ಎಚ್ಚೆನ್ ಕಲಿತ ಶಾಲೆಗೆ ಶತಮಾನೋತ್ಸವ ಸಂಭ್ರಮ

WEB1
Published on

31ಕ್ಕೆ ಕಾರ್ಯಕ್ರಮ ನಿಗದಿ ಶಿಷ್ಯರಿಂದ ವರ್ಷವಿಡೀ ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯ ವಿಚಾರಧಾರೆ ಅರುಹುವ ಕಾರ್ಯ

ಗೌರಿಬಿದನೂರು: ತಾಲೂಕಿನ ಹೊಸೂರು ಗ್ರಾಮದಲ್ಲಿ ಜ.31ರಂದು ಶಿಕ್ಷಣ ತಜ್ಞ, ವಿಚಾರವಾದಿ ಡಾ.ಎಚ್.ನರಸಿಂಹಯ್ಯ ಅವರ ಜನ್ಮ ಶತಮಾನೋತ್ಸವ ಹಾಗೂ ಗ್ರಾಮದ ಸರ್ಕಾರಿ ಶಾಲೆಯ ಶತಮಾನೋತ್ಸವ ಆಚರಿಸಲು ಎಚ್ಚೆನ್ ಅಭಿಮಾನಿಗಳ ಬಳಗ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘ ಸಕಲ ಸಿದ್ಧತೆಗಳಲ್ಲಿ ತೊಡಗಿದೆ.

ಹೊಸೂರು ಗ್ರಾಮದ ಶಾಲೆಯನ್ನು 1920ರಲ್ಲಿ ಸ್ಥಾಪನೆ ಮಾಡಲಾಗಿದ್ದು, 104 ವರ್ಷಗಳನ್ನು ಪೂರೈಸಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಶಾಲೆಗಳೇ ಅಪರೂಪವಾಗಿದ್ದಾಗ ಹೊಸೂರು ಹೋಬಳಿಯಲ್ಲಿ ಪ್ರಾರಂಭವಾದ ಮೊದಲ ಸರ್ಕಾರಿ ಶಾಲೆ ಇದಾಗಿದೆ. ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ ಶಿಕ್ಷಣ ತಜ್ಞ, ಪದ್ಮಭೂಷಣ ಡಾ.ಎಚ್.ನರಸಿಂಹಯ್ಯ ಅವರು ವಿಚಾರವಾದಿ ಹಾಗೂ ಗಾಂಧಿವಾದಿಯಾಗಿ ಬಹು ಎತ್ತರಕ್ಕೆ ಬೆಳೆದು ನಾಡಿನಲ್ಲಿ ಮನೆ ಮಾತಾದರು.

ಅರ್ಥಪೂರ್ಣ ಆಚರಣೆ

ಪದ್ಮಭೂಷಣ ಡಾ.ಎಚ್.ನರಸಿಂಹಯ್ಯನವರೂ ಕೂಡ ಶಾಲೆ ಪ್ರಾರಂಭವಾದ ವರ್ಷ 1920ರಲ್ಲೇ ಜನಿಸಿದರು. ಸಮಾಜಕ್ಕೆ ಅವರು ನೀಡಿದ ಕೊಡುಗೆ ಅಪಾರ. ತಮ್ಮ ಪ್ರಖರ ವೈಚಾರಿಕತೆ, ಮೌಢ್ಯಗಳ ವಿರುದ್ಧದ ಹೋರಾಟ ಮತ್ತು ಗ್ರಾಮಾಂತರ ಭಾಗದಲ್ಲಿ ಶಿಕ್ಷಣಕ್ಕೆ ಅವರು ನೀಡಿದ ಮಹತ್ವದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲೂ ಅವರು ಹೆಸರು ವಾಸಿಯಾದವರು. ಹಾಗಾಗಿ ಶಾಲೆ ಮತ್ತು ಎಚ್. ಎನ್ ಅವರ ಶತಮಾನೋತ್ಸವನ್ನು ಅವರ ಪುಣ್ಯತಿಥಿಯ ಜ.31ರಂದು ಆಚರಿಸಲು ನಿರ್ಧರಿಸಲಾಗಿದೆ.

ವರ್ಷವಿಡೀ ಕಾರ್ಯಕ್ರಮ

ಜ.31ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಈ ಅಂಗವಾಗಿ ಡಾ.ಎಚ್.ಎನ್. ಅವರು ಪ್ರತಿಪಾದಿಸಿದ ವೈಜ್ಞಾನಿಕ ಮನೋಭಾವ, ಗ್ರಾಮೀಣ ಶಿಕ್ಷಣಕ್ಕೆ ಒತ್ತು, ಸಾಮಾನ್ಯರಿಗೂ ವಿಜ್ಞಾನದ ಶಿಕ್ಷಣ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅರಿವು, ಮಾತೃಭಾಷಾ ಮಾಧ್ಯಮವೂ ಒಳಗೊಂಡಂತೆ ವಿವಿಧ ಕಾರ್ಯಕ್ರಮಗಳನ್ನು ವರ್ಷವಿಡೀ ನಡೆಸಲು ನಿರ್ಧರಿಸಲಾಗಿದೆ.

"ನಾವೆಲ್ಲ ಪದ್ಮಭೂಷಣ ಡಾ.ಎಚ್.ನರಸಿಂಹಯ್ಯ ಅವರ ಶಿಷ್ಯರಾಗಿದ್ದಕ್ಕೆ ಗರ್ವವಿದೆ. ಇಂದಿಗೂ ಅವರು ತೋರಿಸಿಕೊಟ್ಟ ಸರಳ ಸಜ್ಜನಿಕೆಯ ಮಾರ್ಗದಲ್ಲಿ ಸಾಗುತ್ತಿದ್ದೇವೆ. ಅವರ ಅಭಿಮಾನಿಗಳು ಹಾಗೂ ಶಿಷ್ಯ ಕೋಟಿ ಸೇರಿ ಎಚ್.ಎನ್ ಅವರ ಜನ್ಮ ಶತಮಾನೋತ್ಸ ಹಾಗೂ ಅವರು ಓದಿದ ಶಾಲೆಯ ಶತಮಾನೋತ್ಸವವನ್ನು ಅರ್ಥಗರ್ಭಿತವಾಗಿ ಆಚರಿಸಲು ನಿರ್ಧರಿಸಿದ್ದೇವೆ." - ಎಚ್.ವಿ.ಮಂಜುನಾಥ್, ಜಿಪಂ ಮಾಜಿ ಅಧ್ಯಕ್ಷ "ಡಾ.ಎಚ್ಚೆನ್ ಅವರು ಜನರಲ್ಲಿ ವೈಜ್ಞಾನಿಕ ಹಾಗೂ ವೈಚಾರಿಕತೆ ಬಿತ್ತಿದವರು. ಜೀವನದ ಕೊನೆಯ ಉಸಿರು ಇರುವವರೆಗೂ ಸರಳತೆ ಹಾಗೂ ಸಜ್ಜನಿಕೆಯಿಂದ ತೋರಿಸಿಕೊಟ್ಟ ಗಾಂಧಿವಾದಿ ಅವರು. ಅವರ ಸಂದೇಶಗಳನ್ನು ಯುವ ಪೀಳಿಗೆಗೆ ಅರುಹುವ ನಿಟ್ಟಿನಲ್ಲಿ ಜನ್ಮ ಶತಮಾನೋತ್ಸವ ಅಂಗವಾಗಿ ವರ್ಷವಿಡೀ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ." - ಡಾ.ಎಚ್.ಎಸ್.ಶಶಿಧರ್, ಎಚ್ಚೆನ್ ಶಿಷ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net