ನಾಲೆಗಳಿಗೆ ಏ.20 ರವರೆಗೆ ನೀರು ಹರಿಸಿ

14LNG01
ಲಿಂಗಸುಗೂರು ಎಸಿ ಅವಿನಾಶ ಶಿಂಧೆಗೆ ಕರ್ನಾಟಕ ರಾಜ್ಯ ರೈತಸಂಘದಿಂದ ಸೋಮವಾರ ಮನವಿ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ಶಿವಪುತ್ರಗೌಡ ಪಾಟೀಲ್, ಜಿಲ್ಲಾ ಉಪಾಧ್ಯಕ್ಷ ಬಸನಗೌಡ ಹಿರೇಹೆಸರೂರು, ಕುಪ್ಪಣ್ಣ ಮಾಣಿಕ್ ವಕೀಲ, ಧರ್ಮಪ್ಪ ಜಂಗೀರಾಂಪುರ, ರಾಮಣ್ಣ ಅಡಿಕೇರ ಇತರರು ಇದ್ದರು.
Published on

ಲಿಂಗಸುಗೂರು: ನಾರಾಯಣಪುರ ಬಲದಂಡೆ ಮತ್ತು ರಾಂಪೂರ ಏತ ನೀರಾವರಿ ಕಾಲುವೆಗಳಿಗೆ ಏ.20 ರವರೆಗೆ ನೀರು ಹರಿಸಬೇಕೆಂದು ಒತ್ತಾಯಿಸಿ ಎಸಿ ಅವಿನಾಶ ಶಿಂಧೆಗೆ ಕರ್ನಾಟಕ ರಾಜ್ಯ ರೈತಸಂಘ (ಕೋಡಿಹಳ್ಳಿ ಬಣ) ಪ್ರಮುಖರು ಸೋಮವಾರ ಮನವಿ ಸಲ್ಲಿಸಿದರು.

ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಇಳುವರಿ ನೆಲಕಚ್ಚಿ ಅಲ್ಪಸ್ವಲ್ಪ ಬೆಳೆ ಕೈಗೆಟುಕಿ ರೈತರು ತೊಂದರೆ ಎದುರಿಸುವಂತಾಯಿತು. ಹಿಂಗಾರು ಹಂಗಾಮಿನಲ್ಲಿ ನೀರಾವರಿ ಸಲಹಾ ಸಮಿತಿ ಮಾ.30 ರವರೆಗೆ ಕಾಲುವೆಗೆ ನೀರು ಹರಿಸುವ ನಿರ್ಧಾರ ಕೈಗೊಂಡಿದ್ದು, ಇದರಿಂದ ತೆನೆಕಟ್ಟುವ ಹಂತದಲ್ಲಿರುವ ಬೆಳೆಗಳು ಹಾಳಾಗಲಿವೆ.

ಕೃಷಿ ಪಂಪ್‌ಸೆಟ್‌ಗಳಿಗೆ ಜೆಸ್ಕಾಂ ಸಮರ್ಪಕ ವಿದ್ಯುತ್ ಪೂರೈಸದ ಕಾರಣ ಬೆಳೆಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ನೀರಾವರಿ ಇಲಾಖೆ ಅಧಿಕಾರಿಗಳು ಏ.20 ರವರೆಗೆ ನಾಲೆಗಳಿಗೆ ನೀರು ಪೂರೈಸಬೇಕು ಮತ್ತು ಜೆಸ್ಕಾಂ ಇಲಾಖೆ ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ಪೂರೈಸುವ ಮೂಲಕ ಬೆಳೆಗಳನ್ನು ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net