ಳಲಿವೆ, ಹೆಚ್ಚುವರಿಯಾಗಿ 350 ಕೋಟಿ ರೂ.ಗಳ ಭೂ ಪರಿಹಾರ ನಮ್ಮ ಭಾಗದ ರೈತರಿಗೆ ದೊರೆಯಬೇಕು. ಪ್ರತಿ ಎಕರೆಗೆ 32 ಲಕ್ಷ ರೂ. ಭೂ ಪರಿಹಾರ ಒದಗಿಸುವ ಕುರಿತು ಮುಖ್ಯಮಂತ್ರಿಗಳ ಮನವೊಲಿಸುವಂತೆ ಸಚಿವರಿಗೆ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಮನವಿ ಮಾಡಿದರು.

ಸಂಸದ ಜಿ.ಎಸ್. ಬಸವರಾಜು, ಜಲಸಂಪನ್ಮೂಲ ಇಲಾಖೆ ಅಪರ ಕಾರ್ಯದರ್ಶಿ ರಾಕೇಶ್‌ಸಿಂಗ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಮಧುಗಿರಿ ಉಪವಿಭಾಗಾಧಿಕಾರಿ ನಂದಿನಿ, ವಿಶೇಷ ಭೂಸ್ವಾಧೀನಾಧಿಕಾರಿಗಳಾದ ಚಂದ್ರಶೇಖರ್, ಶೇಖರ್, ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್, ಎತ್ತಿನಹೊಳೆ ಯೋಜನೆ ರೈತರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಿ.ಆರ್.ಶಿವರಾಮಯ್ಯ ಇತರರಿದ್ದರು.

ಒಕ್ಕಲೆಬ್ಬಿಸಬೇಡಿ ಎಂದು ಬೇಡಿಕೊಂಡ ಜಿಪಂ ಸದಸ್ಯ: ಎತ್ತಿನಹೊಳೆ ಯೋಜನೆಗೆ ನಮ್ಮ ವಿರೋಧ ಇಲ್ಲ. ಜನವಸತಿ ಪ್ರದೇಶಗಳಲ್ಲಿ ಬಫರ್ ಡ್ಯಾಂ ನಿರ್ಮಿಸಲು ಉದ್ದೇಶಿಸಿರುವುದಕ್ಕೆ ನಮ್ಮ ವಿರೋಧವಿದೆ. ನಮ್ಮ ಬೇರುಗಳು ಈ ನೆಲದಲ್ಲಿದ್ದು ನಮ್ಮನ್ನು ಒಕ್ಕಲೆಬ್ಬಿಸಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಎತ್ತಿನಹೊಳೆ ಯೋಜನೆ ರೈತರ ಹಿತರಕ್ಷಣಾ ವೇದಿಕೆ ಅಧ್ಯಕ್ಷ, ಜಿಪಂ ಸದಸ್ಯ ಜಿ.ಆರ್.ಶಿವರಾಮಯ್ಯ ಪರಿಪರಿಯಾಗಿ ಬೇಡಿಕೊಂಡ ಘಟನೆ ಸಭೆಯಲ್ಲಿ ನಡೆಯಿತು. ಪ್ರತಿಕ್ರಿಯಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ ಈ ಹಂತದಲ್ಲಿ ಯೋಜನೆ ಬದಲಿಸಲು ಸಾಧ್ಯವಿಲ್ಲ, ಯೋಜನೆ ಪೂರ್ಣಕ್ಕೆ ಜನಪ್ರತಿನಿಧಿಗಳ, ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಬಿಡುಗಡೆಯಾದ ಅನುದಾನ ತಡೆಹಿಡಿಯಬೇಡಿ : ಜಲಾಶಯವು ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ತಾಲೂಕಿನ ಪ್ರದೇಶಗಳಲ್ಲಿ ನಿರ್ಮಾಣವಾಗುತ್ತಿದ್ದು, ಪಕ್ಕದ ತಾಲೂಕಿನ ರೈತರಿಗೆ ನೀಡುವ ಪರಿಹಾರ ಮೊತ್ತವನ್ನು ನಮ್ಮ ತಾಲೂಕಿನ ರೈತರಿಗೂ ಸರ್ಕಾರ ನೀಡಬೇಕು. ಬೈರಗೊಂಡ್ಲು ಸುತ್ತಮುತ್ತಲಿನ ಗ್ರಾಮಗಳ ರಸ್ತೆ, ಚರಂಡಿ, ಮತ್ತಿತರ ಮೂಲಸೌಕರ್ಯ ಕಾಮಗಾರಿಗಳಿಗೆ ಹಿಂದಿನ ಸರ್ಕಾರ 150 ಕೋಟಿ ರೂ., ಮಂಜೂರಾತಿ ನೀಡಿತ್ತು. ಈ ಪೈಕಿ ಮೊದಲನೇ ಹಂತದಲ್ಲಿ 50 ಕೋಟಿ ರೂ. ಬಿಡುಗಡೆ ಮಾಡಿ ಕಾಮಗಾರಿ ಕೈಗೊಳ್ಳಲಾಗಿದೆ. ಇನ್ನುಳಿದ 100 ಕೋಟಿ ರೂ.,ಗಳನ್ನು ತಡೆಹಿಡಿಯದೆ ಬಿಡುಗಡೆ ಅಭಿವೃದ್ಧಿ ಕಾಮಗಾರಿಯನ್ನು ಮುಂದುವರಿಸುವಂತೆ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಒತ್ತಾಯಿಸಿದರು.

ಎತ್ತಿನಹೊಳೆ ಯೋಜನೆಗೆ ಭೂಸ್ವಾಧೀನವಾಗುವ ಜಿಲ್ಲೆಯ ತಿಪಟೂರು, ಚಿಕ್ಕನಾಯಕನಹಳ್ಳಿ ತಾಲೂಕು ಸೇರಿ ಇತರ ಕಡೆ ರೈತರಿಗೆ ನೋಟಿಸ್ ನೀಡಿಲ್ಲ. ನಿಯಮಾನುಸಾರ ರೈತರಿಗೆ ಭೂ- ಪರಿಹಾರ ನೀಡುವುದು ತಡವಾದರೂ ಮೊದಲು ನೋಟಿಸ್ ನೀಡಬೇಕು. ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net