

ಮೈಸೂರು: ಯುವ ವಕೀಲರು ನೈತಿಕ ಜೀವನವನ್ನು ಮೈಗೂಡಿಸಿಕೊಳ್ಳಬೇಕು. ಇದುವೇ ವೈಯಕ್ತಿಕ ಮತ್ತು ವೃತ್ತಿಯಲ್ಲೂ ಬಹಳ ಎತ್ತರಕ್ಕೆ ಬೆಳೆಸಲಿದೆ ಎಂದು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್‌ಕುಮಾರ್ ಹೇಳಿದರು.
ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಮೈಸೂರು ವಕೀಲರ ಸಂಘದ ಸಹಯೋಗದಲ್ಲಿ ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಆಯೋಜಿಸಿದ್ದ ಹುಣಸೂರು, ಪಿರಿಯಾಪಟ್ಟಣದ ನ್ಯಾಯಾಧೀಶರ ನಿವಾಸ, ಜಿಲ್ಲಾ ನ್ಯಾಯಾಂಗ ನೌಕರರ ಸಂಘದ ಕಟ್ಟಡ, ಮಳಲವಾಡಿಯ ಹೊಸ ನ್ಯಾಯಾಲಯಗಳ ಸಂಕೀರ್ಣದಲ್ಲಿ 2 ಹೆಚ್ಚುವರಿ ಲಿಫ್ಟ್‌ಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಕೀಲರು ಸೇರಿದಂತೆ ಪ್ರತಿಯೊಬ್ಬರಿಗೂ ನೈತಿಕತೆ ಬಹಳ ಮುಖ್ಯ. ಇದು ಬದುಕಿನಲ್ಲಿ ನಿರೀಕ್ಷೆ ಮಾಡದಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ. ಆದ್ದರಿಂದ ನೈತಿಕ ಜೀವನ ಮಾರ್ಗ ಅನುಸರಿಸಬೇಕು ಎಂದು ಕಿವಿಮಾತು ಹೇಳಿದರು. ಶಿಸ್ತು, ಶ್ರದ್ಧೆ, ಪೂರ್ವಸಿದ್ಧತೆ ಮತ್ತು ನೈತಿಕ ಮೌಲ್ಯ ಎಂಬ ನಾಲ್ಕು ಸೂತ್ರವನ್ನು ಪ್ರತಿಯೊಬ್ಬ ವಕೀಲರೂ ತಮ್ಮ ವೃತ್ತಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಕ್ಷಿದಾರರ ಪ್ರಕರಣಗಳನ್ನೂ ಪೂರ್ಣಗೊಳಿಸುವ ಶಿಸ್ತನ್ನು ಬೆಳೆಸಿಕೊಳ್ಳಬೇಕು. ಶ್ರದ್ಧೆಯಿಂದ ವಕೀಲರ ವೃತ್ತಿ ಮಾಡುವ ಮೂಲಕ ತಮ್ಮನ್ನು ನಂಬಿರುವ ಜನರಿಗೆ ನ್ಯಾಯ ಕಲ್ಪಿಸಿಕೊಡಬೇಕು. ಇದಕ್ಕಾಗಿ ನೈತಿಕ ದಾರಿಯಲ್ಲೇ ಸಾಗಬೇಕು. ಇದನ್ನು ಬಿಟ್ಟು ಬೇರೆ ಕವಲುದಾರಿಯಲ್ಲಿ ಎಂದೂ ಹೋಗಬಾರದು ಎಂದು ಯುವ ವಕೀಲರಿಗೆ ಕಿವಿಮಾತು ಹೇಳಿದರು.
ವ್ಯಾಜ್ಯಗಳ ವಾದ ಮಂಡನೆಗೂ ಮುನ್ನ ಸೂಕ್ತ ಪೂರ್ಣಪ್ರಮಾಣದಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು. ಅದಕ್ಕೆ ಸಂಬಂಧಿಸಿದ ವಿಷಯ, ಕಾನೂನಿನ ಬಗ್ಗೆ ಅಧ್ಯಯನ ಮಾಡಬೇಕು. ನಾನು ವಕೀಲರಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಸೌಕರ್ಯಗಳೇ ಇರಲಿಲ್ಲ. ಈಗ ಕಾಲ ಬದಲಾಗಿದೆ. ಈಗ ಎಲ್ಲ ರೀತಿ ಸೌಲಭ್ಯಗಳು ದೊರೆಯುತ್ತಿವೆ. ಇವುಗಳನ್ನು ಬಳಸಿಕೊಂಡು ವಕೀಲರು ವೃತ್ತಿಯಲ್ಲಿ ಮುಂದೆ ಬರಬೇಕು ಎಂದರು.
ಜೀವನದಲ್ಲಿ ಆದರ್ಶ, ಸರಳತೆ, ಸಜ್ಜನಿಕೆ ರೂಢಿಸಿಕೊಂಡರೆ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂಬುದಕ್ಕೆ ನನಗೆ ನನ್ನ ಬದುಕೇ ಉದಾಹರಣೆ. 28 ವರ್ಷದ ಬಳಿಕ ಕನ್ನಡಿಗನಾಗಿ ಈ ಹುದ್ದೆಯನ್ನು ಅಲಂಕರಿಸಿರುವುದರಿಂದ ಬಹಳಷ್ಟು ಆನಂದ ಉಂಟಾಗಿದೆ. ಆದರೆ, ಇಷ್ಟು ಎತ್ತರಕ್ಕೆ ಬೆಳೆಯುತ್ತೇನೆಂದು ಎಂದೂ ಊಹಿಸಿರಲಿಲ್ಲ ಎಂದು ಹೇಳಿದರು.
ತಂದೆಯೊಂದಿಗೆ ಮೈಸೂರು ಭೇಟಿ, ಮಂಡ್ಯಕ್ಕೆ ವಕೀಲರಾಗಿ ಬಂದಿದ್ದ ಕ್ಷಣ, ಕಾನೂನು ವ್ಯಾಸಂಗದ ಸಂದರ್ಭಗಳನ್ನು, ವಕೀಲರ ವೃತ್ತಿ ಆರಂಭಿಕ ಕಾಲವನ್ನು ಸಭಿಕರ ಮುಂದೆ ಸ್ಮರಣೆ ಮಾಡಿಕೊಂಡು ದಿನೇಶ್‌ಕುಮಾರ್, ಮೈಸೂರಿಗರು ಪ್ರೀತಿ-ವಿಶ್ವಾಸವನ್ನು ತೋರಿಸಿದ್ದೀರಿ. ಇದೆಲ್ಲವೂ ನನ್ನ ಹೃದಯವನ್ನು ಸ್ಪರ್ಶಿಸಿದೆ ಎಂದರು.
ಹೈಕೋರ್ಟ್ ಆಡಳಿತಾತ್ಮಕ ನ್ಯಾಯಾಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್, ಹೈಕೋರ್ಟ್ ನ್ಯಾಯಮೂರ್ತಿ, ಕರ್ನಾಟಕ ನ್ಯಾಯಾಂಗ ಅಕಾಡೆಮಿ ಅಧ್ಯಕ್ಷ ಕೆ.ಸೋಮಶೇಖರ್, ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ, ಹೈಕೋರ್ಟ್ ಮಹಾ ವಿಲೇಖನಾಧಿಕಾರಿ ಕೆ.ಎಸ್. ಭರತ್‌ಕುಮಾರ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪ್ರಭಾವತಿ ಎಂ.ಹಿರೇಮಠ, ಮೈಸೂರು ವಕೀಲರ ಸಂಘದ ಉಪಾಧ್ಯಕ್ಷ ಪುಟ್ಟಸಿದ್ದೇಗೌಡ, ಕಾರ್ಯದರ್ಶಿ ಎಂ.ಉಮೇಶ್, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಇಂಜಿನಿಯರ್ ಆರ್.ವಿನಯ್‌ಕುಮಾರ್ ಇನ್ನಿತರರಿದ್ದರು.
ಮೈಸೂರು ನಗರದಲ್ಲೇ ನಿವೃತ್ತಿ ಜೀವನ ಕಳೆಯುತ್ತೇನೆ. ಹೈಕೋರ್ಟ್ ಆಡಳಿತಾತ್ಮಕ ನ್ಯಾಯಮೂರ್ತಿಯಾಗಿ ಇಲ್ಲಿಗೆ ಬಂದಾಗ ಈ ಮಾತು ಹೇಳಿದ್ದೆ. ಅದಕ್ಕೆ ಈಗಲೂ ಬದ್ಧವಾಗಿರುವೆ. ಇಲ್ಲಿಯೇ ನನ್ನ ಸಂಧ್ಯಾಕಾಲ ಕಳೆಯಲು ತೀರ್ಮಾನ ಮಾಡಿದ್ದೇನೆ ಎಂದು ನ್ಯಾ. ಪಿ.ಎಸ್. ದಿನೇಶ್‌ಕುಮಾರ್‌ಹೇಳಿದರು.
ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಂ.ಮಹಾದೇವಸ್ವಾಮಿ ಮಾತನಾಡಿ, ಮೈಸೂರಿಗೆ ಹೊಸದಾಗಿ 12 ಹೆಚ್ಚುವರಿ ನ್ಯಾಯಾಲಯ ಮಂಜೂರಾಗಿವೆ. ಸದ್ಯಕ್ಕೆ ಸ್ಥಳಾವಕಾಶದ ಕೊರತೆ ಇದೆ. ಅದಕ್ಕಾಗಿ ಜಿಲ್ಲಾ ಪಂಚಾಯಿತಿ ಕಚೇರಿಯನ್ನು ಹಳೇ ಜಿಲ್ಲಾಧಿಕಾರಿ ಕಚೇರಿಗೆ ಸ್ಥಳಾಂತರ ಮಾಡಿ. ತೆರವಾಗುವ ಜಿಪಂ ಕಚೇರಿಯನ್ನು ಕೋರ್ಟ್‌ಗೆ ಬಿಟ್ಟು ಕೊಡಿ ಎಂದು ಕೋರಿದರು.
ಬೆಂಗಳೂರು ವಕೀಲರ ಸಂಘದ ಮಾದರಿಯಲ್ಲೇ ರಾಜ್ಯ ಎಲ್ಲ ವಕೀಲರ ಸಂಘಗಳಿಗೆ ಸರ್ಕಾರದಿಂದಲೇ ವಿದ್ಯುತ್ ಬಿಲ್ ಪಾವತಿ ಮಾಡಬೇಕು. ರಾಜ್ಯದ ಎಲ್ಲ ಕೋರ್ಟ್, ವಕೀಲರ ಸಂಘದ ಕಟ್ಟಡದ ಛಾವಣಿಯಲ್ಲಿ ಸೌರಶಕ್ತಿ ವಿದ್ಯುತ್ ಅಳವಡಿಕೆಗೆ ಕ್ರಮ ವಹಿಸಬೇಕು ಎಂದು ಕೋರಿದರು.