ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ 6ನೇ ವರ್ಷದ ಸರ್ವ ಸಾಧಾರಣಾ ಸಭೆ

Ethanol, Unit, MLA, Yashwantaraya Gowda Patil, Bhima Shankar Cooperative Sugar Factory, Sarva Sadrhara Sabha, Indi,
ಇಂಡಿ ತಾಲೂಕಿನ ಮರಗೂರ ಗ್ರಾಮದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕಾರ್ಖಾನೆಯ 6ನೇ ವಾರ್ಷಿಕ ಸರ್ವ ಸಾಧಾರಣಾ ಸಭೆಯನ್ನು ಅಧ್ಯಕ್ಷ- ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿದರು. ಎಂ.ಆರ್. ಪಾಟೀಲ, ವಿಶ್ವನಾಥ ಬಿರಾದಾರ, ಬಿ.ಎಂ. ಕೋರೆ, ಸಿದ್ದಣ್ಣ ಬಿರಾದಾರ ಇತರರಿದ್ದರು.
Published on

ಇಂಡಿ: ಭೀಮಾಶಂಕರ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ವರ್ಷದಲ್ಲಿಯೇ 188 ಕೋಟಿ ರೂ. ವೆಚ್ಚದಲ್ಲಿ ಇಥೆನಾಲ್ ಉತ್ಪಾದನಾ ಘಟಕ ಸ್ಥಾಪನೆ ಮಾಡಲಾಗುವುದು. ಬರುವ ಡಿಸೆಂಬರ್ ತಿಂಗಳಲ್ಲಿಯೇ ಅದು ಕಾರ್ಯಾರಂಭ ಮಾಡಲಿದೆ. ಇದರ ಉದ್ಘಾಟನೆಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಹಕಾರಿ ರಂಗದ ಎಲ್ಲ ಸಚಿವರನ್ನು ಕರೆಸಲಾಗುವುದು ಎಂದು ಶಾಸಕ- ಕಾರ್ಖಾನೆ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ಮರಗೂರ ಗ್ರಾಮದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ 6ನೇ ವರ್ಷದ ವಾರ್ಷಿಕ ಸರ್ವ ಸಾಧಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ 2017-2018 ರಲ್ಲಿ ಪ್ರಾರಂಭವಾದ ಈ ಕಾರ್ಖಾನೆಗೆ ಕಬ್ಬು ಕಳಿಸಿದ ರೈತರಿಗೆ ಕೇಂದ್ರ ಸರ್ಕಾರದ ಎಫ್‌ಆರ್‌ಪಿ ದರಕ್ಕಿಂತ ಹೆಚ್ಚಿನ ದರ ನೀಡಲಾಗಿದೆ. ಕಳೆದ 6 ವರ್ಷಗಳಲ್ಲಿ 52,58,80,789 (52 ಕೋಟಿ 58 ಲಕ್ಷ 80 ಸಾವಿರದ ಏಳುನೂರ ಎಂಬತ್ರೋಂಬತ್ತು) ಹಣವನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಇಲ್ಲಿಯವರೆಗೆ ರೈತರ ಬಿಲ್ಲಿನ ಯಾವುದೇ ಹಣ ಬಾಕಿ ಉಳಿಸಿಕೊಂಡಿಲ್ಲ. ಕಾರ್ಖಾನೆ ಕಟ್ಟಲು ವಿವಿಧ ಬ್ಯಾಂಕ್‌ಗಳಿಂದ ಪಡೆದುಕೊಂಡಿರುವ ಸಾಲದ ಗಂಟು ಮತ್ತು ಬಡ್ಡಿ ಸಮೇತ ಕಟ್ಟುತ್ತ ಬಂದಿದ್ದೇವೆ. ಯಾವುದೇ ಬಾಕಿ ಉಳಿಸಿಕೊಂಡಿಲ್ಲ ಎಂದರು.

ಕಾರ್ಖಾನೆ ಪ್ರತಿ ವರ್ಷ ಕನಿಷ್ಟ 5.5 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಬೇಕು. ಆದರೆ ಅಷ್ಟು ನುರಿಸುವುದು ಕಷ್ಟವಾಗುತ್ತಿದೆ. ರೈತರು ಇನ್ನು ಮುಂದೆಯಾದರೂ ಕಾರ್ಖಾನೆಗೆ ಹೆಚ್ಚಿನ ಮತ್ತು ಗುಣಮಟ್ಟದ ಕಬ್ಬು ಪೂರೈಕೆ ಮಾಡಬೇಕು ಎಂದು ಮನವಿ ಮಾಡಿದರು.

ಕಳೆದ 100 ವರ್ಷದ ಸರ್ವೇ ಪ್ರಕಾರ ನಮ್ಮ ಭಾಗದಲ್ಲಿ ಅತಿ ಕಡಿಮೆ ಮಳೆಯಾಗಿದೆ. ಇದನ್ನು ಅರಿತ ಸರ್ಕಾರ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಗೆ 3 ಸಾವಿರ ಕೋಟಿ ರೂ. ಅನುದಾನ ನೀಡಿದೆ. ಬರುವ 2 ವರ್ಷಗಳಲ್ಲಿ ಅದರ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರಿಂದ ಇಂಡಿ, ಸಿಂದಗಿ ಮತ್ತು ಚಡಚಣ ತಾಲೂಕುಗಳು ಸಂಪೂರ್ಣ ನೀರಾವರಿಯಾಗಲಿವೆ. ಕಾರ್ಖಾನೆಯ ಷೇರುದಾರರು ಕೊಡುವ ಸಲಹೆ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸುವುದಾಗಿ ಭರವಸೆ ನೀಡಿದರು. ಪ್ರಸಕ್ತ ಸಾಲಿನಲ್ಲಿ ಪ್ರತಿ ಷೇರುದಾರರಿಗೆ 25 ಕೆ.ಜಿ. ಸಕ್ಕರೆಯನ್ನು ಅರ್ಧ ದರದಲ್ಲಿ ನೀಡಲಾಗುವುದು ಎಂದು ತಿಳಿಸಿದರು.

ಎಂ.ಆರ್. ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಖಾನೆಯ ನಿರ್ದೇಶಕರಾದ ವಿಶ್ವನಾಥ ಬಿರಾದಾರ, ಬಿ.ಎಂ. ಕೋರೆ, ಸಿದ್ದಣ್ಣ ಬಿರಾದಾರ, ಜೆಟ್ಟೆಪ್ಪ ರವಳಿ, ಸುರೇಶಗೌಡ ಪಾಟೀಲ, ಅಶೋಕ ಗಜಾಕೋಶ, ರೇವಗೊಂಡಪ್ಪ ಪಾಟೀಲ, ಬಸವರಾಜ ಧನಶ್ರೀ, ಲಲಿತಾ ನಡಗೇರಿ, ಸರೋಜನಿ ಪಾಟೀಲ, ವಿಶ್ವನಾಥ ಬಿರಾದಾರ, ದುಂಡಪ್ಪ ಖೇಡ, ಎಂಡಿ ಎಸ್.ಕೆ. ಭಾಗ್ಯಶ್ರೀ ಇದ್ದರು.

ಸಭೆಯಲ್ಲಿ ಸಹಕಾರಿ ರತ್ನ ಶ್ರೀಮಂತ ಇಂಡಿ, ರೈತ ಮುಖಂಡ ಗುರುನಾಥ ಬಗಲಿ, ಶರಣಗೌಡ ಪಾಟೀಲ, ಎಸ್.ಬಿ.ಬೂದಿಹಾಳ ಮಾತನಾಡಿ, ಕಾರ್ಖಾನೆಯ ಸ್ಥಳದಲ್ಲಿ ರೈತ ಸಮ್ಮೇಳನಗಳನ್ನು ಏರ್ಪಡಿಸಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net