ಇಟಿಎಪಿ ಸಾಫ್ಟ್‌ವೇರ್ ಬಳಕೆ ತರಬೇತಿ: ಪಿಇಎಸ್ ಕಾಲೇಜಿನಲ್ಲಿ ಆಯೋಜನೆ

ETAP software usage training Mandya
Published on

ಮಂಡ್ಯ: ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಟಿಎಪಿ ಸಾಫ್ಟ್‌ವೇರ್ ಬಳಸಿ ಸುಧಾರಿತ ವಿದ್ಯುತ್ ವ್ಯವಸ್ಥೆಯ ವಿಶ್ಲೇಷಣೆ ಕುರಿತಾಗಿ ತರಬೇತಿ ಆಯೋಜಿಸಲಾಗಿತ್ತು.

ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಿಂದ ಸೆ.30ರಿಂದ ಅ.5ರವರೆಗೆ ನಡೆಯುತ್ತಿರುವ ತರಬೇತಿಯಲ್ಲಿ ಮಂಡ್ಯ ಮತ್ತು ಮೈಸೂರಿನ ಇಂಜಿನಿಯರಿಂಗ್ ಹಾಗೂ ಡಿಪ್ಲೊಮಾ ಕಾಲೇಜಿನ ಪ್ರಾಧ್ಯಾಪಕರು ಪಾಲ್ಗೊಂಡಿದ್ದಾರೆ.

ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಆಯೋಜಿಸಿದ್ದ ಉದ್ಘಾಟನಾ ಸಮಾರಂಭದಲ್ಲಿ ಮೈಸೂರು ವಲಯದ ಹೆಚ್ಚುವರಿ ಮುಖ್ಯ ವಿದ್ಯುತ್ ಪರಿಶೋಧಕರೂ ಆದ ಪಿಇಎಸ್‌ನ ಹಿರಿಯ ವಿದ್ಯಾರ್ಥಿ ಎಚ್.ಎಸ್.ವೆಂಕಟೇಶ್, ಮೂಲ ತಂತ್ರಜ್ಞಾನಗಳನ್ನು ಕಲಿಯುವ ಮಹತ್ವ ತಿಳಿಸಿದರು. ಜತೆಗೆ ವಿದ್ಯುತ್ ವ್ಯವಸ್ಥೆ, ವಿನ್ಯಾಸ ಮತ್ತು ಕಾರ್ಯಾಚರಣೆಯ ವೇಳೆ ವಿಶ್ವಾಸಾರ್ಹತೆ, ಸುರಕ್ಷತೆ ಅವಶ್ಯಕತೆ ಬಗ್ಗೆ ವಿವರಿಸಿದರು. ಮಾತ್ರವಲ್ಲದೆ 1 ಲಕ್ಷ ರೂ ಚೆಕ್ ಅನ್ನು ನೀಡಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳ ಕಲಿಕಾ ಚಟುವಟಿಕೆಗೆ ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಕೆ.ಎಂ.ಮಹೇಶ್‌ಕುಮಾರ್ ಮಾತನಾಡಿ, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಮತ್ತು ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್ ಅವರ ಬೆಂಬಲ ಮತ್ತು ಪ್ರೋತ್ಸಾಹದಿಂದ ತರಬೇತಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಪ್ರಾಧ್ಯಾಪಕರಿಗೆ ಇಟಿಎಪಿ ಸಾಫ್ಟ್‌ವೇರ್ ಉಪಯೋಗಿಸುವ ಪರಿಣತಿ ಒದಗಿಸಲಿದೆ. ಮಾತ್ರವಲ್ಲದೆ ಪಠ್ಯಕ್ರಮದಲ್ಲಿ ಇದನ್ನು ಒಂದು ಭಾಗವನ್ನಾಗಿ ಮಾಡಲು ಉದ್ದೇಶಿಸಿದ್ದು, ಇದರಿಂದ ಅಂತಿಮವಾಗಿ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತದೆ ಎಂದರು.

ಪ್ರಾಂಶುಪಾಲ ಡಾ.ಎಚ್.ಎಂ.ನಂಜುಂಡಸ್ವಾಮಿ ಮಾತನಾಡಿ, ಪ್ರಾಧ್ಯಾಪಕರು ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ವಿಕೆಇಎಸ್ ಕಂಪನಿ ಸಂಸ್ಥಾಪಕ ಬಿ.ಎಲ್.ಫನೀಂದ್ರ ಕುಮಾರ್ ಮಾತನಾಡಿ, ಪ್ರಾಧ್ಯಾಪಕರು ಹಾಗೂ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಕೃಷಿ ಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಗಳ ಮೂಲವನ್ನು ಪತ್ತೆ ಮಾಡಲು ತರಬೇತಿ ನೆರವಾಗಲಿದೆ ಎಂದರು.

ಕಾರ್ಯಕ್ರಮ ಸಂಯೋಜಕ ಡಾ.ಸಿ.ಸುನೀಲ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net