

ಹುಬ್ಬಳ್ಳಿ : ಮುಡಾ ಹಗರಣದಲ್ಲಿ ಸಿಲುಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡದಿದ್ದರೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಶನಿವಾರ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ಎಂದರು.
ಮುಡಾ ಹಗರಣದ ಎ 1 ಆರೋಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆಗಿದ್ದರಿಂದ ಇಲ್ಲಿಯ ಅಧಿಕಾರಿಗಳು ಅವರ ವಿರುದ್ಧ ಸರಿಯಾದ ತನಿಖೆ ಮಾಡುವುದಿಲ್ಲ, ಪರಿಣಾಮ ಸತ್ಯ ಹೊರಬರುವುದಿಲ್ಲ ಎಂದು ಹೇಳಿದರು.
ಸಿಎಂ ಅವರು ಇತ್ತೀಚೆಗೆ ಅಷ್ಟೇ ಲೋಕಾಯುಕ್ತಕ್ಕೆ ತಮಗೆ ಬೇಕಾದವರನ್ನು ನೇಮಕ ಮಾಡಿಕೊಂಡಿದ್ದಾರೆ. ಹೀಗಿರುವಾಗ ಸಿಎಂ ವಿರುದ್ಧ ಲೋಕಾಯುಕ್ತ ಎಸ್ಪಿ ಆಗಲಿ, ಕರ್ನಾಟಕ ಪೊಲೀಸ್ ಆಗಲಿ ಪಾರದರ್ಶಕ ತನಿಖೆ ನಡೆಸುವುದು ಅಸಾಧ್ಯದ ಮಾತು. ಹಾಗಾಗಿ, ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು. ಇಲ್ಲವೇ ಸಿಬಿಐಗೆ ವಹಿಸಬೇಕು ಎಂದು ಜೋಶಿ ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಂಧನ ಕಾನೂನಿಗೆ ಬಿಟ್ಟ ವಿಷಯ. ಆದರೆ, ಅವರದ್ದೇ ಸರ್ಕಾರ ಇರುವುದರಿಂದ ಪ್ರಕರಣ ಸುದೀರ್ಘವಾಗಲಿದೆ. ನಮ್ಮ ಹೋರಾಟವೂ ಮುಂದುವರಿಯಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ನೈತಿಕವಾಗಿ ದಿವಾಳಿ ಎದ್ದಿವೆ. ನಿರ್ಲಜ್ಜೆಯ ಸಂಸ್ಕೃತಿ, ಸರ್ಕಾರ ಇವರದ್ದಾಗಿದೆ ಎಂದು ಜೋಶಿ ಕಿಡಿ ಕಾರಿದರು.
ವಾದ್ರಾ ಭೂ ಅಕ್ರಮ ಸೇರಿದಂತೆ ಸಾಕಷ್ಟು ಪ್ರಕರಣಗಳನ್ನು ಹೊತ್ತಿರುವ ಕಾಂಗ್ರೆಸ್ ಹೈಕಮಾಂಡೇ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದರು.
2011ರಲ್ಲಿ ರಾಜ್ಯಪಾಲರು ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಎಂದು ಇದೇ ಕಾಂಗ್ರೆಸ್ ನಾಯಕರು ಹೇಳಿದ್ದರು. ಈಗ ತಮ್ಮ ವಿರುದ್ಧ ತನಿಖೆಗೆ ಅನುಮತಿ ನೀಡಿದಾಕ್ಷಣ ರಾಜ್ಯಪಾಲರು ಸಂವಿಧಾನ ಮೀರಿದ್ದಾರೆ ಎನ್ನುತ್ತಿದ್ದಾರೆ. ಇದು ಕಾಂಗ್ರೆಸ್ಸಿಗರ ಅವಕಾಶವಾದಿತನ ಹಾಗೂ ಸಮಯ ಸಾಧಕ ಪ್ರವೃತ್ತಿಯನ್ನು ತೋರುತ್ತದೆ ಎಂದು ಸಚಿವ ಜೋಶಿ ಕಾಂಗ್ರೆಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.
2011ರಲ್ಲಿ ಗೋಧ್ರಾ ಘಟನೆ ಆದಾಗ ಸಿಎಂ ಸಿದ್ದರಾಮಯ್ಯ ಏಕೆ ಮೋದಿ ಅವರ ವಿರುದ್ಧ ಧ್ವನಿ ಎತ್ತಲಿಲ್ಲ? ಎಂದು ಪ್ರಶ್ನಿಸಿದ ಜೋಶಿ, ಆಗ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಅದರಲ್ಲಿ ಸಿಲುಕಿಸುವ ಪ್ರಯತ್ನ ಮಾಡಿದ್ದು ಕಾಂಗ್ರೆಸ್ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸರ್ವರನ್ನೂ ಸಾಮಾಜಿಕ ನ್ಯಾಯದಲ್ಲೇ ಕಾಣುತ್ತಿದ್ದಾರೆ. ಗೋದ್ರಾ, ಗೋದೊ್ರೕತ್ತರ ಘಟನೆಗಳಲ್ಲಿ ಮೋದಿ ಅವರ ಪಾತ್ರವೇ ಇಲ್ಲವೆಂದು ಜೋಶಿ ಸ್ಪಷ್ಟಪಡಿಸಿದರು.